ಇನ್ನಾದರೂ ಆತ್ಮಾವಲೋಕನವಾಗಲಿ
ಆತ್ಮಾವಲೋಕನಕ್ಕಿದು ಸಕಾಲ. ರಾಜ್ಯದ ಮತದಾರ ತನ್ನ ಖಚಿತ ತೀರ್ಪನ್ನು ನೀಡಿದ್ದಾನೆ. ಗೆಲುವಿಗೆ ಅಪ್ಪಂದಿರು ಹತ್ತಾರುಮಂದಿ. ಆದರೆ ಸೋಲಿಗೆ ಹೊಣೆ? ನಿಶ್ಚಿತವಾಗಿಯೂ ನಾಯಕತ್ವ. ಹಾಗೆ ನೋಡಿದರೆ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿದ ಬಿಜೆಪಿಯ ಹೀನಾಯ ಸೋಲಿಗೆ ತಾವೇ ಹೊಣೆಯೆಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಬ್ಬರೂ ಹೇಳಿಕೆಯೇನೋ ಕೊಟ್ಟಿದ್ದಾರೆ.
ಇಲ್ಲಿ ವ್ಯಕ್ತಿಗಳಿಗಿಂತ ಕಾರಣಗಳು ಅತ್ಯಂತ ಮುಖ್ಯವಾಗುತ್ತವೆ. ಸೋಲಿನ ಹೊಣೆಹೊತ್ತು ಒಪ್ಪಿಕೊಳ್ಳುವುದು ಒಂದೆಡೆಯಾದರೆ, ಸೋಲಿನ ಆತ್ಮಾವಲೋಕ ನಕ್ಕಳಿಯುವುದು ಸಾಮೂಹಿಕ ಜವಾಬ್ದಾರಿಯಾಗುತ್ತದೆ. ಹಾಗೆ ನೋಡಿದರೆ ಚುನಾವಣೆ ಫಲಿತಾಂಶ ಬಂದು ಆಗಲೇ ನಾಲ್ಕು ದಿನಗಳು ಕಳೆದಿವೆ. ಸಂಪುಟದ ಘಟಾನುಘಟಿ ಸಚಿವರೂ ಸೇರಿದಂತೆ ಸೋತವರ ಸಂಖ್ಯೆ ತುಂಬ ದೊಡ್ಡದಿದೆ.
ಆಡಳಿತವಿರೋಧಿ ಅಲೆಯಲ್ಲಿ ಇವರೆಲ್ಲರೂ ಕೊಚ್ಚಿಕೊಂಡು ಹೋಗಿದ್ದಾರೆ ಎಂಬುದನ್ನು ಹೊರತುಪಡಿಸಿಯೂ ಇಂಥ ಸನ್ನಿವೇಶಕ್ಕೆ ಕಾರಣಗಳು ಹಲವಿವೆ. ಬಿಜೆಪಿಯಂಥ ಶಿಸ್ತಿನ ಪಕ್ಷದ ಆಡಳಿತವಿದ್ದಾಗ, ಅದರಲ್ಲೂ ಭಾರತದ ಮಾದರಿ ನಾಯಕ ನೆಂದೇ ವಿಶ್ವಮಟ್ಟದಲ್ಲಿ ಆದರಿಸಲ್ಪಡುತ್ತಿರುವ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಕುಳಿತಿರುವಾಗ ಕೇಳಿ ಬಂದ, ಬರುತ್ತಲೇ ಇದ್ದ ಶೇ.೪೦ ಭ್ರಷ್ಟಾ ಚಾರ ಆರೋಪಗಳನ್ನು ನಿರ್ಲಕ್ಷಿಸಿದ್ದೂ ಎಲ್ಲೋ ಒಂದು ಕಡೆ ಚುನಾವಣೆಯ ಮೇಲೆ ನೇರ ಪರಿಣಾಮ ಬೀರಿದೆ ಎನ್ನದೇ ವಿಧಿ ಯಿಲ್ಲ.
ಭ್ರಷ್ಟಾಚಾರದ ಕಾರಣಕ್ಕೆ ಯಡಿಯೂರಪ್ಪನವರನ್ನು ಕೆಳಗಿಳಿಸಿ, ಭಾರೀ ಬದಲಾವಣೆಯ ಆಶಯದೊಂದಿಗೆ, ತೀವ್ರ ಪೈಪೋಟಿಯ ನಡುವೆಯೂ ‘ಹೇಳಿದಂತೆ ಕೇಳುವ’ ವ್ಯಕ್ತಿ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಿದ್ದಾಗಿತ್ತಲ್ಲವೇ? ಹಾಗಿದ್ದೂ ರಾಜ್ಯದ ಹತೋಟಿಗೆ ವರಿಷ್ಠರು ಮುಂದಾಗಲಿಲ್ಲವೇಕೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತಿದೆ.
ಫಲಿತಾಂಶ ಖಷಿ ತಂದಿಲ್ಲದಿದ್ದರೂ ದುಃಖವಂತೂ ಇಲ್ಲ ಎಂಬಂತಿದೆ ಸ್ವತಃ ಬಹಳಷ್ಟು ಬಿಜೆಪಿಗರ ಸ್ಥಿತಿ. ಬಿಜೆಪಿಯ ರಾಷ್ಟ್ರೀಯತೆಯ ಪರಿಕಲ್ಪನೆ ರಾಜ್ಯದಲ್ಲಿ ಕೇವಲ ‘ಹಿಂದುತ್ವ ರಾಜಕಾರಣ’ ಎನಿಸಿಕೊಂಡಿದ್ದಿರಿಬಹುದು, ಸಮರ್ಥ ಪ್ರಾದೇಶಿಕ ನಾಯಕತ್ವ ವೇ ಇಲ್ಲದಂತಾಗಿ, ಕೇಂದ್ರದೆದುರು ರಾಜ್ಯದ ಧ್ವನಿ ಕಳೆದುಹೋಗಿದ್ದರಿಬಹುದು, ವ್ಯಾಟ್-ಜಿಎಸ್‌ಟಿ ವ್ಯವಸ್ಥೆ ಇದ್ದೂ ಮಿತಿಮೀರಿದ ತೆರಿಗೆ ಸೇರಿದಂತೆ ಅನುದಾನದ ವಿಚಾರದಲ್ಲಿ ಆದ ತಾರತಮ್ಯವನ್ನೂ ಪ್ರಶ್ನಿಸಲಾಗದ ಸ್ಥಿತಿಯ ದುರ್ಬಲ ರಾಜ್ಯ ನಾಯಕತ್ವವಿರಬಹುದು, ಕನಿಷ್ಠ ನೆರೆ ಹಾವಳಿಯಂಥ ವಿಕೋಪದಲ್ಲೂ ರಾಜ್ಯದತ್ತ ನೋಡದೇ ಇದ್ದಂಥ ಉದ್ದೇಶಪೂರ್ವಕ ಕೇಂದ್ರದ ನಿರ್ಲಕ್ಷ್ಯ(?) ಇವೆಲ್ಲವನ್ನೂ ರಾಜ್ಯದ ಮತದಾರ ನೋಡದೇ ಉಳಿದಿಲ್ಲ. ಇಂಥವೆಲ್ಲ ವಿಚಾರಗಳಿಗೆ ಯಡಿಯೂರಪ್ಪ-ಅನಂತ್‌ಕುಮಾರ್‌ಗೆ ಪರ್ಯಾಯ ಬೇಕಿತ್ತು. ಈ ಎಲ್ಲದರ ಆತ್ಮಾವಲೋಕನ ಇನ್ನಾದರೂ ಮಾಡಿಕೊಂಡರೊಳಿತು.