ಗ್ಯಾರಂಟಿ ಸಂಪನ್ಮೂಲಕ್ಕಾಗಿ ಬೊಕ್ಕಸಕ್ಕೆ ವಂಚನೆ ತಪ್ಪಿಸಿ
ಕಾಂಗ್ರೆಸ್ ಗ್ಯಾರಂಟಿಗಳ ಅನುಷ್ಠಾನ ಖಾತ್ರಿಯಾಗಿದೆ. ಮೊಟ್ಟ ಮೊದಲ ಗ್ಯಾರಂಟಿಯಾಗಿ ‘ಶಕ್ತಿ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದೂ ಆಗಿದೆ. ಮುಂದಿನ ಪ್ರಶ್ನೆಯಿರುವುದು ಇವುಗಳ ಜಾರಿಯಿಂದ ರಾಜ್ಯದ ಬೊಕ್ಕಸಕ್ಕೆ ಉಂಟಾಗುವ ಆರ್ಥಿಕ ಹೊರೆ ಯನ್ನು ತಪ್ಪಿಸುವುದು ಹೇಗೆ ಎಂಬುದು.
ಈಗಿರುವ ಅಂದಾಜಿನ ಪ್ರಕಾರ ಐದೂ ಗ್ಯಾರಂಟಿಗಳ ಜಾರಿಗೆ ಕನಿಷ್ಠವೆಂದರೂ ಸರಿಸುಮಾರು ೫೯ ಸಾವಿರ ಕೋಟಿ ರು. ಬೇಕು. ಈ ಬಗ್ಗೆ ಸ್ವತಃ ಹಣಕಾಸು ಖಾತೆಯ ಹೊಣೆಯನ್ನೂ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಹೀಗಾಗಿ ಈ ಮಟ್ಟಿಗಿನ ಸಂಪನ್ಮೂಲ ಕ್ರೋಡೀಕರಿಸುವುದು ಸವಾಲೇ ಸರಿ. ಹೀಗಾಗಿ ಹೊಸ ತೆರಿಗೆ ಇಲ್ಲವೇ ಹೊಸ ಸಾಲಗಳ ಬಗ್ಗೆ ಯೋಚಿಸುತ್ತಿರಬಹುದು.
ಹಿಂದಿನ ಸರಕಾರದ ಲೇಖಾನುದಾನದ ಅವಧಿ ಆರು ತಿಂಗಳಲ್ಲಿ ಮುಗಿಯುವುದರಿಂದ ತಕ್ಷಣಕ್ಕೆ ಹೊಸ ಸರಕಾರದ ಬಜೆಟ್ ಮಂಡಿಸಿಕೊಳ್ಳಬೇಕಿದೆ.  ಈ ಸಂದರ್ಭದಲ್ಲಿ ತೆರಿಗೆ ಹೆಚ್ಚಳ ಇಲ್ಲವೇ ಸಾಲದ ನಿರ್ಧಾರವನ್ನು ಬಜೆಟ್ ನಲ್ಲಿ ಘೋಷಿಸಬೇಕು. ಆದರೆ, ಅಬಕಾರಿ, ಆಸ್ತಿ ತೆರಿಗೆಯಂಥ ಒಂದೆರಡು ಹೊರತುಪಡಿಸಿದರೆ ಬೇರೆಯದು ರಾಜ್ಯದ ಕೈಯಲ್ಲೂ ಇಲ್ಲ. ಮಾತ್ರವಲ್ಲ, ಮುಂದಿನ ವರ್ಷವೇ ಲೋಕಸಭೆ ಚುನಾವಣೆಯೂ ಎದುರಾಗಲಿರುವುದ ರಿಂದ ಹೊಸ ತೆರಿಗೆಗಳಾಗಲೀ ಈಗಿನ ತೆರಿಗೆಗಳ ಹೆಚ್ಚಳವಾಗಲೀ ಪಕ್ಷದ ಗೆಲುವಿಗೆ ತೊಡಕಾಗುವ ಸಾಧ್ಯತೆಗಳು ಇಲ್ಲದಿಲ್ಲ.
ಹಾಗೆಂದು ಇನ್ನಷ್ಟು ಸಾಲದ ಹೊರೆಯನ್ನು ರಾಜ್ಯದ ಮೇಲೆ ಹೇರುವುದೂ ವಿಹಿತವಲ್ಲ. ಈ ಹಂತದಲ್ಲಿ ಸರಕಾರ ಮಾಡಬಹುದಾದ ಅತ್ಯುತ್ತಮ ಮಾರ್ಗ ‘ರಿಯಲ್ ಎಸ್ಟೇಟ್ ವ್ಯವಹಾರ’ದ ಬಳಕೆ. ರಾಜ್ಯದೆಲ್ಲೆಡೆ ದಂಧೆಯಾಗಿ ವ್ಯಾಪಿಸಿರುವ ಈ ಲಾಬಿಯಿಂದಲೇ ಭೂಮಿಯ ಬೆಲೆ ಆಗಸಕ್ಕೇರುತ್ತಿದೆ. ಇದಕ್ಕೆ ನಿಯಂತ್ರಣ ಹೇರುವ ಕಾರ್ಯ ಸರಕಾರದಿಂದ ಆದಲ್ಲಿ, ಸರಕಾರದ ಬೊಕ್ಕಸಕ್ಕೂ ಆದಾಯ ತರಬಲ್ಲುದಲ್ಲದೇ, ಜನಸಾಮಾನ್ಯರ ಹಿತ ರಕ್ಷಣೆ ಯೂ ಆಗುತ್ತದೆ.
ಹೀಗಾಗಿ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಹೊಸ ತೆರಿಗೆಗಳನ್ನು ಹೇರುವುದರ ಬಗ್ಗೆ ಸರಕಾರ ಚಿಂತಿಸಬೇಕಿದೆ. ಜತೆಗೆ ಗಣಿ ಅಕ್ರಮದ ವಿರುದ್ಧ ಪಾದ ಯಾತ್ರೆ ನಡೆಸಿ, ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು, ಈಗಾದರೂ ರಾಜ್ಯದ ಖಜಾನೆಗೆ ಕೋಟ್ಯಂತರ ರು. ತೆರಿಗೆ ವಂಚಿಸು ತ್ತಿರುವ ಗಣಿ ಅಕ್ರಮಕ್ಕೆ ಕಡಿವಾಣ ಹಾಕಬೇಕು. ನಾಲ್ವರು ಮುಖ್ಯಮಂತ್ರಿಗಳಾದರೂ ಈವರೆಗೂ ನ್ಯಾ. ಸಂತೋಷ್ ಹೆಗ್ಡೆ ವರದಿ ಯನ್ವಯ ಕ್ರಮ ಜರುಗಿಸಲಾಗಿಲ್ಲ. ಸರಕಾರ ಸಾಮಾನ್ಯರ ಮೇಲೆ ಹೊಸ ತೆರಿಗೆ ಅಥವಾ ಸಾಲದ ಹೊರೆ ಹೇರುವ ಬದಲು, ಬೊಕ್ಕಸಕ್ಕೆ ನ್ಯಾಯಯುತವಾಗಿ ಸೇರಬೇಕಾ ಗಿರುವ ಇಂಥ ತೆರಿಗೆ ವಂಚನೆಯ ವಿರುದ್ಧ ಕ್ರಮ ಕೈಗೊಂಡು ಸಂಪನ್ಮೂಲ ಕ್ರೋಡೀಕರಿಸುವ ಕೆಲಸ ಮಾಡಲಿ.