ನಾಯಕರಿಗೆ ನಾಲಗೆ ಹಿಡಿತ ಅತ್ಯಗತ್ಯ
ನಾಲಗೆ ಸದಾ ಮನುಷ್ಯನ ಶತ್ರುವೇ. ದೈಹಿಕ ಆರೋಗ್ಯದ ವಿಚಾರಕ್ಕೆ ಬಂದರೆ ಇವತ್ತು ನಮ್ಮ ನಡುವೆ ಬಹುತೇಕರು ಎದುರಿಸುತ್ತಿರುವ ಬಹುತೇಕ ಆರೋಗ್ಯ ಸಮಸ್ಯೆ ಮೂಲವೇ ಆಹಾರ. ನಾಲಗೆಯ ಚಪಲಕ್ಕೆ ಬಿದ್ದು, ನಮ್ಮ ಪಾರಂಪರಿಕ ಆಹಾರಕ್ರಮ ಉಲ್ಲಂಸಿ ಆಧುನಿಕ ಆಹಾರೋತ್ಪನ್ನಗಳ ಬಳಕೆ ಹೆಚ್ಚಿಸಿದ ಪರಿಣಾಮವೇ ಬಹುತೇಕರು ಅದರಲ್ಲೂ ನಗರ ವಾಸಿಗಳು ಇಪ್ಪತ್ತೈದು, ಮೂವತ್ತು ವರ್ಷಕ್ಕೆಲ್ಲ ಅಧಿಕ ಥೈರಾಯ್ಡ್, ರಕ್ತದೊತ್ತಡ, ಮಧುಮೇಹದಂಥ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.
ಇಷ್ಟಾದರೂ ನಾವು ಎಚ್ಚೆತ್ತಿಲ್ಲ. ಇದನ್ನೆ ಬಂಡವಾಳವಾಗಿಸಿಕೊಂಡಿರುವ ‘ಆರೋಗ್ಯ ಉದ್ಯಮ’, ದಂಧೆ ನಡೆಸುತ್ತಿದೆ. ಆದರೆ ಇದನ್ನು ಸಮಾಜ ಅರ್ಥ ಮಾಡಿಕೊಳ್ಳುತ್ತಿಲ್ಲ. ಇಂಥದ್ದೇ ಸ್ವರೂಪದ ‘ನಾಲಗೆ ಜನ್ಯ’ ಇನ್ನೊಂದು ಸಮಸ್ಯೆ ವಿವಾದಗಳು. ದಿಢೀರ್ ಶ್ರೀಮಂತಿಕೆ, ನಾಯಕತ್ವ, ಖ್ಯಾತಿ, ಅಧಿಕಾರ ಇತ್ಯಾದಿಗಳ ಹಂಬಲಕ್ಕೆ ಬಿದ್ದಿರುವ ಮಂದಿಯ ನಾಲಗೆ ಮತ್ತೆ ಮತ್ತೆ ಈ ಕಾರಣಕ್ಕಾಗಿಯೇ ಎಡವುತ್ತಿದೆ. ಪರಿಣಾಮ ಸಲ್ಲದ ವಿವಾದ, ಸಮಸ್ಯೆಗಳು ಸಮಾಜದಲ್ಲಿ ಸೃಷ್ಟಿಯಾಗುತ್ತಿದೆ. ಆಹಾರ ಮತ್ತು ಮಾತಿನ ನಿಯಂತ್ರಣ, ಶಿಸ್ತು ಎಲ್ಲರಿಗೂ ಅನ್ವಯವಾಗುತ್ತದೆಯಾದರೂ ‘ನಾಯಕ’ ನೆನಿಸಿಕೊಂಡವರು ನಾಲಗೆಗೆ ಸಂಬಂಧಿಸಿದ ಈ ಎರಡೂ ವಿಚಾರದಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸುವುದು ಅತ್ಯಗತ್ಯ.
ಅದರಲ್ಲೂ ಚುನಾವಣೆಯಂಥ ಅಧಿಕಾರದ ಪೈಪೋಟಿಯ ಸನ್ನಿವೇಶದಲ್ಲಿ ಕಟ್ಟೆಚ್ಚರ ಅನಿವಾರ್ಯ. ಇವೆರಡೇ ಕಾರಣಕ್ಕೆ ಭವಿಷ್ಯದ ಫಲಿತಾಂಶವೇ ತಲೆಕೆಳಗಾಗುವ ಎಲ್ಲ ಸಾಧ್ಯತೆ ಗಳಿವೆ ಎಂಬುದಕ್ಕೆ ಕಣ್ಣೆದುರಿನ ಉದಾಹರಣೆ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ. ಮೊನ್ನೆ ಮೊನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ‘ಲಿಂಗಾಯತ ಸಿಎಂ’ ಕುರಿತು ಆಡಿದ ಒಂದು ಮಾತು ಇಂದು ರಾಜ್ಯಾದ್ಯಂತ ವಿವಾದ ಸೃಷ್ಟಿಸಿದ್ದಲ್ಲದೇ, ಬಿಜೆಪಿ ನಾಯಕರಿಗೆ ಇವರೇ ಅಸ ಸೃಷ್ಟಿಸಿಕೊಟ್ಟಂತಾಗಿರುವುದು ಸುಳ್ಳಲ್ಲ.
ಬಹಳಷ್ಟು ವೇಳೆ, ಬಹಳಷ್ಟು ನಾಯಕರು ಟೀಕೆ, ಆರೋಪಗಳ ಭರದಲ್ಲಿ ಅತ್ಯಂತ ಕೀಳು ಅಭಿರುಚಿಯ ಭಾಷೆಯನ್ನೂ ಬಳಸುತ್ತಿದ್ದಾರೆ. ಯಾವತ್ತಿಗೂ, ಯಾರಿಗೂ ವೈಯಕ್ತಿಕ ನಿಂದನೆ, ವ್ಯಕ್ತಿಗತ ಟೀಕೆಗಳು ಶೋಭೆ ತರುವುದಿಲ್ಲ. ಇದನ್ನು ನಮ್ಮ ನಾಯಕರು ಅರಿತರೆ ಒಳಿತು.