ಚುನಾವಣೆ ಅಕ್ರಮಗಳ ತಡೆಗೆ ನಾಗರಿಕರ ಪಾತ್ರವೂ ಮುಖ್ಯ
ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಇಷ್ಟೇ ಮಿತಿಯೊಳಗೆ ಖರ್ಚು ವೆಚ್ಚ ಮಾಡಬೇಕು, ಯಾವುದೇ ರೀತಿಯ ಉಡುಗೊರೆಯನ್ನು ಮತದಾರರಿಗೆ ನೀಡುವಂತಿಲ್ಲ ಎಂದು ನೀತಿ ಸಂಹಿತೆಯಲ್ಲಿ ಸ್ಪಷ್ಟವಾಗಿ ಸೂಚಿಸಿ ದ್ದರೂ ಎಲ್ಲೆಡೆ ಆಮಿಷಗಳ ಭರಾಟೆ ನಡೆದಿದೆ.
ಚುನಾವಣಾ ಆಯೋಗವು ನೀತಿ ಸಂಹಿತೆ ಜಾರಿಗೊಳಿಸಿದ ಎರಡೇ ದಿನಗಳಲ್ಲಿ ರಾಜ್ಯದ ಹಲವೆಡೆ ಚೆಕ್‌ಪೋಸ್ಟ್‌ ಗಳಲ್ಲಿ ಲಕ್ಷಾಂತರ ರುಪಾಯಿ ದುಡ್ಡು, ಅಕ್ರಮ ಮದ್ಯ, ಕುಕ್ಕರ್, ಮಿಕ್ಸಿ, ಸೀರೆ, ಒಡವೆಗಳನ್ನು ಪೊಲೀಸರು ವಶಪಡಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ. ಅಂದರೆ ನೀತಿ ಸಂಹಿತೆಯನ್ನು ಯಾವ ರಾಜಕಾರಣಿಗಳೂ ಗಂಭೀರ ವಾಗಿ ಪರಿಗಣಿಸಿಲ್ಲವೆಂದೇ ಅರ್ಥ. ದುಡ್ಡು, ಸೀರೆ, ಮಿಕ್ಸ್‌ರ್, ಕುಕ್ಕರ್‌ಗಳನ್ನು ಹಂಚಿಯೇ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ ಎಂಬ ಮನಸ್ಥಿತಿಯಿಂದ ಮೊದಲು ರಾಜಕಾರಣಿಗಳು ಹೊರಬರಬೇಕಿದೆ.
ಅಭಿವೃದ್ಧಿಯ ವಿಚಾರದ ಮೇಲೆ ಚುನಾವಣೆಯನ್ನು ಎದುರಿಸುವ ಗಟ್ಟಿತನವನ್ನು ರಾಜಕಾರಣಿಗಳು ಪ್ರದರ್ಶಿಸ ದಿದ್ದರೆ ಚುನಾವಣೆ ಆಯೋಗ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಈ ಉಡುಗೊರೆಗಳ ಪ್ರವಾಹವನ್ನು ತಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಚುನಾವಣೆ ಅಕ್ರಮಗಳನ್ನು ಪೊಲೀಸರು, ಚುನಾವಣೆ ಆಯೋಗದ ಅಧಿಕಾರಿಗಳು ಮಾತ್ರ ತಡೆಯಬೇಕು ಎಂಬ ಮನಸ್ಥಿತಿಯಿಂದ ಪ್ರಜ್ಞಾವಂತ ನಾಗರಿಕರೂ ಹೊರಬರಬೇಕಿದೆ.
ಚುನಾವಣೆ ಅಕ್ರಮಗಳು ಕಂಡುಬಂದಲ್ಲಿ ದೂರು ಸಲ್ಲಿಸಲು ಎಲ್ಲ ಜಿಲ್ಲೆಗಳಲ್ಲೂ ದೂರವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ದೂರು ಕೊಟ್ಟವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಆಯೋಗ ತಿಳಿಸಿದೆ. ಆದ್ದರಿಂದ ಎಲ್ಲಿ ಆಮಿಷ ಒಡ್ದುವ ಕೃತ್ಯಗಳು ನಡೆಯುತ್ತವೋ ಅಂತಲ್ಲಿ ಆಯೋಗಕ್ಕೆ, ಪೊಲೀಸ್ ಇಲಾಖೆಗೆ ಸುದ್ದಿ ಮುಟ್ಟಿಸುವ ಜವಾಬ್ದಾರಿಯನ್ನು ಪ್ರಜ್ಞಾವಂತ ನಾಗರಿಕರು ತೋರಬೇಕು. ಚುನಾವಣಾ ಆಯೋಗದ ಕಣ್ಣು ತಪ್ಪಿಸಿ ಇಂತಹ ಕೃತ್ಯಗಳನ್ನು ನಡೆಸುವ ಅಭ್ಯರ್ಥಿಗಳ ಮೇಲೆ ಅತಿ ಸೂಕ್ಷ್ಮ ಕಣ್ಣಿಟ್ಟಿರಬೇಕು.
ಇಲ್ಲದಿದ್ದಲ್ಲಿ ದುಡ್ಡಿದ್ದವರೇ ಚುನಾವಣೆಯಲ್ಲಿ ಗೆದ್ದು, ಪ್ರಜಾಪ್ರಭುತ್ವದ, ಚುನಾವಣೆ ಪದ್ಧತಿಯ ಪಾವಿತ್ರ್ಯವನ್ನೇ ಹಾಳು ಮಾಡುವ ಅಪಾಯವಿದೆ.ಸಾಮಾನ್ಯ ಜನರ ಕಷ್ಟಗಳನ್ನು ಅರಿತವರು ಆಯ್ಕೆಯಾದರೆ ಮಾತ್ರ ಸಾಮಾನ್ಯ ಜನರ ಕಷ್ಟಗಳನ್ನು ನಿವಾರಿಸಲು ಸಾಧ್ಯ. ಇಲ್ಲವಾದಲ್ಲಿ ಚುನಾ ವಣೆಯೂ ಬೇರೆ ಬೇರೆ ವ್ಯಾಪಾರದಂತೆ ಬಂಡವಾಳ ಹಾಕಿ ನಂತರ ಲಾಭ ತೆಗೆಯುವ ವ್ಯಾಪಾರವಾಗುತ್ತದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳ ಬೇಕು.