ನಮ್ಮ ಕ್ಲಿನಿಕ್: ಆರಂಭದಲ್ಲೇ ಯೋಜನೆ ವಿಫಲವಾಗದಿರಲಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಂಗಳವಾರ ಏಕಕಾಲಕ್ಕೆ ೧೦೮ ನಮ್ಮ ಕ್ಲಿನಿಕ್‌ಗಳು ಉದ್ಘಾಟನೆಗೊಂಡಿದ್ದುಶ್ಲಾಘನೀಯ. ಈ ಕ್ಲಿನಿಕ್‌ಗಳಲ್ಲಿ ಬಡ, ಮಧ್ಯಮ ಮತ್ತು ಕೊಳೆಗೇರಿ ವಾಸಿಗಳಿಗೆ ಒಂದೇ ಸೂರಿನಡಿ ಎಲ್ಲ ರೀತಿಯ ಆರೋಗ್ಯ ಸೇವೆಗಳುಸಿಗಲಿರುವುದು ಸಂತೋಷದ ವಿಚಾರ. ಆದರೆ ಕೆಲವು ನಮ್ಮ ಕ್ಲಿನಿಕ್‌ಗಳಲ್ಲಿ ಹಾಸಿಗೆಯೇ ಇಲ್ಲದ ಮಂಚ, ನೆಪ ಮಾತ್ರಕ್ಕೆ ನಾಲ್ಕೈದು ಔಷಧ, ಮುರಿದು ಹೋದ ಕುರ್ಚಿ-ಮೇಜು, ನೈರ್ಮಲ್ಯ ಕಾಪಾಡದ ಶೌಚಾಲಯಗಳು ಇವೆ ಎಂಬ ದೂರುಗಳು ಕೇಳಿಬರುತ್ತಿವೆ.
ಯೋಜನೆಯ ಆರಂಭದಲ್ಲೇ ಈ ರೀತಿ ಅಪಸ್ವರಗಳು ಕೇಳಿಬರುತ್ತಿರುವುದು ಸರಿಯಲ್ಲ. ಕೂಡಲೇ ಆರೋಗ್ಯಾಧಿಕಾರಿಗಳು ಎಲ್ಲ ನಮ್ಮ ಕ್ಲಿನಿಕ್‌ಗಳಲ್ಲಿ ಸುಸಜ್ಜಿತ ಸೌಲಭ್ಯ ಒದಗಿಸುವ ಮೂಲಕ ಸರಕಾರದ ಮಹತ್ವದ ಯೋಜನೆಯೊಂದು ಸಫಲವಾಗುವಂತೆ ನೋಡಿಕೊಳ್ಳಬೇಕು. ಅಲ್ಲದೆ, ನಮ್ಮ ಕ್ಲಿನಿಕ್‌ಗಳ ಸೇವಾವಧಿಯ ವೇಳೆಯು ಬೆಳಗ್ಗೆ ೯ರಿಂದ ಸಂಜೆ ೪ ಗಂಟೆಯವರೆಗೆ ಇದೆ. ಈ ಕುರಿತೂ ಸಾರ್ವಜನಿಕರಲ್ಲಿ ದೂರುಗಳಿವೆ. ನಗರದಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರು ಅನಾರೋಗ್ಯವಿದ್ದರೂ ಕೆಲವೊಮ್ಮೆ ರಜೆ ಸಿಗದ ಕಾರಣಕ್ಕೆ ಅಥವಾ ವೇತನ ಕಡಿತದ ಭೀತಿಯಿಂದ ಕೆಲಸಕ್ಕೆ ತೆರಳಿ, ಸಂಜೆ ವಾಪಸ್ ಬಂದ ನಂತರ ಆರೋಗ್ಯ ತಪಾಸಣೆಗೆ ಹೋಗುತ್ತಾರೆ.
ಹೀಗಿರುವಾಗ ನಮ್ಮ ಕ್ಲಿನಿಕ್‌ಗಳು ಈಗ ನಿಗದಿಯಾಗಿರುವಂತೆ ಬೆಳಗ್ಗೆ ೯ರಿಂದ ಸಂಜೆ ೪.೩೦ ರವರೆಗಷ್ಟೇ ಕಾರ್ಯನಿರ್ವಹಿಸಿದರೆ, ಈ ವರ್ಗದ ಜನರು ಈ ಯೋಜನೆಯಿಂದ ವಂಚಿತರಾಗು ತ್ತಾರೆ. ಮತ್ತೆ ಅವರು ಹೆಚ್ಚು ಹಣ ಖರ್ಚು ಮಾಡಿ ಖಾಸಗಿ ಆಸ್ಪತ್ರೆ ಗಳನ್ನೇ ಆಶ್ರಯಿಸಬೇಕಾಗುತ್ತದೆ ಅಥವಾ ಹಣವಿಲ್ಲದಿದ್ದರೆ ಅನಾರೋಗ್ಯದಿಂದ ನರಳಬೇಕಾಗುತ್ತದೆ. ಹೀಗಾಗಿ, ಪಾಳಿ ವ್ಯವಸ್ಥೆಯನ್ನು ಅಳವಡಿಸಿ ಕೊಂಡು ನಮ್ಮ ಕ್ಲಿನಿಕ್‌ನ ಸಮಗ್ರ ಸೇವೆಯನ್ನು ರಾತ್ರಿ ೮ರವರೆಗೆ ವಿಸ್ತರಿಸ ಬೇಕು.
ನಮ್ಮ ಕ್ಲಿನಿಕ್‌ಗಳಲ್ಲಿ ನೆಗಡಿ, ಕೆಮ್ಮು, ರಕ್ತದೊತ್ತಡ, ಮಧುಮೇಹ ಸೇರಿ ಹಲವು ರೀತಿಯ ಕಾಯಿಲೆಗಳ ತಪಾಸಣೆ ಮಾಡುವುದರ ಜತೆಗೆ ಔಷಧ ಗಳನ್ನೂ ವಿತರಿಸಲಾಗುವುದು. ಇಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಟೆಲಿಮೆಡಿಸಿನ್ ಸೌಲಭ್ಯವನ್ನು ಒದಗಿಸಲಾಗುವುದು. ಪರಿಣಿತರ ಜತೆಗೆ ಟೆಲಿ ಸಂವಾದ ನಡೆಸಿ ಉಪಚಾರ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಮುಖ್ಯಮಂತ್ರಿಗಳು ಹೇಳಿದಂತೆ ಈ ಎಲ್ಲ ಆರೋಗ್ಯ ಸೇವೆಗಳೂ ನಮ್ಮ ಕ್ಲಿನಿಕ್‌ಗಳಲ್ಲಿ ಸಿಗುವಂತಾಗಬೇಕು