ಸ್ತಬ್ಧ ಚಿತ್ರಕ್ಕೆ ನಿರಾಕರಣೆ ಖಂಡನೀಯ
ದೆಹಲಿಯಲ್ಲಿ ಜನವರಿ ೨೬ರಂದು ನಡೆಲಿರುವ ಗಣರಾಜ್ಯೊತ್ಸವ ಪರೇಡ್‌ಗೆ ಸ್ತಬ್ಧಚಿತ್ರಗಳ ಆಯ್ಕೆ ಪ್ರಕ್ರಿಯೆಯಲ್ಲಿ ಐದನೇ ಸುತ್ತಿನಆಯ್ಕೆ ವೇಳೆ ಕರ್ನಾಟಕದ ಸ್ತಬ್ಧಚಿತ್ರ ಆಯ್ಕೆಯಾಗದೆ ಹೊರಗುಳಿದಿದೆ.
ಕಳೆದ 13 ವರ್ಷಗಳಿಂದ ಕರ್ನಾಟಕದ ಸ್ತಬ್ಧಚಿತ್ರ ನಿರಂತರವಾಗಿ ಗಣರಾಜ್ಯೊತ್ಸವ ಪರೇಡ್‌ಗೆ ಆಯ್ಕೆಯಾಗಿದ್ದು, ಈ ಅಪರೂಪದ ಸಾಧನೆ ಮಾಡಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ. 2022ರ ಗಣರಾಜ್ಯೊತ್ಸವ ಪರೇಡ್‌ನಲ್ಲಿ ಪ್ರದರ್ಶನ ಗೊಂಡಿದ್ದ ಕರ್ನಾಟಕದ ‘ಸಾಂಪ್ರದಾಯಿಕ ಕಸೂತಿಯ ತೊಟ್ಟಿಲು’ ಸ್ತಬ್ಧಚಿತ್ರವು ಎರಡನೇ ಅತ್ಯುತ್ತಮ ಪ್ರಶಸ್ತಿಗೂ ಭಾಜನ ವಾಗಿದ್ದು ರಾಜ್ಯದ ಹಿರಿಮೆ. ಈ ಬಾರಿಯೂ ‘ನಾರಿಶಕ್ತಿ’ ವಿಷಯ ವನ್ನಿಟ್ಟುಕೊಂಡು ಪ್ರದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸೂಲಗಿತ್ತಿ ನರಸಮ್ಮ, ಸಾಲುಮರದ ತಿಮ್ಮಕ್ಕ ಮತ್ತು ತುಳಸಿ ಗೌಡ ಹಾಲಕ್ಕಿ ಅವರ ಸಾಧನೆಗಳನ್ನು ಬಿಂಬಿಸುವ ಸ್ತಬ್ಥಚಿತ್ರ ಪ್ರದರ್ಶಿಸಲು ಅಂತಿಮಗೊಳಿಸಲಾಗಿತ್ತು.
ಆದರೆ ಇದ್ದಕ್ಕಿದ್ದಂತೆ ಕರ್ನಾಟಕದ ಸ್ಥಬ್ದಚಿತ್ರಕ್ಕೆ ಅವಕಾಶ ನಿರಾಕರಿಸಿಸಲಾಗಿದೆ. ಸತತ ಹದಿಮೂರು ವರ್ಷಗಳ ಕಾಲ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಸ್ಥಬ್ದ ಚಿತ್ರಗಳು ನಮ್ಮ ಇತಿಹಾಸ ಸಂಸ್ಕೃತಿ ಮತ್ತು ಪ್ರಕೃತಿಯ ಹಿರಿಮೆಗಳನ್ನು ಪ್ರದರ್ಶಿಸಿ ಇಡೀ ದೇಶದ ಶ್ಲಾಘನೆಗೆ ಪಾತ್ರವಾಗಿದೆ. ಇದೇ ಮೊದಲ ಬಾರಿ ಕೇಂದ್ರ ಸರಕಾರ ಈ ಗೌರವಕ್ಕೆ ಧಕ್ಕೆ ತಂದಿದೆ. ನಾಡು, ನುಡಿ ವಿಚಾರದಲ್ಲಿ ಮೊದಲಿನಿಂದಲೂ ಕರ್ನಾಟಕಕ್ಕೆ ಅನ್ಯಾಯ ವಾಗುತ್ತಲೇ ಬಂದಿದೆ.
ಈ ಹಿಂದೆಯೂ ಹಿಂದಿ ಹೇರಿಕೆ ಮೂಲಕ ಸದಾ ಕನ್ನಡದ ಮೇಲೆ ಪ್ರಹಾರ ನಡೆಸುತ್ತಲೇ ಬಂದಿರುವ ಕೇಂದ್ರ ಸರಕಾರ, ಅವಕಾಶ ಸಿಕ್ಕಾಗಲೆಲ್ಲ ಕನ್ನಡದ ಬೇರುಗಳಿಗೆ ಕೊಡಲಿಪೆಟ್ಟು ಕೊಡುತ್ತಿದೆ. ನೆಲ, ಜಲ, ಭಾಷೆ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯದ ಸರಣಿಯನ್ನೇ ಮುಂದುವರಿಸಿದೆ. ಇಂತಹ ಘಟನೆಗಳು ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕೆ ಮಾಡುತ್ತಿರುವ ಅವಮಾನ.  ನ್ನಡಿಗರೆಲ್ಲರೂ ಇದನ್ನು ಒಕ್ಕೊರಲಿನಿಂದ ಖಂಡಿಸಬೇಕಿದೆ.
ರಾಜ್ಯ ಬಿಜೆಪಿ ನಾಯಕರು, ಎಲ್ಲ ಸಂಸದರು ರಾಜ್ಯದ ಘನತೆ-ಗೌರವಗಳನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರದ ನಾಯಕರ ಮುಲಾಜಿಗೆ ಬೀಳದೆ ಕೇಂದ್ರದ ಮೇಲೆ ಒತ್ತಡ ತಂದು ಈ ಬಾರಿಯೂ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ಸಿಗುವಂತೆ ನೋಡಿಕೊಳ್ಳ ಬೇಕಿದೆ. - 