ಮಾದಕ ವಸ್ತು ಮಾಫಿಯಾ ಮಟ್ಟಹಾಕಿ
ರಾಜ್ಯಾದ್ಯಂತ ಮಾದಕ ಮಾಫಿಯಾ ವಿಸ್ತರಿಸಿಕೊಳ್ಳುತ್ತಿರುವುದು ಸಾರ್ವ ಜನಿಕರಲ್ಲಿ ಆತಂಕ ಮೂಡಿಸಿದೆ. ರಾಜ್ಯದಲ್ಲಿ ಅತಿ ಹೆಚ್ಚು ಮಾದಕ ವಸ್ತು ಮಾರಾಟವಾಗುತ್ತಿರುವ ಪ್ರದೇಶಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಮೊಟ್ಟ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಅದೇ ರೀತಿ ಶೈಕ್ಷಣಿಕ ಹಾಗೂ ಪ್ರವಾಸಿ ತಾಣವಾಗಿರುವ ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಅನಂತರದ ಸ್ಥಾನ ಪಡೆದಿವೆ ಎಂದು ಕೆಲ ಸಮೀಕ್ಷೆಗಳ ವರದಿಗಳಲ್ಲಿ ಉಲ್ಲೇಖವಾಗಿದೆ. ಇತ್ತೀಚೆಗೆ ಮಂಗಳೂರು ನಗರದ ವೈದ್ಯಕೀಯ ಕಾಲೇಜೊಂದರ ಪ್ರಾಂಗಣಗಳಲ್ಲಿ ಮಾದಕ ವಸ್ತು ಮಾರಾಟ ಮತ್ತು ಸೇವನೆ ಮಾಡುತ್ತಿದ್ದರು ಎಂಬ ಕಾರಣಕ್ಕೆ ಈವರೆಗೂ ೧೫ ಜನರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇಬ್ಬರು ವೈದ್ಯರು, ಏಳು ವೈದ್ಯಧವಿದ್ಯಾರ್ಥಿಗಳೂ ಇರುವುದು ಆತಂಕಕಾರಿ.
ಮಾದಕ ವಸ್ತುಗಳನ್ನು ಮಾರಾಟ ಮಾಡುವವರಲ್ಲಿ ಹೆಚ್ಚಾಗಿ ವಿದ್ಯಾರ್ಥಿ ಗಳು, ಐಟಿ-ಬಿಟಿ ಉದ್ಯೋಗಸ್ಥರು, ಸ್ಥಳೀಯ ಆಟೋ, ಟ್ಯಾಕ್ಸಿ ಚಾಲಕರು ಹಾಗೂ ವಿದೇಶಿ ಪ್ರವಾಸಿಗರೇ ಹೆಚ್ಚಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿಶ್ವದ ವಿವಿಧ ದೇಶಗಳಿಂದ ಹಾಗೂ ದೇಶದ ವಿವಿಧ ರಾಜ್ಯಗಳಿಂದ ವಿದ್ಯಾಭ್ಯಾಸಕ್ಕೆಂದು ಇಲ್ಲಿಗೆ ಬರುವ ವಿದ್ಯಾರ್ಥಿಗಳು ಈ ದುಶ್ಚಟಕ್ಕೆ ಬೀಳುತ್ತಿರುವುದು ದುರದೃಷ್ಟಕರ ಸಂಗತಿ. ಕೆಲ ಸ್ವಯಂ ಸೇವಾ ಸಂಸ್ಥೆಗಳು ನಡೆಸಿರುವ ಸಮೀಕ್ಷೆ ಪ್ರಕಾರ, ರಾಜ್ಯದ ಜನಸಂಖ್ಯೆ ಶೇ.೨೦ರಷ್ಟು ಮಂದಿ ಮಾದಕ ವಸ್ತು ಜಾಲಕ್ಕೆ ಸಿಲುಕಿದ್ದು, ಇದರಲ್ಲಿ ಅರ್ಧದಷ್ಟು ಯುವಕರು.
ಇದರೊಳಗೆ ಶೇ.೧೫ರಷ್ಟು ಶಿಕ್ಷಣ ಪಡೆದ ಯುವ ಪೀಳಿಗೆ ಮಾದಕ ವಸ್ತು ಸೇವನೆಗೆ ಬಲಿಯಾಗಿದೆ ಎನ್ನಲಾಗಿದೆ. ಈ ಜಾಲಕ್ಕೆ ಅಂತಾರಾಷ್ಟ್ರೀಯ ಮತ್ತು ವಾಣಿಜ್ಯ ನಂಟು ಇರುವ ಕಾರಣ ಇದುವರೆಗೂ ಶೇ.೨ರಷ್ಟನ್ನೂ ತಡೆಗಟ್ಟಲು ಆಗಿಲ್ಲ ಎನ್ನಲಾಗಿದೆ. ಆದ್ದರಿಂದ ಈ ದಂದೆ ಮಟ್ಟ ಹಾಕಲು ಪೊಲೀಸ್ ಇಲಾಖೆಯು ವಿಶೇಷ ತಂಡವನ್ನು ರಚನೆ ಮಾಡಿ ಈ ಜಾಲದ ಹಿಂದೆ ಇರುವ ಎಲ್ಲರನ್ನೂ ಪತ್ತೆ ಹಚ್ಚಿ ಕಾನೂನಿನಡಿ ಶಿಕ್ಷೆಗೆ ಒಳಪಡಿಸಬೇಕಿದೆ. ಮಾದಕ ಪದಾರ್ಥ ಸೇವನೆಯ ದುಶ್ಚಟಕ್ಕೆ ಬಲಿಯಾಗದಂತೆವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಬೇಕಿದೆ.