ಸಾರ್ವಜನಿಕ ಶಿಕ್ಷಣ ಪ್ರೋತ್ಸಾಹಿಸಬೇಕಿದೆ
‘ಖಾಸಗಿ ಶಾಲೆಗಳ ಶುಲ್ಕ ನಿಗದಿ ಮಾಡುವ ಅಧಿಕಾರ ಸರಕಾರಕ್ಕೆ ಇಲ್ಲ’ ಎಂದು ಹೈಕೋರ್ಟ್ ನೀಡಿರುವ ತೀರ್ಪನ್ನೇ ಅಸ್ತ್ರವಾಗಿಟ್ಟುಕೊಂಡಿರುವ ಖಾಸಗಿಶಿಕ್ಷಣ ಸಂಸ್ಥೆಗಳು ೨೦೨೩-೨೪ನೇ ಸಾಲಿನ ಪ್ರವೇಶಕ್ಕೆ ಶೇ.೨೦ರಷ್ಟು ಶುಲ್ಕ ಹೆಚ್ಚಳ ಮಾಡಲು ನಿರ್ಧರಿಸಿವೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಶ್ರೀಸಾಮಾನ್ಯರು ತಮ್ಮ ಮಕ್ಕಳ ಶೈಕ್ಷಣಿಕ ವಿದ್ಯಾ ಭ್ಯಾಸಕ್ಕಾಗಿ ದುಬಾರಿ ಮೊತ್ತದ ಹಣ ಪಾವತಿಸುವುದು ಅನಿವಾರ್ಯವಾಗಿದೆ. ಕರೋನಾ ಕಾಲಘಟ್ಟದ ಹೊಡೆತ ದಿಂದ ಶಿಕ್ಷಣ ಸಂಸ್ಥೆಗಳು ನಷ್ಟದಲ್ಲಿರುವುದೇನೋ ನಿಜ. ಆದರೆ ಅದನ್ನೇ ನೆಪ ಮಾಡಿಕೊಂಡು ಪೋಷಕರ ಬಳಿ ಮನಬಂದಂತೆ ದುಡ್ಡು ಕೀಳುತ್ತಿರುವುದು ಇಡೀ ಶಿಕ್ಷಣ ವ್ಯವಸ್ಥೆಯ ಮೇಲೆಯೇ ಪರಿಣಾಮ ಬೀರುತ್ತದೆ. ದುಡ್ಡಿದ್ದ ವನು ದೊಡ್ಡ ದೊಡ್ಡ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿದರೆ, ಶ್ರೀಸಾಮಾನ್ಯನು ತನ್ನ ಮಕ್ಕಳಿಗೆ ಶಿಕ್ಷಣ ಕೊಡಿಸಲು ಹರಸಾಹಸ ಪಡಬೇಕಿದೆ.
ಎಲ್ಲರನ್ನೂ ಒಳಗೊಳ್ಳುವ ಮಾನವೀಯವೂ ಸುಸ್ಥಿರವೂ ಆದ ಸಮಾಜವೊಂದನ್ನು ಸ್ಥಾಪಿಸುವ ಉದ್ದೇಶವುಳ್ಳ ಸ್ಪಂದನಾಶೀಲ ಪ್ರಜಾಪ್ರಭುತ್ವಕ್ಕೆ ಅಡಿಗಗಬೇಕಿರುವುದೇ ಶಿಕ್ಷಣ. ಕಳೆದ ಕೆಲವು ದಶಕಗಳಲ್ಲಿ ಕರ್ನಾಟಕದ ಶಿಕ್ಷಣ ಕ್ಷೇತ್ರ ಹಲವು ಮುಖ್ಯ ಸಾಧನೆಗಳನ್ನು ಮಾಡಿದೆ. ಅದಕ್ಕೆ ಸ್ಪಷ್ಟ ಉದಾಹರಣೆಯೆಂದರೆ, ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದು. ಶಿಕ್ಷಣದಿಂದ ಇನ್ನೂ ಅನೇಕ ಸುಧಾರಣೆಗಳಾಗಬೇಕಿದೆ. ಆದರೆ ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಕೇಂದ್ರಗಳಂತೆ ವರ್ತಿಸುವುದು, ಪೋಷಕರನ್ನು ಸುಲಿಗೆ ಮಾಡುತ್ತಿರುವುದನ್ನು ನೋಡಿದರೆ ಶಿಕ್ಷಣದ ಮೂಲ ಉದ್ದೇಶವೇ ಬೇರೆ ದಾರಿ ಹಿಡಿಯುತ್ತಿರುವಂತಿದೆ. ಹೀಗಾಗಿ ಈ ನಿಟ್ಟಿನಲ್ಲಿ ಸರಕಾರವು ಸಾರ್ವಜನಿಕ ಶಿಕ್ಷಣ ಅಥವಾ ಸರಕಾರಿ ಶಾಲೆಗಳ ಮೂಲಕ ನೀಡುವ ಶಿಕ್ಷಣಕ್ಕೆ ಒತ್ತು ನೀಡುವ ಅಗತ್ಯವಿದೆ.
ಇದು ಸ್ಪಷ್ಟವಾಗಿ ಗೋಚರಿಸುವ ಮಟ್ಟದಲ್ಲಿರಬೇಕಷ್ಟೇ ಅಲ್ಲದೆ ಸಾರ್ವಜನಿಕ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಅಗತ್ಯವಿರುವ ಸಶಕ್ತ ಯೋಜನೆ ಯೊಂದಿಗೆ ಸಾಕಾರಗೊಳ್ಳಬೇಕು. ಏಕೆಂದರೆ ಒಳ್ಳೆಯ ಸಾರ್ವಜನಿಕ ಶಿಕ್ಷಣ ಪ್ರಜಾಪ್ರಭುತ್ವದ ಮೂಲ ನೆಲೆಗಟ್ಟಾಗಿರುತ್ತದೆ. ಹಾಗೆಂದು ಖಾಸಗಿ ಶಾಲೆಗಳ ನ್ನಾಗಲೀ ಅಥವಾ ಖಾಸಗಿ ಪ್ರಯತ್ನಗಳನ್ನಾಗಲೀ ನಿರುತ್ತೇಜಿಸುವ, ಕಡೆಗಣಿಸಬೇಕಾದ ಅಗತ್ಯವಿಲ್ಲ. ಸಾರ್ವಜನಿಕ ಶಿಕ್ಷಣವನ್ನು ಪ್ರೋತ್ಸಾಹಿಸಿದರೆ ಸಾಕು. ಎಲ್ಲರಿಗೂ ಕೈಗೆಟಕುವ ಶಿಕ್ಷಣ ದೊರೆಯುತ್ತದೆ.