ಆಧಾರ್-ಪ್ಯಾನ್ ಲಿಂಕ್: ಜನಜಾಗೃತಿ ಮೂಡಿಸಲಿ
ತೆರಿಗೆ ವಂಚನೆ ತಡೆಯುವುದಕ್ಕಾಗಿ ಆಧಾರ್ ಮತ್ತು ಪ್ಯಾನ್ ಕಾರ್ಡ್ ಜೋಡಣೆ ಮಾಡಬೇಕೆಂಬುದನ್ನು ಸರಕಾರ ಕಡ್ಡಾಯಗೊಳಿಸಿದೆ. ಇದಕ್ಕಾಗಿ ಮಾರ್ಚ್ ಕಡೆಯ ದಿನಾಂಕವನ್ನು ನಿಗದಿಪಡಿಸಿದ್ದರೂ ಅನೇಕರು ಜೋಡಣೆ ಮಾಡದೇ ಇದ್ದ ಕಾರಣಕ್ಕಾಗಿ ಸರಕಾರ ಈಗ ಮತ್ತೆ ಮೂರು ತಿಂಗಳವರೆಗೆ ಅವಽ ವಿಸ್ತರಿಸಿದೆ. ಇನ್ನು ಮುಂದೆ ಈ ಜೋಡಣೆ ಮಾಡ ಬೇಕಿದ್ದರೆ ಒಂದು ಸಾವಿರ ರುಪಾಯಿ ದಂಡ ಶುಲ್ಕ ನಿಗದಿಪಡಿಸಲಾಗಿದೆ.
ಇದನ್ನು ಮಾಡಲು ಸೈಬರ್ ಕೇಂದ್ರಗಳಿಗೆ ಹೋದರೆ, ಒಂದು ಸಾವಿರದ ಜತೆಗೆ ಇನ್ನೂರು ರುಪಾಯಿ ಪ್ರತ್ಯೇಕ ಶುಲ್ಕ ವಿಽಸಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಅಲ್ಲದೆ, ಜೂನ್ ಒಳಗಾಗಿ ಜೋಡಣೆ ಮಾಡದಿದ್ದರೆ ಹತ್ತು ಸಾವಿರ ರುಪಾಯಿ ದಂಡವನ್ನೂ ವಿಽಸಲಾಗುತ್ತದೆ ಎನ್ನಲಾಗಿದೆ. ನಿಗದಿತ ದಿನಾಂಕದೊಳಗೆ ಜೋಡಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬ್ಯಾಂಕ್‌ಗಳ ಜತೆಗೆ ವ್ಯವಹಾರವೇ ಸಾಧ್ಯವಾಗುವುದಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿವೆ.
ನಿಜವಾಗಿಯೂ ಈ ದಂಡ ಕಟ್ಟುವವರು ಬಡ ಮತ್ತು ಮಧ್ಯಮ ವರ್ಗದ ಜನರೇ. ಈ ವರ್ಗದ ಅನೇಕರಿಗೆ ಆಧಾರ್-ಪ್ಯಾನ್ ಕಾರ್ಡ್ ಹೇಗೆ ಜೋಡಣೆ ಮಾಡಬೇಕೆಂಬುದೇ ಗೊತ್ತಿಲ್ಲ. ಗ್ರಾಮೀಣ ಭಾಗದಲ್ಲಂತೂ ಇದಕ್ಕಾಗಿ ಸೂಕ್ತ ಒಂದು ಕೇಂದ್ರದ ವ್ಯವಸ್ಥೆಯೂ ಮಾಡಿಲ್ಲ. ಇಷ್ಟೊಂದು ಅವ್ಯವಸ್ಥೆಯ ನಡುವೆ ಜನರಿಗೆ ದಂಡದ ಬೆದರಿಕೆ ಹಾಕುವುದು ಎಷ್ಟು ಸರಿ? ಆಧಾರ್ ಕಾರ್ಡಿಗೆ ಪ್ಯಾನ್ ಕಾರ್ಡ್ ಜೋಡಣೆ ಮಾಡುವ ಪ್ರಕ್ರಿಯೆಯಿಂದ ಅನೇಕರು ಶೋಷಣೆಗೊಳಗಾಗುತ್ತಿದ್ದರೂ ಸರಕಾರ ಮಾತ್ರ ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್ಲ. ಈ ಜೋಡಣೆ ಮಾಡಿಸದೆ ಉಳಿದು ಕೊಂಡವರು ಬಹುಮಂದಿ ರೈತರು, ನಿರಕ್ಷರಿಗಳು, ಗ್ರಾಮೀಣ ಭಾಗದ ನಿವಾಸಿಗಳಾಗಿರುವುದರಿಂದ ಸರಕಾರದ ಗಡುವು ದಾಟಿದರೂ ಈ ಕರ್ತವ್ಯದ ಅರಿವು ಅವರಿಗೆ ಮೂಡುವುದಿಲ್ಲ ಎಂಬುದು ಖಂಡಿತ. ಆದ್ದರಿಂದ ಸರಕಾರವೇ ಪ್ರತಿ ಹಳ್ಳಿಗಳಲ್ಲೂ ಈ ಕುರಿತು ಜಾಗೃತಿ ಮೂಡಿಸಬೇಕಿದೆ.
ಗ್ರಾಮಗಳಲ್ಲಿರುವ ವಿದ್ಯಾವಂತರಾದ ಯುವಕರ ನೆರವು ಪಡೆದು, ಮನೆ ಭೇಟಿಗೆ ಕಳುಹಿಸಿ ಸುಲಭವಾಗಿ ಈ ಕೆಲಸ ಮಾಡಿಸಿದರೆ ಜನರಿಗೂ ನಿರುಮ್ಮಳ, ಸರಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ. ಈಗ ನಿಗದಿಪಡಿಸಿರುವ ದಂಡದಿಂದ ವಿನಾಯಿತಿ ನೀಡಿ ತುರ್ತಾಗಿ ಈ ಕೆಲಸ ಆಗಬೇಕಿದೆ.