ನದಿಗಳ ಸ್ವಚ್ಛತೆ: ಜಾಗೃತಿ ಮೂಡಿಸಿ
ಭಾರತೀಯ ಪರಂಪರೆಯಲ್ಲಿ ನದಿಗಳಿಗೆ ಪರಮ ಪವಿತ್ರ ಸ್ಥಾನ ನೀಡಿದ್ದೇವೆ. ನದಿಗಳನ್ನು ಜೀವದಾಯಿನಿ, ಪ್ರಾಣಪೋಷಿಣಿ ಎಂದೆಲ್ಲ ಶ್ಲಾಘಿಸುತ್ತೇವೆ.ಆದರೆ ನಿಜವಾಗಿಯೂ ಭಾರತದಲ್ಲಿ, ಕರ್ನಾಟಕದಲ್ಲಿ ನದಿಗಳ ಪರಿಸ್ಥಿತಿ ನೋಡಿದರೆ ಶೋಚನೀ ಯವಾಗಿದೆ.
ಇತ್ತೀಚೆಗೆ ರಾಜ್ಯದ ನದಿಗಳ ಪರಿಸ್ಥಿತಿ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಆ ವರದಿ ಪ್ರಕಾರ, ‘ಕರ್ನಾಟಕದ ಪ್ರಮುಖ ೧೭ ನದಿಗಳ ನೀರು ಕುಡಿಯಲು ಯೋಗ್ಯವಿಲ್ಲದಷ್ಟು ಕಲುಷಿತಗೊಂಡಿವೆ. ಅವುಗಳಲ್ಲಿ ಕೆಲವಂತೂ ಸ್ನಾನಕ್ಕೂ ಅರ್ಹವಿಲ್ಲ. ಈ ವರ್ಷದ ಭಾರಿ ಮಳೆಗಾಲ, ಮಹಾಪ್ರವಾಹದ ನಂತರವೂ ಕೆಲವು ನದಿಗಳಲ್ಲಿ ಮಾಲಿನ್ಯದ ಮಟ್ಟ ಕಡಿಮೆ ಆಗುವ ಬದಲು ಹೆಚ್ಚೇ ಆಗಿದೆ’ ಎಂಬ ಅಂಶ ವರದಿಯಲ್ಲಿದೆ. ನಿಜಕ್ಕೂ ಈ ವರದಿ ಆತಂಕಕಾರಿ.
ದೇಶದಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಪ್ರಾರಂಭಿಸಿ ಏಳು ವರ್ಷಗಳೇ ಆದರೂ ದೇಶದ ಗಾಳಿ, ಮಣ್ಣು, ನೀರಿನ ಸ್ಥಿತಿಗತಿಯಲ್ಲಿ ಹೇಳಿಕೊಳ್ಳುವ ಸುಧಾರಣೆ ಆಗದಿರುವುದು ಸರಕಾರ ಮತ್ತು ಸಾರ್ವಜನಿಕರ ವೈಫಲ್ಯ. ನದಿಗಳನ್ನು ಚೊಕ್ಕಟವಾಗಿಡಲೆಂದೇ ಜಾರಿಯಾಗಿರುವ ಅಟಲ್ ಮಿಷನ್,  ಸ್ಮಾರ್ಟ್ ಸಿಟೀಸ್ ಮಿಷನ್ ಯೋಜನೆಗಳೂ ಸಂಪೂರ್ಣ ವಿಫಲವಾಗಿವೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ವರದಿಯನ್ನೇನೋ ಬಿಡುಗಡೆ ಮಾಡಿದೆ. ಆದರೆ ಮುಖ್ಯವಾಗಿ ಅದು ತನ್ನ ಕಾರ್ಯವನ್ನೇ ಮರೆತಂತಿದೆ.
ಸಾರ್ವಜನಿಕರ ಸ್ಥಳಗಳಲ್ಲಿ ಗಲೀಜು ಮಾಡುವವರ ಮೇಲೆ ನಿಗಾ ಇಟ್ಟು ತಪ್ಪಿತಸ್ಥರನ್ನು ದಂಡ- ಶಿಕ್ಷೆಗೆ ಗುರಿಪಡಿಸಲೆಂದೇ ಈ ಮಂಡಳಿ ಅಸ್ತಿತ್ವ ದಲ್ಲಿದೆ. ಆದರೆ ಈ ಮಂಡಳಿಯು ತನ್ನ ಕಾರ್ಯವನ್ನೇ ಮರೆತಂತಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಮಂಡಳಿಯು ಈಗಿನಿಂದಲೇ ಕಾರ್ಯೋನ್ಮುಖವಾಗಬೇಕಿದೆ. ನದಿಗಳ ಈ ಪರಿಸ್ಥಿತಿಗೆ ಕಾರಣವಾಗಿರುವ ತಪ್ಪಿತಸ್ಥ ವ್ಯಕ್ತಿಗಳು, ಉದ್ಯಮ ಸಂಸ್ಥೆಗಳ ಮೇಲೆ ಅಥವಾ ನಗರ ಸ್ಥಳೀಯ ಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರಕಾರವಷ್ಟೇ ಅಲ್ಲದೆ, ವಿವಿಧ ಸಂಘ ಸಂಸ್ಥೆಗಳು ಕೂಡ ನದಿಗಳ ಸ್ವಚ್ಛತೆಗೆ ಸರಕಾರದೊಂದಿಗೆ ಕೈಜೋಡಿಸಬೇಕು. ಅಲ್ಲದೆ ನದಿಗಳ ಸ್ವಚ್ಛತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ