ಹವಾಮಾನ ಬದಲಾವಣೆ ಮಾನವ ಕುಲಕ್ಕೆ ಬೆದರಿಕೆ
ಏಪ್ರಿಲ್‌ನ ಆರಂಭದಲ್ಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದೆ. ಕಲಬುರಗಿ, ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಜನರು ಬಿಸಿಲಿನ ಬೇಗೆಗೆ ಬಸವಳಿದಿದ್ದಾರೆ.
ಇದೇ ಪರಿಸ್ಥಿತಿಯು ಮಳೆಗಾಲ, ಚಳಿಗಾಲದಲ್ಲೂ ಸಂಭವಿಸುತ್ತಲೇ ಇದೆ. ಮಳೆಗಾಲದಲ್ಲಿ ಸಿಕ್ಕಾಪಟ್ಟೆ ಮಳೆ, ಚಳಿಗಾಲದಲ್ಲಿ ವಿಪರೀತ ಚಳಿಯಿಂದ ಜನರು ನಡುಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಲೇ ಇದೆ. ಇದಷ್ಟೇ ಅಲ್ಲದೆ ಚಂಡಮಾರುತ, ಕಾಳ್ಗಿಚ್ಚು, ಬರಗಾಲ, ಪ್ರವಾಹ, ಸಮುದ್ರ ಮಟ್ಟ ರಿಕೆ ಮತ್ತು ವಿವಿಧ ರೀತಿಯ ನೈಸರ್ಗಿಕ ವಿಕೋಪಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆಲ್ಲ ಕಾರಣ, ಹೆಚ್ಚುತ್ತಿರುವ ಇಂಗಾಲ ಹೊರಸೂಸುವಿಕೆಯ ಪ್ರಮಾಣ.
ಇಂಗಾಲ ಹೊರಸೂಸುವಿಕೆಯ ಪ್ರಮಾಣವನ್ನು ೨೦೩೦ರ ಹೊತ್ತಿಗೆ ೨೦೧೦ರಲ್ಲಿ ಇದ್ದುದರ ಅರ್ಧಕ್ಕೆ ಇಳಿಸುವ ದಿಸೆಯಲ್ಲಿ ಕೆಲಸ ಮಾಡಲು ಜಗತ್ತು ವಿಫಲವಾಗಿದೆ. ಹವಾಮಾನ ಬದಲಾವಣೆಯನ್ನು ತಡೆಯುವುದಕ್ಕಾಗಿ ವಿವಿಧ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ಹಲವು ದೇಶಗಳು ನೀಡಿವೆ. ಇಂಗಾಲ ಹೊರಸೂಸುವಿಕೆಯನ್ನು ಸಂಪೂರ್ಣ ನಿಲ್ಲಿಸುವುದಾಗಿಯೂ ಕೆಲವು ದೇಶಗಳು ಹೇಳಿವೆ. ಆದರೆ, ಇಂಗಾಲದ ಹೊರಸೂಸುವಿಕೆ ಹೆಚ್ಚುತ್ತಲೇ ಸಾಗಿದೆ. ಜಾಗತಿಕವಾಗಿ ಇಂಧನಕ್ಕೆ ಸಂಬಂಧಿಸಿದ ಇಂಗಾಲ ಹೊರಸೂಸುವಿಕೆಯ ಏರಿಕೆಯು ೨೦೨೧ಕ್ಕೆ ಹೋಲಿಸಿದರೆ ಕಡಿಮೆಯಾಗಿದೆ.
ಹಾಗಿದ್ದರೂ ಏರಿಕೆ ಪ್ರಮಾಣವು ಅಪಾಯಕಾರಿ ಎನಿಸುವಷ್ಟು ಹೆಚ್ಚು ಇದೆ. ಸರಿಪಡಿಸಲು ಸಾಧ್ಯವಾಗದ ಮಟ್ಟ ವನ್ನು ಹವಾಮಾನ ಬಿಕ್ಕಟ್ಟು ೨೦೨೫ರ ಹೊತ್ತಿಗೆ ಮೀರಲಿದೆ ಎನ್ನಲಾಗಿದೆ. ಆದ್ದರಿಂದ ಇಂಗಾಲ ಹೊರಸೂಸು ವಿಕೆಯನ್ನು ಕಡಿಮೆಗೊಳಿಸುವ ಪ್ರಯತ್ನವು ಹೆಚ್ಚಿನ ವೇಗ ಪಡೆದುಕೊಳ್ಳಬೇಕು. ಆದರೆ ಈ ಪ್ರಯತ್ನವು ಕಷ್ಟಕರವಾದುದರಿಂದ ಅದಕ್ಕಾಗಿ ಕೆಲಸ ಮಾಡಲು ಯಾರೂ ಸಿದ್ಧರಿಲ್ಲ. ಈ ಕಷ್ಟವನ್ನು ಸಹಿಸಿಕೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಈ ವಿಚಾರದಲ್ಲಿ ಶ್ರೀಮಂತ ದೇಶಗಳ ಹೊಣೆಗಾರಿಕೆ ಹೆಚ್ಚು. ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಇತರ ಮೂಲಗಳಿಂದ ಹೆಚ್ಚಿನ ನೆರವು ಒದಗಿಸಬೇಕು.
ಹವಾಮಾನ ಬದಲಾವಣೆಯು ಮಾನವ ಕುಲಕ್ಕೆ ಎದುರಾಗಿರುವ ಅತ್ಯಂತ ಗಂಭೀರವಾದ ಬೆದರಿಕೆಯಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.