ಗೋವಾ ಬೆದರಿಕೆಗೆ ಮಣಿಯದಿರಿ
ಕಳಸಾ-ಬಂಡೂರಿ ನಾಲಾ ಯೋಜನೆಯ ಸಮಗ್ರ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿರುವ ವಿರುದ್ಧ ಕೇಂದ್ರದ ಬಳಿಗೆ ಸರ್ವಪಕ್ಷ ನಿಯೋಗ ಹೋಗಿ ಒತ್ತಡ ಹೇರುವುದು ಮತ್ತು ಸುಪ್ರೀಂಕೋರ್ಟ್‌ನಲ್ಲಿ ಅನುಮತಿ ಆದೇಶ ಪ್ರಶ್ನಿಸುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದು, ಆ ಮೂಲಕ ಕಳಸಾ-ಬಂಡೂರಿ ವಿಚಾರವಾಗಿಗೋವಾ ಸರಕಾರ ಮತ್ತೆ ತಕರಾರು ಶುರು ಮಾಡಿದೆ.
ಈ ಹಿಂದೆಯೂ ಅಂದರೆ ೨೦೧೮ರ ಆಗ ೧೪ರಂದು ಗೋವಾ ಸರಕಾರ ಕೋರ್ಟ್‌ಗೆ ಹೋಗಿತ್ತು. ನಾಲ್ಕು ತಿಂಗಳ ವಿಚಾರಣೆ ನಡೆಸಿದ ಬಳಿಕ ೨೦೧೯ರ -ಬ್ರವರಿ ೨೦ರಂದು ನ್ಯಾಯಾಲಯವು ಪ್ರಕರಣವನ್ನು ತೆರವುಗೊಳಿಸಿತ್ತು ಮತ್ತು ಅದೇ ಫೆಬ್ರವರಿ ೨೭ರಂದು ಗೆಜೆಟ್ ನೋಟಿಫಿಕೇಷನ್ ಕೂಡ ಹೊರಡಿಸಿತ್ತು. ಆಗ ಗೃಹಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಅವರೇ ಯೋಜನೆಗೆ ಅನುಮತಿ ಕೋರಿ ಕೇಂದ್ರ ಅರಣ್ಯ ಸಚಿವಾಲಯ ಹಾಗೂ ಪರಿಸರ ಸಚಿವಾಲಯಕ್ಕೆ ಅರ್ಜಿ ನೀಡಿದ್ದರು.
ಇದಕ್ಕೆ ೨೦೧೯ರ ಡಿ.೨೪ರಂದು ಪ್ರತಿಕ್ರಿಯೆ ನೀಡಿದ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವ ಪ್ರಕಾಶ ಜಾವಡೇಕರ, ಈ ಯೋಜನೆಗೆ ಅರಣ್ಯ ಇಲಾಖೆಯ ಒಪ್ಪಿಗೆ ಇದೆ. ಪರಿಸರ ಸಚಿವಾಲಯದ ಒಪ್ಪಿಗೆ ಅವಶ್ಯವಿಲ್ಲ. ನೀವು ಕೆಲಸ ಆರಂಭಿಸಬಹುದು ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೂ ಗೋವಾ ಸರಕಾರ ಮತ್ತೊಮ್ಮೆ ಸುಪ್ರೀಂಕೋರ್ಟ್‌ಗೆ ಹೋಗುವ ಬೆದರಿಕೆ ಒಡ್ಡಿದೆ.
ನೆಲ-ಜಲ ವಿಚಾರದಲ್ಲಿ ಕನ್ನಡಿಗರು ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುತ್ತ, ಆಯೋಗದ ವರದಿಗಳನ್ನು ಒಪ್ಪಿಕೊಳ್ಳುತ್ತ ಬಂದಿದ್ದಾರೆ. ಆದರೆ, ನೆರೆರಾಜ್ಯಗಳು ಪದೇ ಪದೆ ತಕರಾರು ಮಾಡುತ್ತಲೇ ಬಂದಿವೆ. ಮಹಾರಾಷ್ಟ್ರವು ಮಹಾಜನ್ ಆಯೋ ಗದ ವರದಿ ಧಿಕ್ಕರಿಸಿದರೆ, ಗೋವಾ ಸರಕಾರ ನ್ಯಾಯಾಽಕರಣದ ನಿರ್ಧಾರವನ್ನೇ ಪ್ರಶ್ನಿಸುತ್ತಿದೆ. ಆದ್ದರಿಂದ ರಾಜ್ಯದ ಸಂಸದರೆಲ್ಲರೂ ಒಗ್ಗಟ್ಟಿನಿಂದ ಕೇಂದ್ರಕ್ಕೆ ನಿಯೋಗ ಹೋಗಿ ಗೋವಾ ಸರಕಾರದ ಮನವಿಯನ್ನು ಧಿಕ್ಕರಿಸುವಂತೆ ಒತ್ತಡ ಹೇರಬೇಕಿದೆ.
ಇಂಥ ಸಂದರ್ಭದಲ್ಲಿ ಕೇಂದ್ರ ಸರಕಾರವು ಕರ್ನಾಟಕದ ಪರ ಗಟ್ಟಿ ನಿಲುವು ತಾಳಬೇಕಿದೆ. ಹುಬ್ಬಳ್ಳಿ-ಧಾರವಾಡ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿಕೆಗೆ ರಾಜ್ಯ ಬಿಜೆಪಿ ಸರಕಾರ ಟೊಂಕಕಟ್ಟಿ ನಿಲ್ಲಬೇಕಿದೆ.