ಗೋರಕ್ಷಣೆ ಹೆಸರಲ್ಲಿ ಗೂಂಡಾಗಿರಿ ಬೇಡ
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಬಳಿ ಶುಕ್ರವಾರ ಮಧ್ಯರಾತ್ರಿ ವಾಹನದಲ್ಲಿ ಜಾನುವಾರು ಸಾಗಿಸುತ್ತಿದ್ದ ವ್ಯಕ್ತಿ ಅನುಮಾನಾ ಸ್ಪದವಾಗಿ ಮೃತಪಟ್ಟಿದ್ದಾರೆ.
ಗೋರಕ್ಷಕರೇ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಂತರ ಸತ್ಯಾಸತ್ಯತೆ ತಿಳಿಯಲಿದೆ. ಚುನಾವಣೆಯ ಈ ಸಂದರ್ಭದಲ್ಲಿ ನಡೆದಿ ರುವ ಈ ಕೃತ್ಯದ ಲಾಭ ಪಡೆದು ಕೋಮುದ್ವೇಷಕ್ಕೆ ಪ್ರಚೋದನೆ ನೀಡಲು ಕೆಲವು ಕಿಡಿಗೇಡಿಗಳು ಕಾಯುತ್ತಿದ್ದಾರೆ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಗೆ ಯತ್ನಿಸುತ್ತಿದ್ದಾರೆ.
ಕಾನೂನು ಕ್ರಮ ಜರುಗಿಸುವಲ್ಲಿನ ವಿಳಂಬನೀತಿ ಕಿಡಿಗೇಡಿ ಗಳಿಗೆ ಅನುಕೂಲಕರವಾಗಿ ಪರಿಣಮಿಸಬಹುದು. ಇಂಥ ಘಟನೆಗಳಿಗೆ ಕೋಮು ಬಣ್ಣವನ್ನು ಬಳಿಯುವ ಮೊದಲೇ ಪೊಲೀಸರು ತಪ್ಪಿತಸ್ಥರನ್ನು ಆದಷ್ಟು ಬೇಗ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕಿದೆ. ಸಾಮಾಜಿಕ ಸಾಮರಸ್ಯ ಕದಡುವ ಇಂತಹ ಕೃತ್ಯಗಳು ಮರುಕಳಿಸದಂತೆ ನೋಡಿಕೊಳ್ಳಬೇಕಿದೆ.
‘ಗೋ ಭಕ್ತಿಯ ಹೆಸರಲ್ಲಿ ಹಿಂಸಾಚಾರಕ್ಕೆ ಇಳಿಯಬೇಡಿ’ ಎಂದು ದೇಶದ ಜನತೆಗೆ ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿ ಅವರೇ ಕರೆ ನೀಡಿದ್ದಾರೆ. ಆದರೂ ದೇಶದ ಬೇರೆ ಬೇರೆ ಭಾಗಗಳಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲೂ ಹೆಚ್ಚಾಗುತ್ತಿರುವುದು ದುರದೃಷ್ಟಕರ. ಗೋವನ್ನು ನಾವು ಮಾತೆಯೆಂದು ಪರಿಗಣಿಸುತ್ತೇವೆ. ಅದೊಂದು ಭಾವನಾತ್ಮಕ ವಿಚಾರ.
ಆದರೆ, ನಮ್ಮ ದೇಶದಲ್ಲಿ ಗೋರಕ್ಷಣೆಗೆ ಸಂಬಂಧಿಸಿ ಅದರದ್ದೇ ಆದ ಕಾನೂನುಗಳಿವೆ, ಅವುಗಳನ್ನು ಉಲ್ಲಂಘಿಸು ವುದು ಸರಿಯಲ್ಲ ಎಂಬುದನ್ನು ಅರಿತಿರಬೇಕು. ಗೋರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ಗೂಂಡಾಗಿರಿಯ ವಿರುದ್ಧ ಎಲ್ಲ ರಾಜಕೀಯ ಪಕ್ಷಗಳೂ ಒಗ್ಗಟ್ಟಾಗಿ ಹೋರಾಡಬೇಕು.
ಇಂಥ ವಿಚಾರದಲ್ಲಿ ಹಿಂಸಾಚಾರ ನಡೆಸುವ ಸಮಾಜವಿದ್ರೋಹಿ ಶಕ್ತಿಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು. ಕೋಮು ವೈಮನಸ್ಯಕ್ಕೆ ಆಸ್ಪದ ಕಲ್ಪಿಸುವ ಚಟುವಟಿಕೆಗಳ ವಿಚಾರ ದಲ್ಲಿ ಸರಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಕಾನೂನನ್ನು ಕೈಗೆ ತೆಗೆದುಕೊಳ್ಳುವುದನ್ನು ಸರಕಾರ ಸಹಿಸಿಕೊಳ್ಳುವುದಿಲ್ಲ ಎನ್ನುವ ಸ್ಪಷ್ಟ ಸಂದೇಶ ರವಾನೆಯಾಗಬೇಕು. ಆ ಮೂಲಕ ದೇಶ, ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಸ್ಥಾಪನೆಯಾಗಬೇಕು.