ಸಿದ್ದು ಸಾರಥ್ಯ: ಭರವಸೆ ಸುಳ್ಳಾಗದಿರಲಿ
ಕರ್ನಾಟಕ ಕಂಡ ಅತಿ ಜನಪ್ರಿಯ, ಚತುರ ರಾಜಕಾರಣಿ, ಸಾಮೂಹಿಕ ನಾಯಕ ಸಿದ್ದರಾ ಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಯಾಗುವುದು ಖಚಿತವಾಗಿದೆ. ಎಲ್ಲವೂ ಸರಿಯಾಗಿ ನಡೆದರೆ, ಶನಿವಾರ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿ ರಾಜ್ಯದ ೨೪ನೇ ಮುಖ್ಯ ಮಂತ್ರಿಯಾಗಲಿದ್ದಾರೆ. ಈ ರಾಜ್ಯದ ಧೀಮಂತ ನಾಯಕ ದೇವರಾಜ ಅರಸು ನಂತರದ ಬಡವರ ಪರ ಕಾಳಜಿ ಹೊಂದಿರುವ, ದೀನದಲಿತರ ಪರ ನಾಯಕ ಎಂದೇ ಖ್ಯಾತರಾದ ಸಿದ್ದರಾಮಯ್ಯ ಒಂದು ಅವಧಿಯ ಸಂಪೂರ್ಣ ಅಧಿಕಾರ ನಡೆಸಿಯೂ ನಿ ಷ್ಕಳಂಕ ವ್ಯಕ್ತಿತ್ವವನ್ನು ಕಾಪಾಡಿಕೊಂಡವರು.
ಮೂಲ ವೃತ್ತಿ ವಕೀಲಿಕೆಯ ತೊರೆದು ೧೯೮೩ರಲ್ಲಿ ಭಾರತೀಯ ಲೋಕದಳದಿಂದ ವಿಧಾನಸೌಧಕ್ಕೆ ಕಾಲಿಟ್ಟ ಬಳಿಕ ಹಿಂತಿರುಗಿ ನೋಡಿಲ್ಲ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ, ರೇಷ್ಮೆ ಮತ್ತು ಸಾರಿಗೆ ಸೇರಿದಂತೆ ಹಲವು ಖಾತೆಗಳನ್ನು ಸಮರ್ಥವಾಗಿ  ನಿಭಾಯಿಸಿದ ಅನುಭವಿ. ದಾಖಲೆಯ ೧೩ ಬಜೆಟ್‌ಗಳನ್ನು ಮಂಡಿಸಿ, ಆರ್ಥಿಕ ನಿರ್ವಹಣೆ ಯಲ್ಲಿ ಪಳಗಿದವರು. ಪಕ್ಷದಲ್ಲಿ ತೀವ್ರ ಪೈಪೋಟಿಯ ನಡುವೆಯೂ ಡಿಕೆಶಿ ಬದಲು ಇವರೇ ಮುಖ್ಯಮಂತ್ರಿ ಹುದ್ದೆಗೆ ಹೈಕಮಾಂಡ್‌ನ ಮೊದಲ ಆಯ್ಕೆಯಾಗಿದ್ದುದಕ್ಕೆ ಇದೂ ಒಂದು ಕಾರಣವೆನ್ನಬಹುದು.
ಏಕೆಂದರೆ ಐದು ಗ್ಯಾರಂಟಿಗಳೂ ಸೇರಿದಂತೆ ಪಕ್ಷದ ಪ್ರಣಾಳಿಕೆಯ ಜಾರಿಗೆ ಆರ್ಥಿಕ ತಜ್ಞತೆಯ ಅಗತ್ಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇನ್ನೊಂದು ವರ್ಷದಲ್ಲಿ ಲೋಕಸಭಾ ಚುನಾವಣೆಯೂ ಎದುರಾಗಲಿರುವುದರಿಂದ ಆಡಳಿತ ಚುಕ್ಕಾಣಿಗೆ ಸಿದ್ದು ಅವರಂಥಅನುಭವಿ, ಪಕ್ಷದ ಸಾರಥ್ಯಕ್ಕೆ ಡಿಕೆಯಂಥ ಮುನ್ನುಗ್ಗುವ ಮನೋಭಾವದ ಟ್ರಬಲ್‌ಶೂಟರ್ ಅನಿವಾರ್ಯ. ರಾಜ್ಯದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಪರಿಚಯಕ್ಕೆ ಕಾರಣರಾದ ಸಿದ್ದರಾಮಯ್ಯ, ಡಿಸಿಎಂ, ಸಿಎಂ, ಪ್ರತಿಪಕ್ಷದ ನಾಯಕ ಹೀಗೆ ಮೂರೂ ಹುದ್ದೆಗಳನ್ನು ನಿರ್ವಹಿಸಿದ ಏಕೈಕ ನಾಯಕ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ.
ಈಗಾಗಲೇ ಎರಡು ಅವಧಿಗೆ ಪ್ರತಿಪಕ್ಷ ನಾಯಕರಾಗಿದ್ದ ಅವರು, ಇದೀಗ ಮತ್ತೆ ಮುಖ್ಯಮಂತ್ರಿಯಾಗುವ ಮೂಲಕ ಪೂರ್ಣಾವಧಿ ಮುಗಿಸಿಯೂ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಿರುವ ಮೂರನೇ ನಾಯಕ ಎಂಬ ನಿಜಲಿಂಗಪ್ಪ, ಅರಸು ದಾಖಲೆ ಯನ್ನು ಸರಿಗಟ್ಟಿದ್ದಾರೆ. ರಾಮಕೃಷ್ಣ ಹೆಗಡೆಯವರ ನಂತರ ಮುಖ್ಯಮಂತ್ರಿ ಹುದ್ದೆಯಲ್ಲಿದ್ದು, ಮತ್ತೆ ಆಯ್ಕೆಯಾಗಿ ಸಿಎಂ ಆಗುತ್ತಿರುವುದೂ ಸಿದ್ದರಾಮಯ್ಯ ಮಾತ್ರವೇ. ೧೩೫ ಸ್ಥಾನಗಳ ಭರ್ಜರಿ ಜಯವನ್ನು ಕಾಂಗ್ರೆಸ್ ದಾಖಲಿಸಿದ್ದುದರಲ್ಲಿ ‘ಮುಂದಿನ ಸಿಎಂ ಸಿದ್ದರಾಮಯ್ಯ’ ಎಂಬ ಜನತೆಯಲ್ಲಿದ್ದ ಆಶಯವೂ ಒಂದು ಕಾರಣ ಎಂಬುದು ನಿರ್ವಿವಿವಾದ.
ಹಿಂದುಳಿದ ನಾಯಕರಾಗಿದ್ದರೂ ಲಿಂಗಾಯತ ಸೇರಿದಂತೆ ರಾಜ್ಯಾದ್ಯಂತ ಜನ ಜಾತ್ಯತೀತವಾಗಿ ಸಿದ್ದು ಬೆಂಬಲಿಸಿದ್ದಾರೆ. ಹೀಗಾಗಿ ಸಹಜವಾಗಿ ನಿರೀಕ್ಷೆ ಬಹಳಷ್ಟಿದೆ. ಒಂದು ಅವಧಿಗೆ ಸಾಕಷ್ಟು ಅಭಿವೃದ್ಧಿ ಪರ, ಒಳ್ಳೆಯ ಆಡಳಿತ ನೀಡಿರುವುದರಿಂದ ಈ ಇನ್ನಿಂಗ್ಸ್ ನಲ್ಲಿ ನಿರೀಕ್ಷೆ ಇನ್ನಷ್ಟು ಹೆಚ್ಚಿದೆ. ಭರವಸೆಯೂ ಇದೆ. ಸಿದ್ದರಾಮಯ್ಯನವರಂಥ ಹಿರಿಯ, ಅನುಭವಿಯ ನಾಯಕತ್ವ ದಲ್ಲಿ ಐದು ವರ್ಷಗಳ ಸ್ಥಿರ ಸರಕಾರ ದೊಂದಿಗೆ, ಭ್ರಷ್ಟಮುಕ್ತ ಆಡಳಿತ, ಅಭಿವೃದ್ಧಿಯ ಕನಸು ಸಾಕಾರವಾಗಲಿ.