ಮಳೆ ಅವಾಂತರ: ಬಿಬಿಎಂಪಿ- ಕಂದಾಯ ಇಲಾಖೆ ಸಮನ್ವಯತೆ ಇರಲಿ
ಭಾನುವಾರ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಇಡೀ ನಗರದ ಜನಜೀವನ ಅಸ್ತವ್ಯಸ್ತವಾಗಿದ್ದು, ಒಂದು ಜೀವ ಹಾನಿಯೂ ಆಗಿದೆ. ಕೆ.ಆರ್.ವೃತ್ತದ ಕೆಳಸೇತುವೆಯಲ್ಲಿ ಮಳೆಯಿಂದ ಸಂಗ್ರಹಗೊಂಡಿದ್ದ ನೀರಿನಲ್ಲಿ ಕಾರೊಂದು ಸಿಲುಕಿ, ಕಾರಿ ನಲ್ಲಿದ್ದ ಏಳು ಜನರ ಪೈಕಿ ಆರು ಮಂದಿಯನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದೆ.
ಮತ್ತೊಬ್ಬರು ೨೩ ವರ್ಷದ ಬಾನು ರೇಖಾ ಎಂಬುವವರು ಅಸುನೀಗಿದ್ದಾರೆ. ಬೆಂಗಳೂರಿನಲ್ಲಿ ಮಳೆಯ ಅನಾಹುತಗಳ ನಡೆಯುವುದು ಇದೇ ಮೊದಲಲ್ಲ. ಪ್ರತಿ ಮಳೆಗಾಲ ಬಂದಾಗಲೂ ಜೀವ ಹಾನಿ, ಅಪಾರ ಆಸ್ತಿ ಪಾಸ್ತಿ ನಷ್ಟ ಆಗುತ್ತಲೇ ಇದೆ. ಬೆಂಗಳೂರಿನಲ್ಲಾದ ಅನಾಹುತಕ್ಕೆ ಕಾರಣ ಭಾರಿ ಮಳೆ ಎನ್ನುವುದು ನೆಪವಷ್ಟೇ. ನದಿಗಳು, ಕೆರೆಗಳು ಇದ್ದ ಜಾಗವನ್ನು ಮನುಷ್ಯರು ಆಕ್ರಮಿಸಿ ಕೊಂಡಿರುವುದರ ಪರಿಣಾಮವೇ ಇಂದು ದೊಡ್ಡ ಮಟ್ಟದ ಅನಾಹುತ ಸೃಷ್ಟಿಯಾಗಲು ಕಾರಣವಾಗಿದೆ. ಒತ್ತುವರಿಯಾಗಿರುವ ರಾಜಕಾಲುವೆಗಳು, ಯೋಜನಾಬದ್ಧವಾಗಿಲ್ಲದ ಮಹಾನಗರ ಮತ್ತು ಭ್ರಷ್ಟಾಚಾರದ ಪರಿಣಾಮವಾಗಿ ಬ್ರ್ಯಾಂಡ್ ಬೆಂಗಳೂರಿನ ಮರ್ಯಾದೆ ಜಾಗತಿಕ ಮಟ್ಟದಲ್ಲಿ ಹಾಳಾಗುತ್ತಿದೆ.
ನಗರದಲ್ಲಿನ ಮಳೆಯ ಅನಾಹುತಗಳು ಉದ್ಯಮ ವಲಯದಲ್ಲೂ ಆತಂಕ ಹುಟ್ಟಿಸಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ಬಂಡವಾಳ ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ‘ರಾಜ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ತಹಸೀಲ್ದಾರ್‌ಗಳು ಆದೇಶ ನೀಡದಿರುವುದರಿಂದ ಹಿನ್ನಡೆ ಉಂಟಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಜನವರಿಯಲ್ಲಿ ಹೇಳಿದ್ದರು. ಆಯುಕ್ತರ ಈ ಹೇಳಿಕೆ ಕಂದಾಯ ಇಲಾಖೆ ಮತ್ತು ಬಿಬಿಎಂಪಿ ನಡುವಿನ ಸಮನ್ವಯದ ಕೊರತೆಯನ್ನು ಎತ್ತಿ ತೋರಿಸುತ್ತದೆ.
ಆದ್ದರಿಂದ ಕಂದಾಯ ಇಲಾಖೆ ಮತ್ತು ಬಿಬಿಎಂಪಿ ಸಮನ್ವಯತೆಯಿಂದ ಕೆಲಸ ಮಾಡುವ ಮೂಲಕ ಬೆಂಗಳೂರನ್ನು ರಕ್ಷಿಸ ಬೇಕಿದೆ. ತಗ್ಗು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಮಳೆಯಿಂದ ಪ್ರವಾಹವನ್ನು ತಡೆಗಟ್ಟಬೇಕಾಗಿರುವ ಸ್ಥಳಗಳಲ್ಲಿ ಒತ್ತುವರಿ ಕಂಡುಬಂದಲ್ಲಿ ಭೂಮಾಪಕರು ಸರ್ವೇ ಕೈಗೊಂಡು ಮುಂದಿನ ಕ್ರಮಕ್ಕೆ ಶಿಫಾರಸು ಮಾಡಬೇಕು.
ಅಲ್ಲದೆ, ಎಲ್ಲ ನಿಯಮಗಳನ್ನೂ ಉಪೇಕ್ಷಿಸಿ ಅನಿಯಂತ್ರಿತವಾಗಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಬಗ್ಗೆಯೂ ಬಿಬಿಎಂಪಿ ಮತ್ತು ನೂತನವಾಗಿ ರಚನೆಯಾಗಿರುವ ರಾಜ್ಯ ಸರಕಾರ ಗಮನಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು.