ಹಾಲಿಗೆ ಹುಳಿ ಹಿಂಡಬೇಡಿ
ರಾಜ್ಯದಲ್ಲಿ ಅಮುಲ್ ಹಾಗೂ ನಂದಿನಿಯ ತಿಕ್ಕಾಟ ಮತ್ತ ಮುನ್ನೆಲೆಗೆ ಬಂದಿದೆ. ಆನ್‌ಲೈನ್ ಮೂಲಕ ಹಾಲು ಮತ್ತು ಮೊಸರು ಮಾರಲು ಮುಂದಾಗಿರುವ ‘ಅಮುಲ್’ ಸಂಸ್ಥೆ ಕ್ರಮಕ್ಕೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಮದ ತೀವ್ರ ಆಕ್ಷೇಪವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣದಲ್ಲಿಯೂ ‘ಗೋ ಬ್ಯಾಕ್ ಅಮೂಲ್’ ಅಭಿಯಾನ ಆರಂಭಿಸಲು ಸಜ್ಜಾಗಿದ್ದಾರೆ. ಇದಕ್ಕೂ ಮ್ನು ಹಿಂದೊಮ್ಮೆ ಕೆಎಂಎಫ್ ಅನ್ನು ಅಮುಲ್ ಜತೆ ವಿಲೀನ ಮಾಡಲು ಮುಂದಾಗಿದ್ದಾರೆ ಎಂದು ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಆದರಿಸಿ ಗದ್ದಲ ಎಬ್ಬಿಸಲಾಗಿತ್ತು. ಆದರೆ, ವಾಸ್ತವದಲ್ಲಿ ಕೆಎಂಎಫ್ ಹಾಗೂ ಅಮೂಲ್ ಎರಡೂ ಸಹಕಾರ ತತ್ವದಡಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳಾಗಿದ್ದು, ಇವೆರಡರ ನಡುವೆ ರಾಜಕೀಯ ಕಾರಣಕ್ಕಾಗಿ ಅನಗತ್ಯ ಪೈಪೋಟಿಯನ್ನು ಬಿತ್ತಲು ಪ್ರಾದೇಶಿಕ ಭಾವನೆಗಳನ್ನು ಪ್ರಚೋದಿಸಲಾಗುತ್ತಿದೆ ಎಂಬುದು ಗಮನಾರ್ಹ.
ನಿಜವಾಗಿ ನಾವು ಗದ್ದಲ ಎಬ್ಬಿಸಬೇಕಾಗಿರುವುದು ದೇಸಿ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ಖಾಸಗಿ ಹಾಗೂ ಬಹುರಾಷ್ಟ್ರೀಯ ಉತ್ಪನ್ನಗಳ ಬಗೆಗೆ. ಹಾಲಂತಲೇ ಅಲ್ಲ, ಬಹುತೇಕ ಎಲ್ಲ ರೀತಿಯ ಉತ್ಪನ್ನಗಳಿಗೆ ಖಾಸಗಿ ಬಹುರಾಷ್ಟ್ರೀಯ ಉತ್ಪನ್ನಗಳು ಅನಾರೋಗ್ಯಕರ ಸ್ಪರ್ಧೆ ಒಡ್ಡಿ, ದೇಸಿ ಮಾರುಕಟ್ಟೆಯನ್ನೇ ನುಂಗಿ ಹಾಕುತ್ತಿವೆ. ಈಗ ಅಮುಲ್ ರಾಜ್ಯ ಮಾರುಕಟ್ಟೆ ಪ್ರವೇಶಿಸಿದೆ ಎಂದು ಗಲಾಟೆ ಮಾಡುವುದಕ್ಕಿಂತ ಮುಂಚೆ ನಮ್ಮದೇ ರಾಜ್ಯದ ಮೈಸೂರು ಸ್ಯಾಂಡಲ್ ಸಾಬೂನು ದೇಶ ವಿದೇಶಗಳಲ್ಲಿ ಮಾರಾಟವಾಗುತ್ತಿರುವುದನ್ನು ಗಮನಿಸಬೇಕು. ಒಂದು ಹಂತದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ, ನಮ್ಮ ಮೈಸೂರು ಸ್ಯಾಂಡಲ್ ಸೋಪನ್ನು ಸರಕಾರದ ವತಿಯಿಂದಲೇ ಹಂಚಿದ್ದರು.
ನಮ್ಮ ನಂದಿನಿ ಉತ್ಪನ್ನಗಳೂ ಬೇರೆ ರಾಜ್ಯಗಳಲ್ಲಿ ಮಾರಾಟವಾಗುತ್ತಿರುವುದಷ್ಟೇ ಅಲ್ಲ, ಅತ್ಯಂತ ಜನಪ್ರಿಯವೂ. ಹೇರಿಟೇಜ್, ಆರೋಗ್ಯ, ತಿರುಮಲ, ದೋಡ್ಲದಂಥ ಡೇರಿ ಉತ್ಪನ್ನಗಳು ನಮ್ಮ ರಾಜ್ಯದಲ್ಲಿಯೂ ಮಾರಾಟವಾಗಿತ್ತವೆಯಲ್ಲವೇ? ಈವರೆಗೆ ಅವ್ಯಾವುವನ್ನೂ ವಿರೋಽಸದ ಮಂದಿ ಇದೀಗ ಅಮೂಲ್ ಅನ್ನು ಮಾತ್ರ ವಿರೋಧಿಸುತ್ತಿರುವ ಔಚಿತ್ಯ ವೇನೂ? ಬೇಡಿಕೆಗನುಗುಣವಾಗಿ ಇಲ್ಲಿಯ ಪದಾರ್ಥಗಳನ್ನು ಬೇರೆ ರಾಜ್ಯದಲ್ಲಿ, ಅಲ್ಲಿಯ ಉತ್ಪದನೆಗಳನ್ನು ಇಲ್ಲಿ ಮಾರಾಟ ಮಾಡುವ ಹಕ್ಕಿದೆ.
ಇದರಿಂದ ಪರಸ್ಪರ ಕೊಂಡುಕೊಳ್ಳವ ಮನೋಭಾವ ಹೆಚ್ಚಿ, ಒಕ್ಕೂಟ ವ್ಯವಸ್ಥೆ ಬಲಗೊಳ್ಳುತ್ತದೆ. ದೇಸಿ ಮಾರುಕಟ್ಟೆಯೂ ಉಳಿಯುತ್ತದೆ. ಕೆಎಂಎಫ್ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಲು ಅವಕಾಶವಿದ್ದರೂಅಲಿಖಿತ ಒಪ್ಪಂದದಂತೆ ಸಹಕಾರ ನೀಡಲಾಗುತ್ತಿದೆ. ಹಾಲಿನ ಕೊರತೆ ಇರುವ ರಾಜ್ಯಗಳಲ್ಲಿ ಅಮುಲ್ ಮತ್ತು ನಂದಿನಿ ಬ್ರ್ಯಾಂಡ್ ತನ್ನದೇ ಮಾರುಕಟ್ಟೆ ಹೊಂದಿದ್ದು, ವಹಿವಾಟು ನಡೆಸುತ್ತಿವೆ. ಅನಗತ್ಯ ವಿವಾದ ಎಬ್ಬಿಸುವ ಬದಲು ಪರಸ್ಪರ ಚರ್ಚೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ವಿಹಿತ.