ಗ್ಯಾರಂಟಿ ಭರವಸೆಗಳು ಜನರಿಗೆ ನೇರವಾಗಿ ಸಿಗಲಿ
ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ತನ್ನ ಐದು ಪ್ರಮುಖ ಗಾರಂಟಿ ಭರವಸೆಗಳನ್ನು ತಕ್ಷಣವೇ ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ. ಪ್ರತಿ ಮನೆಯೊಡತಿಗೆ ೨೦೦೦ ರುಪಾಯಿಯ ಗೃಹಲಕ್ಷ್ಮಿ, ಪ್ರತಿ ಮನೆಗೆ ೨೦೦ ಯೂನಿಟ್‌ನ ಗೃಹಜ್ಯೋತಿ, ನಿರುದ್ಯೋಗಿ ಪದವೀಧರರಿಗೆ ೧೫೦೦-೩೦೦೦ ರುಪಾಯಿವರೆಗೆ ಯುವನಿಧಿ, ಬಡವರ ಮನೆಯ ಪ್ರತಿ ವ್ಯಕ್ತಿಗೆ ೧೦ ಕೆಜಿ ಅಕ್ಕಿಯ ಅನ್ನಭಾಗ್ಯ, ಮಹಿಳೆರಿಗೆ ಉಚಿತ ಬಸ್ ಸಂಚಾರ-ಇವು ಐದು ಗ್ಯಾರಂಟಿ ಭರವಸೆಗಳು.
ಆದರೆ ಹೊಸ ಸರಕಾರ ಇಂಥ ಕೊಡುಗೆಗಳನ್ನು ಜನಸಾಮಾನ್ಯರಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡಬೇಕಿದೆ. ಆ ಮೂಲಕ ತಮ್ಮದು ‘ನುಡಿದಂತೆ ನಡೆಯುವ ಸರಕಾರ’ ಎಂಬ ಕೀರ್ತಿಗೆ ಪಾತ್ರವಾಗಬೇಕಿದೆ. ಏಕೆಂದರೆ, ಇವತ್ತು  ವಿದ್ಯಾರ್ಥಿ ಯೊಬ್ಬ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು, ವಿಕಲಚೇತನರು, ವಿಧವೆಯರು, ವೃದ್ಧಾಪ್ಯರು ಮಾಸಾ ಶನ ಜಾರಿ ಮಾಡಿಸಿಕೊಳ್ಳಲು ಸಾಕಷ್ಟು ಹಣ ಖರ್ಚು ಮಾಡುವಂತಾಗಿದೆ. ಒಂದು ರೀತಿ ಇವೆಲ್ಲ ಸರಕಾರದ ಉಚಿತ ಕೊಡುಗೆಗಳೇ.
ಆದರೆ ಮಧ್ಯವರ್ತಿಗಳ ಹಾಗೂ ಸರಕಾರಿ ಅಧಿಕಾರಿಗಳ ನಡುವೆ ಶಾಮೀಲುತನ ಇರುವುದರಿಂದ ಹಣ ಖರ್ಚು ಮಾಡದೇಫಲಾನುಭವಿ ಇಂಥ ಸವಲತ್ತು ಪಡೆಯಲು ಆಗುತ್ತಿಲ್ಲ. ಇದಕ್ಕಾಗಿ ಸಾಕಷ್ಟು ಅಲೆದಾಟ, ಸಾವಿರಾರು ರುಪಾಯಿ ವ್ಯಯಿಸ ಬೇಕಾಗಿದೆ. ಕಡೆಗೆ ಬೇಸತ್ತು ಇಂಥ ಸವಲತ್ತಿನ ಸಹವಾಸವೇ ಬೇಡ ಅಂತ ಫಲಾನುಭವಿಗಳು ದೂರ ಉಳಿದುಬಿಡುತ್ತಾರೆ. ಆದ್ದರಿಂದ ಸಾಕಷ್ಟು ಅಕ್ರಮಗಳಿಗೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ.
ಸೈಬರ್ ಸೆಂಟರ್‌ಗಳು, ಮಧ್ಯವರ್ತಿಗಳು ಇದರ ಲಾಭ ಪಡೆಯುವಂತಾಗುತ್ತದೆ. ರಾಜ್ಯದ ಅರ್ಹ ಫಲಾನುಭವಿಗೆ ಒಂದು ರುಪಾಯಿ ಖರ್ಚು ಇಲ್ಲದೆ ಸರಕಾರಿ ಸೌಲಭ್ಯಗಳು ಉಚಿತವಾಗಿ ಸಿಗುವಂತೆ ಆಗಬೇಕು. ಈಗಲೂ ಅಷ್ಟೇ, ಈ ಐದು ಗ್ಯಾರಂಟಿ ಭವಸೆಯ ಯೋಜನೆಯಲ್ಲಿ ಸಾಕಷ್ಟು ಅಕ್ರಮಗಳು ನಡೆಯವ ಸಾಧ್ಯತೆಗಳು ಇವೆ. ಆದ್ದರಿಂದ ಸರಕಾರ ಇತ್ತ ಗಮನ ಹರಿಸಿ ಫಲಾನುಭವಿಗಳಿಗೆ ನೇರವಾಗಿ ಸವಲತ್ತುಗಳನ್ನು ತಲುಪಿಸುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ದಿಟ್ಟ ಹೆಜ್ಜೆ ಇಡಬೇಕು.