ರಾಜ್ಯದಲ್ಲಿ ಜಾತಿ ರಾಜಕಾರಣ ತಿರಸ್ಕರಿಸುವ ಅಗತ್ಯವಿದೆ
ಕರ್ನಾಟಕ ಚುನಾವಣೆಗೆ ಇನ್ನೆರಡು ತಿಂಗಳಷ್ಟೇ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಮೂರೂ ಪ್ರಮುಖ ಪಕ್ಷಗಳ ಮುಖಂಡರು ಅನಧಿಕೃತ ಪ್ರಚಾರ ಆರಂಭಿಸಿದ್ದು, ನಾಯಕರ ನಡುವೆ ವಾಕ್ಸಮರ ಮಿತಿಮೀರುತ್ತಿದೆ. ಕೆಲವೆಡೆ ವೈಯಕ್ತಿಕ ವಾಗ್ದಾಳಿ, ಜಾತಿ ನಿಂದನೆಗಳೂ ಮೇಲುಗೈ ಪಡೆಯುತ್ತಿವೆ.
ಕಳೆದ ನಾಲ್ಕೈದು ದಿನಗಳಿಂದ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಇಂಥ ‘ಜಾತಿ’ ಸಂಘರ್ಷ ತೀವ್ರಗೊಂಡಿದೆ. ಇದಕ್ಕೆ ಕಾರಣ ವಾಗಿದ್ದು, ಜೆಡಿಎಸ್ ನಾಯಕ ಕುಮಾರ ಸ್ವಾಮಿ ಆಡಿದ ಮಾತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಟೀಕಿಸುವ ನೆಪದಲ್ಲಿ ಕುಮಾರಸ್ವಾಮಿ ಹೊಸ ಸಂಘರ್ಷವೊಂದಕ್ಕೆ ನಾಂದಿ ಹಾಡಿದ್ದಾರೆ. ಇದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಪ್ರಲ್ಹಾದ್ ಜೋಶಿ ಅವರು ಜೆಡಿಎಸ್ ಪಕ್ಷದೊಳಗಿನ ಕುಟುಂಬ ರಾಜಕಾರಣವನ್ನು ಟೀಕಿಸಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ ಕುಮಾರಸ್ವಾಮಿ, ‘ಮಹಾರಾಷ್ಟ್ರ ಮೂಲದ ಪಹ್ಲಾದ್ ಜೋಶಿ ಅವರು ಪೇಶ್ವೆಗಳ ವಂಶದವರು.
ಅವರನ್ನು ಮುಖ್ಯಮಂತ್ರಿ ಮಾಡಲು ಆರ್ ಎಸ್‌ಎಸ್ ಹಾಗೂ ಬಿಜೆಪಿ ಹುನ್ನಾರ ನಡೆಸಿವೆ. ಪೇಶ್ವೆಗಳು ಶಿವಾಜಿ ಮಹಾರಾಜರ ಸಾವಿಗೆ ಕಾರಣರಾದವರು. ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ ಗೋಡ್ಸೆ ಇದೇ ವಂಶಕ್ಕೆ ಸೇರಿದವನು. ಪೇಶ್ವೆಗಳು ಶೃಂಗೇರಿ ಮಠದ ಮೇಲೆ ದಾಳಿ ಮಾಡಿದರು. ಅವರು ನಮ್ಮ ದಕ್ಷಿಣ ಕರ್ನಾಟಕದ ಬ್ರಾಹ್ಮಣರಂತೆ ಅಲ್ಲ’ ಎಂದು ಹೇಳಿದ್ದು ಕಿಡಿ ಹಚ್ಚಿದೆ. ಹಿಂದೆ ಕುಮಾರಸ್ವಾಮಿಯವರ ರಾಜಕೀಯ ಲೆಕ್ಕಾಚಾರ ಗಳನ್ನು ಗುರುತಿಸದಿರಲಾಗದು.
ಸಹಜವಾಗಿ ಕುಮಾರಸ್ವಾಮಿ ಅವರ ಬ್ರಾಹ್ಮಣ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ.  ಇದರಿಂದ ಬಿಜೆಪಿ ನಾಯಕರು ಕೆಂಡಾಮಂಡಲರಾಗಿ ಎಚ್ಡಿಕೆ ಮೇಲೆ ಮುಗಿಬಿದ್ದಿದ್ದಾರೆ. ಇದೀಗ ಅವರು ಹೊಸ ವರಸೆ ತೋರಿದ್ದು, ಬಿಜೆಪಿಯ ಹಿರಿಯ ಲಿಂಗಾಯತ ನಾಯಕನ (ಯಡಿಯೂರಪ್ಪ) ರಾಜಕೀಯ ವೃತ್ತಿಜೀವನವನ್ನು ನಾನು ಉಳಿಸಿದ್ದೇನೆ ಎಂದಿ ದ್ದಾರೆ. ಎಂಬಲ್ಲಿಗೆ ಬಿಜೆಪಿಯ ವೋಟ್ ಬ್ಯಾಂಕ್ ಆದ ಲಿಂಗಾಯತರನ್ನು ಎತ್ತಿಕಟ್ಟುವ ತಂತ್ರ ಎಂಬುದರಲ್ಲಿ ಅನುಮಾನ ಇಲ್ಲ.ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಿ ಸ್ಥಾನದಿಂದ ಪದಚ್ಯುತಗೊಳಿಸಲು ಬಿಜೆಪಿಯಲ್ಲಿನ ‘ಪೇಶ್ವೆ ವಂಶಸ್ಥರು’ ಅನೇಕ ಬಾರಿ ಹುನ್ನಾರ ನಡೆಸಿದ್ದರು ಎನ್ನುವ ಮೂಲಕ ಜಾತ್ಯತೀತ ನಾಯಕನ ಜಾತಿ ರಾಜಕಾರಣ ಅನಾವರಣಗೊಂಡಿದೆ.
ಬಿಜೆಪಿ ಧರ್ಮಾಧಾರಿತ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸುವ ಜಾತ್ಯತೀತರು ಸಹ ಮಾಡುತ್ತಿರುವುದು ಜಾತಿ ರಾಜ ಕಾರಣವನ್ನೇ. ರಾಜಕೀಯ ಲಾಭಕ್ಕಾಗಿ ಜೆಡಿಎಸ್ ನಾಯಕ ಕುಮಾರಸ್ವಾಮಿ, ಯಡಿಯೂರಪ್ಪನವರ ಬಗ್ಗೆ ಅನುಕಂಪ ತೋರು ತ್ತಿದ್ದಾರೆ ಎಂಬುದರಲ್ಲಿ ಸತ್ಯ ಇಲ್ಲದಿಲ್ಲ. ಇಂಥ ಕೀಳು ರಾಜಕೀಯಕ್ಕೆ ಪ್ರಜ್ಞಾವಂತ ಮತದಾರರು ಬಲಿಯಾಗದೇ ನಿಜವಾದ ಅಭಿವೃದ್ಧಿಪರ ರಾಜಕಾರಣಿಗಳನ್ನು ಅಧಿಕಾರಕ್ಕೆ ತರುವ ಪ್ರೌಢಿಮೆ ಮೆರೆಯಬೇಕಿದೆ.
 - 