ನೀರು, ಮೇವು ಕೊರತೆಯಾಗದಿರಲಿ
ಈ ಬಾರಿಯ ಬೇಸಿಗೆ ಹಿಂದೆಂದಿಗಿಂತಲೂ ಪ್ರಖರವಾಗಿದ್ದು, ನಿತ್ಯ ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆ ಯವರೆಗೆ ಬೆಂಕಿಯನ್ನೇ ಸುರಿಸುತ್ತಿದೆ. ಈ ಬೇಸಿಗೆಯ ಧಗೆಯಿಂದ ರಾಜ್ಯಾದ್ಯಂತ ಜನ-ಜಾನುವಾರುಗಳುನೀರು, ಮೇವಿಗಾಗಿ ಪರಿತಪಿಸುವಂತಾಗಿದೆ. ಕಲ್ಯಾಣ ಕರ್ನಾಟಕ ಹಾಗೂ ಬಯಲುಸೀಮೆಯ ಬಹುತೇಕ ಜಲಮೂಲಗಳು ಬತ್ತಿ ಹೋಗಿದ್ದರಿಂದ ಕುಡಿಯುವ ನೀರಿಗೆ ತತ್ವಾರ ಎದ್ದಿದೆ.
ಮಲೆನಾಡಿನ ನದಿಗಳೂ ಬಹುತೇಕ ಬತ್ತಿ ಹೋಗಿವೆ. ಹೀಗಾಗಿ ನೀರಿಗಾಗಿ ಜನಸಾಮಾನ್ಯರು ತಾಪತ್ರಯ ಅನುಭವಿಸುವಂತಾಗಿದೆ. ಹಲವೆಡೆ ವಾರಕ್ಕೊಮ್ಮೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ.
ನಗರ ಪ್ರದೇಶಗಳಲ್ಲಿ ಟ್ಯಾಂಕರ್ ನೀರು ದುಪ್ಪಟ್ಟು ಬೆಲೆಗೆ ಮಾರಾಟ ವಾಗುತ್ತಿದೆ. ಜಾನುವಾರುಗಳಿಗೆ ಮೇವಿನ ಕೊರತೆಯೂ ತೀವ್ರವಾಗಿಬಾಽಸುತ್ತಿದೆ. ಅಗತ್ಯವಿದ್ದ ಕಡೆಗೆ ಗೋಶಾಲೆಗಳನ್ನು ತೆರೆಯುವ ಕೆಲಸವೂ ಆಗಿಲ್ಲ. ಬೇಸಿಗೆ ಪರಿಸ್ಥಿತಿಯನ್ನು ನಿಭಾಯಿಸಲು ಪ್ರತಿಯೊಂದು ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯಪಡೆ ಗಳನ್ನು ರಚಿಸಲಾಗಿರುತ್ತದೆ.
ಮಳೆಗಾಲ ಶುರುವಾಗುವವರೆಗೆ ಎಲ್ಲಿ ನೀರಿನ ಕೊರತೆ ಇದೆಯೋ ಅಲ್ಲಲ್ಲಿ ಸಮರ್ಪಕವಾಗಿ ಪೂರೈಕೆ ಮಾಡಬೇಕಾದ ಜವಾಬ್ದಾರಿಯನ್ನು ಈ ಕಾರ್ಯ ಪಡೆಗಳು ಹೊತ್ತಿರುತ್ತವೆ. ಇಂತಹ ಕಾರ್ಯಪಡೆಗಳು ಈ ಬಾರಿ ಪರಿ ಣಾಮಕಾರಿಯಾಗಿ ಕೆಲಸ ಮಾಡದೇ ಇರುವುದರಿಂದ ಈ ಪರಿಸ್ಥಿತಿ ತಲೆದೋರಿದೆ. ಆದ್ದರಿಂದ  ಈಗಲಾದರೂ ಸರಕಾರವು ಮುತುವರ್ಜಿ ವಹಿಸಿ, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಶಾಶ್ವತ ನೀರು ಪೂರೈಕೆ ಯೋಜನೆ ಅನುಷ್ಠಾನಕ್ಕೆ ತರುವುದು ಆದ್ಯತೆಯಾಗಬೇಕಿದೆ.
ಗ್ರಾಮಗಳು ಮಾತ್ರವಲ್ಲ, ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲೂ ಕುಡಿಯುವ ನೀರಿನ ಕೊರತೆಇದೆ. ಮಳೆನೀರು ಸಂಗ್ರಹ, ಸಂಸ್ಕರಿತ ತ್ಯಾಜ್ಯ ನೀರಿನ ಮರುಬಳಕೆಯಂತಹ ಕ್ರಮಗಳ ಕಡೆಗೂ ಗಮನ ಹರಿಸಬೇಕಿದೆ. ನಗರದ ಬೇಡಿಕೆಯ ಶೇ.೭೦ರಷ್ಟು ಪ್ರಮಾಣದ ನೀರನ್ನು ಮಳೆ ನೀರಿನ ಸಂಗ್ರಹದಿಂದಲೇ ಪಡೆಯಬಹುದು ಎನ್ನಲಾಗಿದೆ. ಆದ್ದರಿಂದ ನಾಗರಿಕರಲ್ಲಿ ಈ ಕುರಿತು ಅರಿವು ಮೂಡಿಸುವ ಕೆಲಸವನ್ನು ಮಾಡಬೇಕಿದೆ.
ನೀರಿನ ಕೊರತೆ ನೀಗಿಸುವುದಕ್ಕಿಂತ ಬೇರೆ ಯಾವ ಮಹತ್ವದ ಕೆಲಸವೂ ಇಲ್ಲ ಎಂಬುದನ್ನು ಸರಕಾರ  ಮನಗಾಣಬೇಕಿದೆ. ಪ್ರತಿ ಬೇಸಿಗೆಯಲ್ಲೂ ಈ ಪರಿಸ್ಥಿತಿ ತಲೆದೋರುವುದರಿಂದ ಇದಕ್ಕೊಂದು ಶಾಶ್ವತಪರಿಹಾರ ಕಲ್ಪಿಸುವಲ್ಲಿ ಯೋಜನೆ ರೂಪಿಸಬೇಕಿದೆ.