ಜಾತಿ ಆಧಾರಿತ ಮುಖ್ಯಮಂತ್ರಿ ಬೇಕೆ?
ರಾಜ್ಯ ವಿಧಾನಸಭೆ ಚುನಾವಣೆಯ ರಂಗೇರಿದ ಅಖಾಡದಲ್ಲಿ ಪ್ರಮುಖ ಜಾತಿಗಳನ್ನು ಒಲೈಸುವಲ್ಲಿ ಎಲ್ಲ ಪಕ್ಷಗಳೂ ನಿರತ ವಾಗಿವೆ. ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಆದಿಯಾಗಿ ಎಲ್ಲ ಪಕ್ಷಗಳೂ ಜಾತಿ ಲೆಕ್ಕಾಚಾರದಲ್ಲಿ ಬಹುಸಂಖ್ಯಾತರಾಗಿರುವ ಲಿಂಗಾಯತ,ಕುರುಬ ಸೇರಿದಂತೆ ಮತ್ತಿತರ ಸಮುದಾಯಗಳ ಓಲೈಕೆಗೆ ಎಲ್ಲಿಲ್ಲದ ಕಸರತ್ತು ನಡೆಸಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಹತ್ತಾರು ಬಾರಿ ಬಂದಾಗಲೂ ಕೂಡಲಸಂಗಮಕ್ಕೆ ಭೇಟಿ ನೀಡಬೇಕು ಎಂದು ಅಂದುಕೊಂಡವರಲ್ಲ. ಇದೀಗ ಚುನಾವಣೆ ಇರುವುದರಿಂದ ರಾಜ್ಯದಲ್ಲಿ ಬಹುಸಂಖ್ಯಾತರಾ ರುವ ಲಿಂಗಾಯತ ಮತಗಳನ್ನು ಸೆಳೆಯಲು ಇದೀಗ ಕೂಡಲಸಂಗಮಕ್ಕೆ ಭೇಟಿ ನೀಡಿರುವುದು ಸ್ಪಷ್ಟ. ಬೇರೆ ಬೇರೆ ಪಕ್ಷಗಳ ನಾಯಕರೂ ಆಯಾ ಜಾತಿ, ಸಮುದಾಯಗಳ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುತ್ತಲೇ ಇದ್ದಾರೆ.
ಹಾಗಾದರೆ ಜನಪ್ರತಿನಿಧಿಗಳಾಗಬಯಸುವವರು ಜಾತಿ ಆಧಾರಿತವಾಗಿಯೇ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ ಎಂಬುದು ಸ್ಪಷ್ಟ. ಅಭಿವೃದ್ಧಿ, ಮುಂದಿನ ಐದು ವರ್ಷಗಳ ಪ್ರಣಾಳಿಕೆಗಳು ಹೆಸರಿಗೆ ಮಾತ್ರ ಎಂಬಂತಾಯಿತಲ್ಲವೇ? ಇನ್ನೊಂದೆಡೆ, ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುವುದಕ್ಕೆ ಮುನ್ನವೇ ರಾಜ್ಯದಲ್ಲಿ ಜಾತಿ ಆಧಾರಿತ ಮುಖ್ಯಮಂತ್ರಿ ಕುರಿತು ಜೋರಾಗಿ ಚರ್ಚೆ ನಡೆದಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಜಾತಿ ಹೆಸರನ್ನು ಮುನ್ನೆಲೆಗೆ ತಂದು ಪಕ್ಷಗಳು ಆರೋಪ, ಪ್ರತ್ಯಾರೋಪ ಮಾಡುತ್ತಲೇ ಇವೆ. ಅದರಲ್ಲೂರಾಜ್ಯದ ಅಧಿಕಾರಕ್ಕೇರಲು ಹೊರಟಿರುವ ಪಕ್ಷಗಳ ನಾಯಕರು ಈಗ ಈ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಿzರೆ. ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗ, ಕುರುಬ, ದಲಿತ ಜಾತಿಯವರನ್ನು ಮುಖ್ಯಮಂತ್ರಿ ಮಾಡಿ ಎಂದು ಎದುರಾಳಿ ಪಕ್ಷಕ್ಕೆ ಆಗಾಗ ಸವಾಲು ಎಸೆಯುತ್ತಾ ಕಿಡಿ ಹೊತ್ತಿಸುತ್ತಿದ್ದಾರೆ. ಹಾಗಾದರೆ ಮುಖ್ಯಮಂತ್ರಿಯಾದವರು ತಮ್ಮ ತಮ್ಮ ಜಾತಿಗಷ್ಟೇ ಸೀಮಿತವಾಗಿ ಇರುತ್ತಾರೆ ಯೇ? ರಾಜ್ಯದಲ್ಲಿ ಬೇರೆ ಜಾತಿಗಳು ಇಲ್ಲವೇ? ಅವರಿಗೆಲ್ಲ ಅವರು ಮುಖ್ಯಮಂತ್ರಿಯಾಗುವುದಿಲ್ಲವೇ? ಅಷ್ಟಕ್ಕೂ ಮುಖ್ಯಮಂತ್ರಿಯಾಗಲು ಜಾತಿಯು ಮಾನದಂಡವೇ? ಇಂತಹ ಹಲವು ಪ್ರಶ್ನೆಗಳನ್ನು ಇತ್ತೀಚಿನ ಚರ್ಚೆಗಳು ಹುಟ್ಟುಹಾಕುತ್ತಿವೆ.
ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ಜಾತ್ಯತೀತ, ಸಮಾನತೆಯನ್ನು ಒಪ್ಪಿಕೊಂಡಿದ್ದೇವೆ. ಅದರಂತೆ ನಡೆದುಕೊಳ್ಳುತ್ತೇವೆ  ಎಂದು ಹೇಳಿಕೊಳ್ಳುತ್ತೇವೆ. ಆದರೆ ಇದು ಸುಳ್ಳು ಎನ್ನುವುದು ರುಜುವಾತು ಆಗುತ್ತಿದೆ.