ಅಬ್ಬರದ ಪ್ರಚಾರಕ್ಕೆ ಮರುಳಾಗದಿರಿ
2023 ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಬಹುತೇಕ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದೆ.
ಸೋಮವಾರ ಬಿಜೆಪಿ ಅಭ್ಯರ್ಥಿಗಳ ಘೋಷಣೆಯೂ ನಡೆಯಲಿದೆ ಎನ್ನಲಾಗಿದೆ. ಹೀಗಾಗಿ ಇಂದಿನಿಂದ ಚುನಾವಣೆ ಕಣ ಮತ್ತಷ್ಟು ರಂಗೇರುವುದು ಖಚಿತ. ಅಬ್ಬರದ ಪ್ರಚಾರಕ್ಕೆ ಚುನಾವಣೆ ಆಯೋಗ ಕಡಿವಾಣ ಹಾಕಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ, ಚಿಕ್ಕ ಪುಟ್ಟ ಹಳ್ಳಿಗಳಲ್ಲಿ ಪ್ರಚಾರದ ಭರಾಟೆ ಜೋರಾಗಿಯೇ ನಡೆದಿದೆ. ರಾಜ್ಯದಲ್ಲಿ ಸಕ್ರಿಯವಾಗಿರುವ ಮೂರೂ ಪ್ರಮುಖ ಪಕ್ಷಗಳಿಗೆ ಈ ಚುನಾವಣೆ ಬಹಳ ಮಹತ್ವದ್ದು. ಮರಳಿ ಅಧಿಕಾರಕ್ಕೆ ಬರಲು ಶತಾಯ ಗತಾಯ ಯತ್ನಿಸುತ್ತಿರುವ ಕಾಂಗ್ರೆಸ್‌ಗೆ ಈ ಚುನಾವಣೆ ಇನ್ನೂ ಹೆಚ್ಚು ಮುಖ್ಯವಾಗಿದೆ.
ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದ್ದರೆ, ರಾಜ್ಯ ರಾಜಕಾರಣದಲ್ಲಿ ಪ್ರಸ್ತುತ ವಾಗಿಯೇ ಇರಬೇಕು ಎಂಬ ಹೆಬ್ಬಯಕೆ ಜೆಡಿಎಸ್‌ಗೆ ಇದೆ. ಲೋಕಸಭೆಗೆ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಆ ದೃಷ್ಟಿಯಿಂದಲೂ ರಾಜ್ಯದಚುನಾವಣೆ ಯು ಎಲ್ಲ ಪಕ್ಷಗಳಿಗೆ ಮಹತ್ವzಗಿದೆ. ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯನ್ನು ವಿರೋಧಿಸುವ ಪಕ್ಷಗಳ ನಾಯಕತ್ವ ಸ್ಥಾನ ವಹಿಸಿಕೊಳ್ಳುವುದಕ್ಕೆ ಕಾಂಗ್ರೆಸ್‌ಗೆ ಕರ್ನಾಟಕದ ಗೆಲುವು ಅನಿವಾರ್ಯ.
ಹಾಗೆಯೇ, ದಕ್ಷಿಣದಲ್ಲಿ ಇರುವ ಏಕೈಕ ರಾಜ್ಯವನ್ನು ಬಿಟ್ಟುಕೊಡಲು ಬಿಜೆಪಿಯೂ ಸಿದ್ಧವಿಲ್ಲ. ಪ್ರಚಾರಕ್ಕಾಗಿ ಬಿಜೆಪಿ ತನ್ನ ಕೇಂದ್ರದ ನಾಯಕರು ಅದರಲ್ಲೂ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಅವಲಂಬಿಸಿದೆ. ಕಾಂಗ್ರೆಸ್ ಮುಂದೆಯೂಹಲವು ಸವಾಲುಗಳು ಇವೆ. ಬಿಜೆಪಿಯ ಸೋಲರಿಯದ ಚುನಾವಣಾ ವ್ಯವಸ್ಥೆ ಯನ್ನು ಎದುರಿಸುವುದು ಕಾಂಗ್ರೆಸ್ ಮುಂದಿನ ಬಹುದೊಡ್ಡ ಸವಾಲು. ಈ ಚುನಾವಣಾ ಕಣವು ಎಲ್ಲ ರೀತಿಯ ಅಭಿವ್ಯಕ್ತಿಗಳಿಗೆ ಸಾಕ್ಷಿಯಾಗಿದೆ. ಧರ್ಮ, ಜಾತಿ, ವರ್ಗಗಳ ಆಧಾರದ ಮತ ಕೇಳಲಾಗುತ್ತಿದೆ. ಅಲ್ಲಲ್ಲಿ ದ್ವೇಷ ಭಾಷಣದ ಪ್ರಕರಣಗಳೂ ದಾಖಲಾಗುತ್ತಿವೆ. ಪರಸ್ಪರ ಆರೋಪ- ಪ್ರತ್ಯಾರೋಪ ಗಳು ಮುಗಿಲುಮುಟ್ಟಿವೆ.
ಹೀಗಾಗಿ ಪ್ರಚಾರದ ಭರಾಟೆಯಲ್ಲಿ ಅಭಿವ್ಯಕ್ತಿಯಾಗಿರುವ ಎಲ್ಲವನ್ನೂ ಮತದಾರರು ಅಳೆದು ತೂಗಿ ನೋಡಬೇಕಿದೆ.  ರಾಜಕಾರಣಿ ಗಳು ತಮ್ಮ ಕಷ್ಟ ನಷ್ಟಗಳಲ್ಲಿ ಮುಂದಿನ ಐದು ವರ್ಷ ಜತೆಗೇ ಇರುತ್ತಾರೆಯೇ ಎಂಬುದನ್ನು ಖಾತರಿಪಡಿಸಿ ಕೊಳ್ಳಬೇಕಿದೆ. ಚುನಾವಣೆಯು ಪ್ರಜಾಪ್ರಭುತ್ವವನ್ನು ಅಭಿವ್ಯಕ್ತಿಸುವ ಪರಿಣಾಮಕಾರಿ ಸಾಧನ. ಹೀಗಾಗಿ ಅಬ್ಬರದ ಪ್ರಚಾರಕ್ಕೆಮರುಳಾಗದೆ, ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆ.