ಅಭಿವೃದ್ಧಿ ಪರ ರಾಜಕೀಯ ನಡೆ ಪಕ್ಷಗಳ ಆದ್ಯತೆಯಾಗಲಿ
ರಾಜ್ಯದ ಚುನಾವಣೆಗೆ ಮುನ್ನ ಘೋಷಿಸಿದಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ೫ ಗ್ಯಾರಂಟಿಗಳ ಜಾರಿಗೆ ಆದೇಶಿಸುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗಿದೆ. ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲ, ರಾಷ್ಟ್ರ ಮಟ್ಟದಲ್ಲೂ ಇದು ಸಂಚಲನವನ್ನು ಉಂಟು ಮಾಡಿದೆ. ಮುಂಬರುವ ಲೋಕಸಭಾ ಚುನಾವಣೆ ಹಾಗೂ ಇಷ್ಟರಲ್ಲೇ ಎದುರಾಗಲಿರುವ ಉತ್ತರದ ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣದಂತಹ ಪ್ರಮುಖ ರಾಜ್ಯಗಳ ಚುನಾವಣೆಯ ದೃಷ್ಟಿಯಿಂದಲೂ ಇದು ಪ್ರಾಮುಖ್ಯ ಪಡೆದಿದೆ.
ಒಂದೊಮ್ಮೆ ಈ ೫ ಗ್ಯಾರಂಟಿಗಳ ಜಾರಿಯಲ್ಲಿ ಕಾಂಗ್ರೆಸ್ ವಿ-ಲವಾಗಿದ್ದರೆ, ಬಿಜೆಪಿ ಇದನ್ನೇ ಚುನಾವಣಾ ಅಸ್ತ್ರವಾಗಿ ಬಳಸುವ ಎಲ್ಲ ಸಾಧ್ಯತೆಗಳಿದ್ದವು. ಆದರೆ, ಸರಕಾರ ರಚನೆಯಾಗಿ ಹತ್ತು ದಿನಗಳ ಒಳಗೆ ಗ್ಯಾರಂಟಿ ಜಾರಿ ಮಾಡಿ ಕಾಂಗ್ರೆಸ್ ಮೀಸೆ ತಿರುವಿದೆ. ಹಾಗೆ ನೋಡಿದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದದ್ದೇ ಈ ಗ್ಯಾರಂಟಿ ಘೋಷಣೆಯಿಂದ. ಹೀಗಾಗಿ ಗೆಲುವಿನ ರುಚಿಕಂಡ ಪಕ್ಷಗಳು, ಅದರಲ್ಲೂ ಕಾಂಗ್ರೆಸ್ ಉಳಿದ ರಾಜ್ಯಗಳಲ್ಲೂ ಇದೇಪ್ರಯೋಗಕ್ಕೆ ಮುಂದಾಗಿದ್ದು, ಚುನಾವಣೆಗಳಲ್ಲಿ ಉಚಿತಗಳ ಘೋಷಣೆ ‘ಕರ್ನಾಟಕ ಮಾದರಿ’ ಎಂದೇ ಖ್ಯಾತ ವಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಯಂತೂ ಅಲ್ಲ.
ಈ ಮೂಲಕ ಮತದಾರರಿಗೆ ಮಂಕುಬೂದಿ ಎರಚಲು ರಾಜಕಾರಣಿಗಳು ಹೊಸ ಮಾರ್ಗವನ್ನು ಕಂಡು ಕೊಂಡಂತಾಗಿದ್ದು, ಇಂಥ ರಾಜಕೀಯಕ್ಕೆ ರಾಜ್ಯವೇ ಮುನ್ನುಡಿ ಬರೆದಂತಾಗಿದೆ. ಏಕೆಂದರೆ, ಜನ ಕಲ್ಯಾಣ ಕಾರ್ಯಕ್ರಮಗಳಿಗೂ, ಬೇಕಾಬಿಟ್ಟಿ ‘ಉಚಿತ ಉಡು ಗೊರೆಗಳ’ ಆಮಿಷಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇಷ್ಟು ದಿನ ತಮಿಳುನಾಡಿನ ರಾಜಕೀಯ ಪಕ್ಷಗಳ ಸೊತ್ತಾಗಿದಂಥ ‘ಉಚಿತ-ಉಡುಗೊರೆ’ಗಳ ಅಗ್ಗದ ತಂತ್ರವನ್ನು ಹೈಜಾಕ್ ಮಾಡಿದ ಕೀರ್ತಿ ಆಮ್ ಆದ್ಮಿ ಪಕ್ಷಕ್ಕೇ ಸೇರುತ್ತದೆ. ಆದರೆ ಅದಕ್ಕೆ ರಾಜಕೀಯವಾಗಿ ವ್ಯಾಪಕ ‘ವಿಶ್ವಾಸ’ ತುಂಬಿದ್ದು ಕರ್ನಾಟಕ. ಇದೇ ಮುಂದುವರಿದರೆ, ರಾಜಕೀಯವಾಗಿ ಅನಪೇಕ್ಷಿತ ಸ್ಥಿತ್ಯಂತರ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ಚುನಾವಣೆಗಳು ನಡೆಯಬೇಕಿರುವುದು ಅಭಿವೃದ್ಧಿ, ಆಡಳಿತ ದಕ್ಷತೆ, ಭ್ರಷ್ಟ ಮುಕ್ತ-ಪ್ರಾಮಾಣಿಕ ಆಳ್ವಿಕೆಯಂಥ ವಿಚಾರಗಳ, ಸೈದ್ಧಾಂತಿಕ ವಿಷಯಗಳ ಮೇಲೆಯೇ.
ಆದರೆ ಇತ್ತೀಚಿನ ದಿನಗಳಲ್ಲಿ ಚುನಾವಣೆಗಳು ನಡೆಯುತ್ತಿದ್ದ ಧರ್ಮ-ಜಾತಿಯಂಥ ವಿಚಾರಗಳನ್ನೂ ಮೀರಿ ಪಕ್ಷಗಳಿಗೆ ಇದೀಗ ‘ಉಚಿತ’ಗಳೇ ಕಾರ್ಯ ಸೂಚಿಯಾಗುತ್ತಿರುವುದು ದೌರ್ಭಾಗ್ಯದ ಸಂಗತಿ. ಇಂಥವುಗಳಿಂದ ಹೊರತುಪಡಿಸಿ ಅಭಿವೃದ್ಧಿ ಪರ ರಾಜಕೀಯ ನಡೆಯುವಂತಾಗಲಿ.