ಹೆಚ್ಚುತ್ತಿರುವ ಹೃದಯಾಘಾತ: ಯುವಜನರಲ್ಲಿ ಜಾಗೃತಿ ಅಗತ್ಯ
ಉತ್ತರ ಪ್ರದೇಶದ ಕಾನ್ಪುರದಲ್ಲಿ ಕಳೆದ ಒಂದೇ ವಾರದಲ್ಲಿ ೯೮ ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಲಕ್ಷ್ಮೀಪತ್ಸಿಂಘಾನಿಯಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ತಿಳಿಸಿದೆ.
ಒಂದು ವಾರದಲ್ಲಿ ೭೨೩ ಹೃದ್ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ೯೮ ಜನರು ಮೃತಪಟ್ಟಿದ್ದಾರೆ. ಇದರಲ್ಲಿ ೪೪ ಜನರು ಆಸ್ಪತ್ರೆಯಲ್ಲಿ ಮೃತಪಟ್ಟರೆ, ೫೪ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಮುಂಚೆಯೇ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.
ಪ್ರಸ್ತುತ ಉತ್ತರ ಭಾರತದ ಅನೇಕ ಕಡೆ ವಿಪರೀತ ಚಳಿಗಾಳಿ ಬೀಸುತ್ತಿರುವ ಪರಿಣಾಮ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ ಎನ್ನಲಾಗಿದ್ದರೂ ಬದಲಾದ ಜೀವನಶೈಲಿ, ಕೆಲಸದ ಒತ್ತಡ, ವ್ಯಾಯಾಮದ ಕೊರತೆಯಿಂದಾಗಿಯೂ ಹೃದಯಾಘಾತ ಪ್ರಕರಣ ಗಳು ಹೆಚ್ಚುತ್ತಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಇಂದು ನಮ್ಮಲ್ಲಿ ಬಹುತೇಕ ಜನರು ಆಫೀಸಿನಲ್ಲಿ ಕುಳಿತೇ ಕೆಲಸ ಮಾಡುವವರು. ಅವರಿಗೆ ದೈಹಿಕ ವ್ಯಾಯಾಮದಲ್ಲಿ ಆಸಕ್ತಿ ಇಲ್ಲ. ಇದರ ಪರಿಣಾಮವಾಗಿ ಬೊಜ್ಜು ಸಾಮಾನ್ಯವಾಗಿ ಬರುತ್ತದೆ. ಬೊಜ್ಜು ಬಂದರೆ ಆರೋಗ್ಯ ಸಮಸ್ಯೆಗಳು ಸಾಮಾನ್ಯ. ದೇಹ ದಲ್ಲಿ ಹೆಚ್ಚಾಗುವ ಸಂಗ್ರಹವಾದ ಕೊಬ್ಬು ಖರ್ಚಾಗದೇ ರಕ್ತನಾಳಗಳಲ್ಲಿ ಸೇರಿ ಸುಗಮ ರಕ್ತ ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ.
ಆದ್ದರಿಂದ ಪ್ರತಿದಿನ ವ್ಯಾಯಾಮ ಮಾಡಲು ಆಗದಿದ್ದಲ್ಲಿ ಅರ್ಧ ಗಂಟೆ ಕಡ್ಡಾಯವಾಗಿ ವಾಕಿಂಗ್ ಮಾಡಲೇಬೇಕಿದೆ. ಧೂಮ ಪಾನ ಚಟವಿರುವವರಿಗೆ ಹೃದಯಾಘಾತ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಈ ಅಪಾಯಕಾರಿ ಚಟದಿಂದ ದೂರವಿರಬೇಕಿದೆ. ಇಂದು ಯುವ ಸಮುದಾಯದ ಆರೋಗ್ಯಕ್ಕೆ ದೊಡ್ಡ ಶತ್ರುವಾಗಿರುವುದು ಮಾನಸಿಕ ಒತ್ತಡ. ಈ ಮಾನಸಿಕ ಒತ್ತಡವನ್ನು ಪರಿಹರಿಸಲು ನಿಯಮಿತ ವ್ಯಾಯಾಮ, ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಸಹಾಯಕವಾಗಲಿದೆ.
ಭಾರತದಲ್ಲಿ ಹೃದಯಾಘಾತದ ಕುರಿತು ಜನರಲ್ಲಿ ತಿಳಿವಳಿಕೆ ಇಲ್ಲ ಎಂದು ಸಂಶೋಧನೆಯೊಂದು ಹೇಳಿದೆ. ೨೦ ರಿಂದ ೪೫ ವರ್ಷಗಳವರೆಗಿನ ಜನರಲ್ಲಿ ಈ ಬಗ್ಗೆ ಯಾವ ರೀತಿಯ ತಿಳಿವಳಿಕೆ ಇಲ್ಲ ಎನ್ನಲಾಗಿದೆ. ಮುಕ್ಕಾಲು ಪಾಲು ಜನರು ಸಮಸ್ಯೆಯು ಕೊನೆ ಹಂತಕ್ಕೆ ಹೋಗಿ ಗಂಭೀರ ರೂಪ ತಾಳುವವರೆಗೆ ವೈದ್ಯರನ್ನು ಕಾಣುವುದಿಲ್ಲ. ಆದ್ದರಿಂದ ಹೃದಯಾಘಾತದ ಕುರಿತು ಜನರಲ್ಲಿ ತುರ್ತಾಗಿ ಅರಿವು ಮೂಡಿಸಬೇಕಿದೆ.
 - 