ಸ್ಯಾಂಟ್ರೋ ಪ್ರಕರಣ: ಸತ್ಯ ಹೊರಬರಲಿ
ಕಳೆದ ಕೆಲವು ದಿನಗಳಿಂದ ರಾಜ್ಯದ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ ಹೆಸರು ಸ್ಯಾಂಟ್ರೋ ರವಿ ಎಂಬ ಅಪರಾಧ ಹಿನ್ನೆಲೆಯ ವ್ಯಕ್ತಿಯದ್ದು. ರಾಜಕಾರಣಿಗಳು, ಪೊಲೀಸರು, ಆಯಕಟ್ಟಿನ ಜಾಗದಲ್ಲಿರುವ ಸರಕಾರಿ ಅಧಿಕಾರಿಗಳ ಜತೆಗೆ ನಿಕಟನಂಟು ಹೊಂದಿರುವ ಈತ ಮಾಡಬಾರದ ಅವ್ಯವಹಾರಗಳನ್ನು ಮಾಡಲು ಮತ್ತು ಅದನ್ನು ಮುಚ್ಚಿಹಾಕಲು ಈ ನಂಟಿನ ಅಂಟನ್ನೇ ಬಳಸಿಕೊಳ್ಳುತ್ತಿದ್ದ.
ಚುನಾವಣೆ ಸಮೀಪಿಸುತ್ತಿದ್ದಂತೆ ಈತನ ಹೆಸರು ಮುನ್ನೆಲೆಗೆ ಬಂದಿದ್ದು, ನಾನಾ ರಾಜಕೀಯ ಪಕ್ಷಗಳು, ಮುಖಂಡರು ಪರಸ್ಪರ ಕೆಸರು ಎರಚಾಟಕ್ಕೆ ಈತನನ್ನು ದಾಳವಾಗಿ ಬಳಸಿ ಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ ಎಲ್ಲ ರಾಜಕೀಯ ಪಕ್ಷಗಳಲ್ಲೂ ಈತನ ಜತೆ ನಂಟು ಹೊಂದಿದವರಿದ್ದಾರೆ. ಹಾಗಾಗಿಯೇ ಈತನ ಅವ್ಯವಹಾರಗಳ ನೈಜ ತನಿಖೆ ಯಾರಿಗೂ ಬೇಕಾಗಿಲ್ಲ. ಒಂದೊಮ್ಮೆ ತನಿಖೆ ನಡೆದು ಎಲ್ಲರ ಬಣ್ಣ ಬಯಲಾದರೆ ಎಂಬ ಒಳಗಿನ ಆತಂಕ ಇದ್ದೇ ಇದೆ.
ಆದರೂ ರಾಜ್ಯದ ಜನತೆಗೆ ವಾಸ್ತವಾಂಶಗಳನ್ನು ತಿಳಿಯುವ ಹಕ್ಕಿರುವುದರಿಂದ ಸ್ಯಾಂಟ್ರೋ ರವಿ ಎಂಬಾತನ ಕರ್ಮಕಾಂಡಗಳು ಮತ್ತು ಅದರ ಫಲಾನುಭವಿಗಳ ಹೆಸರುಗಳು ಬಹಿರಂಗ ವಾಗಬೇಕು. ಜತೆಗೆ ನಡೆದಿರುವ ಅವ್ಯವಹಾರಗಳು ಮತ್ತು ಅಪರಾಧ ಕೃತ್ಯಗಳಿಗೆ ಶಿಕ್ಷೆಯೂ ಆಗಲೇಬೇಕು. ಈ ವಿಚಾರದಲ್ಲಿ ರಾಜಕೀಯದ ಕಾವು ಏರುತ್ತಿದ್ದಂತೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟನೆ ನೀಡಿದ್ದಾರೆ.
ಈಗಾಗಲೇ ಆತನ ವಿಚಾರದಲ್ಲಿ ತನಿಖೆ ನಡೆದಿದ್ದು, ಆತನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದಿದ್ದಾರೆ. ಈ ಸ್ಯಾಂಟ್ರೋ ರವಿ ಎಂಬ ಅಡ್ಡಕಸುಬಿಯ ರಾಜಕೀಯ ನಂಟು ಇಂದು ನಿನ್ನೆಯದಲ್ಲ. ಸರಿಸುಮಾರು ಎರಡೂವರೆ ದಶಕಗಳಿಂದ ಈತ ಆಯಕಟ್ಟಿನ ಅಧಿಕಾರಸ್ಥ ರಾಜಕಾರಣಿಗಳ ಜತೆ ನಂಟು ಕುದುರಿಸಿಕೊಂಡು ತನ್ನ ಅವ್ಯವಹಾರಗಳನ್ನು  ಮುಂದುವರಿಸು ತ್ತಲೇ ಬಂದಿದ್ದಾನೆ. ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಸಿಡಿಸಿದ ಬಾಂಬ್‌ನಿಂದ ಈ ಸ್ಯಾಂಟ್ರೋ ರವಿಯ ಹೆಸರು ಮುನ್ನೆಲೆಗೆ ಬಂದಿದೆ.
ಜೆಡಿಎಸ್‌ಗೆ ಕೈಕೊಟ್ಟು ಬಿಜೆಪಿ ಸೇರಿದ್ದ ಶಾಸಕರು ಮುಂಬಯಿಯಲ್ಲಿ ಬೀಡುಬಿಟ್ಟಿದ್ದ ಅವಧಿಯಲ್ಲಿ ಅವರಿಗೆ ಈ ಸ್ಯಾಂಟ್ರೋ ರವಿ ಕರೆವೆಣ್ಣುಗಳನ್ನು ಪೂರೈಸಿದ್ದ ಎಂಬ ಎಚ್‌ಡಿಕೆ ಆರೋಪದಿಂದ ಹೊತ್ತಿಕೊಂಡ ಕಿಡಿ ನಾನಾ ಸ್ವರೂಪಗಳನ್ನು ಪಡೆದು ಆತನ ಜತೆ ನಂಟಿರುವವರಿಗೆಲ್ಲ ಬೇಗುದಿ ಸೃಷ್ಟಿಸಿದೆ. ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಿ ಗೊಂದಲಗಳನ್ನು ಬಗೆಹರಿಸುವುದು ಸರಕಾರದ ಕರ್ತವ್ಯವೇ ಹೌದು. - 
