ಗ್ಯಾರಂಟಿಗಳ ವಿವೇಚನೆ ಇರಲಿ
ಸರಕಾರವೇ ರಚನೆಯಾಗಲಿಲ್ಲ ಆಗಲೇ, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಚುನಾವಣೆಯಲ್ಲಿ ನೀಡಿದ್ದ ಗ್ಯಾರಂಟಿ ಭರವಸೆಗಳನ್ನು ಆಧರಿಸಿ ಸೌಲಭ್ಯಗಳಿಗೆ ಕೈ ಚಾಚುತ್ತಿದ್ದಾರೆ ರಾಜ್ಯದ ಜನತೆ. ಅದರಲ್ಲೂ ಗ್ಯಾರಂಟಿಗಳಲ್ಲಿ ಒಂದಾದ ೨೦೦ ಯೂನಿಟ್ ವಿದ್ಯುತ್ ಉಚಿತದ ಕುರಿತು ಹೆಚ್ಚಿನ ಚರ್ಚೆ ನಡೆಯುತ್ತಿದೆ. ಎರಡು ದಿನದ ಹಿಂದೆ ಚಿತ್ರದುರ್ಗ ಜಿಲ್ಲೆಯ ಗ್ರಾಮ ವೊಂದರಲ್ಲಿ ವಿದ್ಯುತ್  ಮಾಪನ ಬರೆಯಲು ಬಂದಿದ್ದ ಸಿಬ್ಬಂದಿಯ ಬಳಿ ತಗಾದೆ ತೆಗೆದ ಜನ, ಆತನನ್ನು ವಾಪಸು ಕಳುಹಿಸಿದ್ದರು.
ಇಂಥದ್ದೇ ಘಟನೆ ಚಾಮರಾಜನಗರ ಜಿಲ್ಲೆಯಲ್ಲೂ ಮರುಕಳಿಸಿದೆ. ‘ಜೂನ್‌ನಿಂದಲೇ ನೀವ್ಯಾರೂ ವಿದ್ಯುತ್ ಬಿಲ್ ಪಾವತಿಸು ವಂತೆಯೇ ಇಲ್ಲ’ ಎಂದು ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರಚಾರ ಸಭೆಯೊಂದರಲ್ಲಿ ಹೇಳಿರುವ ವಿಡಿಯೋ ಸಹ ಎಲ್ಲೆಡೆ ವೈರಲ್ ಆಗುತ್ತಿದ್ದು, ರಾಜ್ಯಾದ್ಯಂತ ವಿದ್ಯುತ್ ಮಾಪನ ಮಾಡಲೇ ಅವಕಾಶ ಕೊಡದ ಘಟನೆಗಳು ಹೆಚ್ಚಿ, ಎಸ್ಕಾಂ ಸಿಬ್ಬಂದಿ ಪೇಚಿಗೆ ಸಿಲುಕಿದ್ದಾರೆ. ನಿಜಕ್ಕೂ ಇದು ಗಂಭೀರ ಸಂಗತಿಯೇ.
ಗ್ಯಾರಂಟಿಗಳ ಘೋಷಣೆಗಳು ಆಗಿವೆಯೇ ಹೊರತು ಇದರ ಜಾರಿಯ ಸ್ವರೂಪದ ಬಗೆಗೆ ಯಾವೊಬ್ಬ ನಾಯಕರಿಗೂ ಸ್ಪಷ್ಟ ಮಾಹಿತಿ ಇಲ್ಲ. ಇನ್ನೂ ಮುಖ್ಯಮಂತ್ರಿ ಆಯ್ಕೆಯ ಗೊಂದಲವೇ ಮುಗಿಯದೇ, ಸರಕಾರವೇ ಅಸ್ತಿತ್ವಕ್ಕೆ ಬರದಿರುವುದರಿಂದ ಅಧಿಕಾರಿಗಳಲ್ಲೂ ಗೊಂದಲ ಹೆಚ್ಚಿದೆ. ವಿದ್ಯುತ್‌ವೊಂದರ ವಿಚಾರವನ್ನೇ ತೆಗೆದುಕೊಂಡರೆ ರಾಜ್ಯದ ಎಲ್ಲರಿಗೂ ೨೦೦ ಯುನಿಟ್ಉಚಿತವೇ? ಅದಕ್ಕಿಂತ ಹೆಚ್ಚು ಬಳಕೆಯಾದರೆ ಕತೆಯೇನು? ಹೆಚ್ಚುವರಿ ಬಳಕೆಗೆ ಮಾತ್ರ ಶುಲ್ಕವೇ ಅಥವಾ ಅಂಥ ಸನ್ನಿವೇಶದಲ್ಲಿ ಅಷ್ಟೂ ಬಳಕೆಗೆ ಶುಲ್ಕ ಹಾಕಲಾಗುತ್ತದೆಯೇ ಇತ್ಯಾದಿ ಪ್ರಶ್ನೆಗಳಿಗಿನ್ನೂ ಉತ್ತರ ಸಿಕ್ಕಿಲ್ಲ.
ಇಂಥದೇ ಗೊಂದಲ ಉಳಿದ ಗ್ಯಾರಂಟಿಗಳ ಬಗೆಗೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ವತಃ ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯೇ ಹೇಳಿ ಕೊಂಡಂತೆ, ಘೋಷಿಸಿರುವ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ ಅಂದಾಜು ೫೦ ಸಾವಿರ ಕೋಟಿ ರುಪಾಯಿಗಳು ಬೇಕಾಗುತ್ತವೆ. ಕರ್ನಾಟಕ ಸರಕಾರದ ಬಜೆಟ್ ಗಾತ್ರ ಸುಮಾರು ಮೂರು ಲಕ್ಷ ಕೋಟಿ ರೂ. ಇದರಲ್ಲಿ ಶೇ೪೪ ರಷ್ಟು ವೇತನ-ಭತ್ಯೆ ಇತ್ಯಾದಿಗಳಿಗೇ ವೆಚ್ಚವಾಗುತ್ತದೆ. ತಜ್ಞರ ಪ್ರಕಾರ ಉತ್ತಮ ಆರ್ಥಿಕತೆಯಲ್ಲಿ ಕನಿಷ್ಠ ಶೇ.೬೦ ಪಾಲು ಸುಸ್ಥಿರ ಅಭಿವೃದ್ಧಿಗೆ ಖರ್ಚು ಮಾಡಬೇಕು.
ಗ್ಯಾರಂಟಿಗಳೆಲ್ಲವನ್ನೂ ರಾಜ್ಯದ ಕಲ್ಯಾಣ ಕ್ರಮಗಳೆಂದೇ ಅಂದುಕೊಂಡರೂ ಆರ್ಥಿಕ ಪರಿಣಾಮಗಳನ್ನು ಗಮನಿಸಿದರೆರಾಜ್ಯದ ಬೊಕ್ಕಸಕ್ಕೆ ಹೊರೆ ಖಂಡಿತ. ಹೀಗಿದ್ದಾಗ ಕರ್ನಾಟಕದ ಇಂದಿನ ಸನ್ನಿವೇಶದಲ್ಲಿ ಗ್ಯಾರಂಟಿಗಳ ಜಾರಿಗೆ ಸರಕಾರದ ಬಳಿ ಹಣ ಎಲ್ಲಿದೆ? ಉಳಿದಂತೆ ಅನುದಾನಗಳು, ಯೋಜನೆಗಳ ಮಾತು ಬೇರೆಯದು. ಈ ಎಲ್ಲ ಹಿನ್ನೆಲೆಯಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವ ವ್ಯಕ್ತಿ, ಗ್ಯಾರಂಟಿ ಘೋಷಣೆಯಲ್ಲಿ ತೋರಿದಂಥ ಹುಂಬತನ ತೋರದೇ, ವಿವೇಚನೆಯಿಂದ ವರ್ತಿಸಬೇಕಾದ ಅಗತ್ಯವಿದೆ.