ನೋಟು ಬದಲಾವಣೆಯಲ್ಲಿ ಕಮಿಷನ್ ದಂಧೆ ನಿಲ್ಲಲಿ
೨೦೦೦ ರುಪಾಯಿ ನೋಟು ರದ್ದತಿಯ ಚಾಲನೆ ಇಂದಿನಿಂದ ಜಾರಿಯಲ್ಲಿರುತ್ತದೆ. ಸೆಪ್ಟೆಂಬರ್ ಅಂತ್ಯದವರೆಗೆ ತಮ್ಮ ೨೦೦೦ ನೋಟುಗಳನ್ನು ಬದಲಿಸಿಕೊಳ್ಳುವ ಅವಕಾಶವೂ ಇದೆ. ಕಳೆದ ಬಾರಿ ನೋಟು ಬದಲಾವಣೆಗೆ ಕೆಲವು ದಾಖಲಾತಿಗಳನ್ನು ಕೊಡಬೇಕಿತ್ತು. ಈಗ ಯಾವುದೇ ದಾಖಲಾತಿ ಇಲ್ಲದೆ ತಮ್ಮ ನೋಟುಗಳನ್ನು ಬದಲಿಸಿಕೊಳ್ಳುವ ಅವಕಾಶವನ್ನು ರಿಸರ್ವ್ ಬ್ಯಾಂಕ್ ಕಲ್ಪಿಸಿದೆ.
ಆದರೆ ಕಳೆದ ಬಾರಿ ನೋಟು ಬದಲಾವಣೆ ವೇಳೆ ಸಾಕಷ್ಟು ಅಕ್ರಮಗಳು ನಡೆದ ಬಗ್ಗೆ ದೂರುಗಳು ಕೇಳಿ ಬಂದಿವೆ. ನೋಟು ಬದಲಾವಣೆಗೆ ಮಧ್ಯವರ್ತಿಗಳು ಹುಟ್ಟಿಕೊಂಡಿ ದ್ದರು.  ಇಂತಿಷ್ಟು ನೋಟು ಬದಲಾವಣೆಗೆ ಶೇಕಡಾವಾರು ಕಮಿಷನ್ ಕೊಡ ಬೇಕಿತ್ತು. ಬ್ಯಾಂಕ್ ಮ್ಯಾನೇಜರ್ ಮತ್ತು ಮಧ್ಯವರ್ತಿಗಳು ಇಂಥ ದಂಧೆಗೆ ಸಂಪರ್ಕ ಕಲ್ಪಿಸಿ ಕೊಂಡಿದ್ದರು. ಶೇ. ೩೦ ರಷ್ಟು ಕಮಿಷನ್ ವ್ಯವಹಾರವೂ ನಡೆದಿತ್ತು.
ಇದೆಲ್ಲ ಜನಸಾಮಾನ್ಯರಿಗೆ ವಂಚಿಸಿ ಕಾಣದ ಕೈಗಳು ಮಾಡಿದ ಅಕ್ರಮ ದಂಧೆಯಾಗಿತ್ತು. ಕೇವಲ ೨೦೦೦ ನೋಟಿಗೆ ಚಿಲ್ಲರೆ ಹಾಗೂ ನಮ್ಮ ಹಣವನ್ನು ಹತ್ತು ಸಾವಿರ ಸೀಮಿತದಲ್ಲಿ ಪಡೆಯುವುದಕ್ಕೆ ಜನಸಾಮಾನ್ಯರು ಮೈಲುದ್ದ ಕ್ಯೂ ನಿಂತ ದೃಶ್ಯಗಳು ಸರ್ವೇಸಾಮಾನ್ಯವಾಗಿತ್ತು. ಆದರೆ ಪ್ರಭಾವಿ ವ್ಯಕ್ತಿಗಳು, ಶ್ರೀಮಂತರು ತಮ್ಮ ನೋಟುಗಳ ಬದಲಾವಣೆಗೆ ಸಾಮಾನ್ಯ ಜನರಂತೆ ಕ್ಯೂ ನಿಂತ ದೃಶ್ಯ ಯಾವ ಬ್ಯಾಂಕಿನ ಮುಂದೆಯೂ ಕಂಡು ಬರಲಿಲ್ಲ.
ಇವರದೆಲ್ಲ ಒಳವ್ಯವಹಾರ ಮತ್ತು ಕಮಿಷನ್ ಬೇಸ್ ದಂಧೆಯಾಗಿತ್ತು. ಬ್ಯಾಂಕ್ ಮ್ಯಾನೇಜರ್‌ಗಳೇ ತಮಗೆ ಸಾಕಷ್ಟು ಕಮಿಷನ್ ಸಿಗುತ್ತದೆ ಎಂಬು ದುರಾಸೆಗೆ ಬಿದ್ದು ಪ್ರಭಾವಿಗಳ, ಶ್ರೀಮಂತರ ಮನೆ ಬಾಗಿಲು ತಟ್ಟಿದ ಸಾಕಷ್ಟು ನಿದರ್ಶನಗಳೂ ಇವೆ. ಆಗ ಕೊಟ್ಟ ಕಡಿಮೆ ಕಾಲಾವಧಿಯಲ್ಲೇ ಕೋಟ್ಯಂತರ ಹಣವನ್ನು ಬದಲಿಸಿಕೊಳ್ಳ ಲಾಯಿತು. ಈ ವೇಳೆ ಸಾಕಷ್ಟು ಬ್ಲಾಕ್‌ಮನಿ ವೈಟ್ ಆದದ್ದೂ ಉಂಟು. ಈಗಲೂ ಅಷ್ಟೇ ಕಮಿಷನ್ ಬೇಸ್ ಮೇಲೆ ಸಾಕಷ್ಟು ಅಕ್ರಮಗಳು ನಡೆಯುವ ಸಾಧ್ಯತೆ ಇದೆ.
೨೦೦೦ ರುಪಾಯಿ ನೋಟು ಬದಲಾವಣೆಗೆ ಈಗ ರಿಸರ್ವ್ ಬ್ಯಾಂಕ್ ಕೊಟ್ಟಿರುವ ಕಾಲಾವಧಿ ನಾಲ್ಕು ತಿಂಗಳು. ಇದು ಅಕ್ರಮಕ್ಕೆ ಸಾಕಷ್ಟು ದಾರಿ ಮಾಡಿಕೊಡುವ ಸಮಯವಾಗಿದೆ. ಹಾಗಾಗಿ ಈ ಸಮಯವನ್ನು ಕಡಿತ ಮಾಡಿ ಎಂಬ ಕೂಗು ಗ್ರಾಹಕರಿಂದ ಕೇಳಿ ಬರುತ್ತಿದೆ. ಇಂಥ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಾಗೂ ರಿಸರ್ವ್ ಬ್ಯಾಂಕ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ.