ಕೃಪಾಂಕದ ಆಮಿಷ ಎಷ್ಟು ಸರಿ?
ದೇಶದಲ್ಲಿ ಕರೋನಾ ಉಲ್ಬಣಗೊಂಡು ಶೈಕ್ಷಣಿಕ ಪ್ರಗತಿ ಕುಂಠಿತಗೊಂಡಿದೆ ಎನ್ನವ ವರದಿಗಳ ಬೆನ್ನಲ್ಲೇ, ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ಶೇ.೧೦ ರಷ್ಟು ಕೃಪಾಂಕ ನೀಡಲು ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಂದಾಗಿದೆ. ಇದರ ಔಚಿತ್ಯದ ಕುರಿತು ಸಾಕಷ್ಟು ಚರ್ಚೆಯೂ ಆರಂಭವಾಗಿದೆ.
ವಿದ್ಯಾರ್ಥಿಗಳು ಸ್ವಲ್ಪದರಲ್ಲಿ ಅನುತ್ತೀರ್ಣರಾಗುವುದನ್ನು ತಡೆಯಲು ಇದೊಂದು ಉತ್ತಮ ಮಾರ್ಗ ಎನ್ನುವ ವಾದ ಶಿಕ್ಷಕ ವರ್ಗದಿಂದ ಕೇಳಿ ಬಂದಿದೆ. ಆದರೆ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಭೌತಿಕವಾಗಿಯೇ ತರಗತಿಗಳಿಗೆ ಹಾಜರಾಗಿದ್ದಾರೆ. ಹಲವಾರು ಕಿರು ಪರೀಕ್ಷೆ, ಸಿದ್ಧತಾ ಪರೀಕ್ಷೆ ಗಳನ್ನೂ ಎದುರಿಸಿರುತ್ತಾರೆ. ಹಾಗಾಗಿ ಕೃಪಾಂಕದ ಅಗತ್ಯವಿರಲಿಲ್ಲ. ಇದೂ ಸಹ ಚುನಾವಣೆಯ ತಂತ್ರ ಎಂಬ ವಾದವೂ ಕೇಳಿಬರುತ್ತಿದೆ. ಇದರಲ್ಲಿ ಹುರುಳಿಲ್ಲದಿಲ್ಲ.
ಕೋವಿಡ್ ಸಂದರ್ಭದಲ್ಲಿ ಎರಡು ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸದೇ, ಒಂಬತ್ತನೇ ತರಗತಿಯ ಅಂಕಗಳ ಆಧಾರದ ಮೇಲೆ ಕೃಪಾಂಕ ನೀಡಿ  ಉತ್ತೀರ್ಣಗೊಳಿಸಲಾಗಿತ್ತು. ಅಲ್ಲದೇ ಆ ಸಮಯದಲ್ಲಿ ಆನ್‌ಲೈನ್ ತರಗತಿ ಮತ್ತು ಪರೀಕ್ಷೆ ಇಲ್ಲದೆ ಮುಂದಿನ ತರಗತಿಗೆ ತಳ್ಳುವ ವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳಲ್ಲಿ ಕಲಿಕೆಯ ಹುಮ್ಮಸ್ಸಿಗೆ ತೆರೆ ಬಿದ್ದಿದೆ.
ಇಂಥ ಸನ್ನಿವೇಶದಲ್ಲಿ ಮತ್ತೆ ಕೃಪಾಂಕ ನೀಡಿ, ಅದರಲ್ಲೂ ಶೇ.೧೦ಕ್ಕೇರಿಸಿ ಉತ್ತೀರ್ಣ ಗೊಳಿಸುವುದರಿಂದ ವಿದ್ಯಾರ್ಥಿಗಳನ್ನು ಪರಿಶ್ರಮದಿಂದ ವಿಮುಖರಾಗಿಸಿದಂತಾಗುವುದಿಲ್ಲವೇ? ಇದರಿಂದ ಶಿಕ್ಷಕರಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಲಾಭವೇ ಹೊರತೂ ಶಿಕ್ಷಣ ವ್ಯವಸ್ಥೆಯೇ ಮೌಲ್ಯ ಕಳೆದುಕೊಳ್ಳುತ್ತದಲ್ಲವೇ? ದೇಶದ ಇತರ ರಾಜ್ಯದ ಪಬ್ಲಿಕ್ ಪರೀಕ್ಷೆಗಳ ಫಲಿತಾಂಶ ಒಳ್ಳೆಯ ರೀತಿಯಲ್ಲಿ ಹೊರಬೀಳುವ ಕಾರಣ, ಕರ್ನಾಟಕದ ಎಸ್ಸೆಸ್ಸೆಲ್ಸಿ ಫಲಿತಾಂಶವೂ ಅವರಿಗೆ ಒಗ್ಗುವಂತಿ ರಲಿ ಎಂಬ ಯೋಜನೆ ಶಿಕ್ಷಣ ಇಲಾಖೆಯದ್ದಾಗಿರಬಹುದು.
ಆದರೆ, ಆ ಉದ್ದೇಶಕ್ಕೆ ಕೃಪಾಂಕದ ಹಿಂಬಾಗಿಲನ್ನು ತೆರೆಯುವ ಬದಲು ಶಿಕ್ಷಣ ವ್ಯವಸ್ಥೆಯನ್ನೇ ಇನ್ನಷ್ಟು ಬಲಗೊಳಿಸುವ ಕ್ರಮಗಳಿಗೆ ಸರಕಾರವೇಕೆ ಮುಂದಾಗುತ್ತಿಲ್ಲ ಎಂಬುದು ತಜ್ಞರ ಆಕ್ಷೇಪ. ಅನುಮಾನವೇ ಇಲ್ಲ, ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ವಿದ್ಯಾರ್ಥಿಗಳನ್ನು ಭೌತಿಕವಾಗಿ ಅಥವಾ ಮಾನಸಿಕ ವಾಗಿ ಆರೋಗ್ಯವಂತರಾಗಿರುವಂತೆ ಕಾಪಾಡಿಕೊಳ್ಳುವುದು ಶಿಕ್ಷಕರ ಹಾಗೂ ಪೋಷಕರ ಕರ್ತವ್ಯ. ಇದರಿಂದ ವಿಮುಖವಾಗಿರುವುದನ್ನು ಮುಚ್ಚಿಟ್ಟು ಕೊಳ್ಳಲು ಕೃಪಾಂಕದಂಥ ಅಸದ ಮೊರೆ ಹೋಗಲಾಗುತ್ತಿದೆ.
ಇದರಿಂದಾಗಿ ಮಕ್ಕಳು ಕಲಿಕೆಯಲ್ಲಿ ನಿರಾಸಕ್ತಿ ತಾಳುತ್ತಾರೆ. ಇದರ ಬದಲು ಶಿಕ್ಷಣ ವ್ಯವಸ್ಥೆಯಲ್ಲಿ ಕನಿಷ್ಠ ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಯೋಚಿಸ ಬೇಕಿದೆ. ಆಮಿಷಕ್ಕೆ ಮಕ್ಕಳನ್ನು ತಳ್ಳುವ ಬದಲು ನೈಜ ಕಾಳಜಿ ಮೆರೆಯಬೇಕಿದೆ. ನಿಯಮಗಳು ಪ್ರಚಾರಕ್ಕಷ್ಟೆ ಆಗದೇ ಕಾರ್ಯಗತಗೊಳ್ಳಬೇಕಿದೆ.