ಸ್ವಾವಲಂಬಿ ಹೆಣ್ಣನ್ನು ರೂಪಿಸುವ ಉಪಕ್ರಮ
ರಾಜ್ಯದಲ್ಲಿ ಅಧಿಕಾರಕ್ಕೇರಿದರೆ ಐದು ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್, ಈ ಪೈಕಿ ಮೊಟ್ಟ ಮೊದಲ ಗ್ಯಾರಂಟಿಯಾಗಿ ಮಹಿಳೆಯರಿಗೆ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ‘ಶಕ್ತಿ’ ಯೋಜನೆಗೆ ಅದ್ಧೂರಿ ಚಾಲನೆ ನೀಡಿದೆ.
ರಾಜ್ಯಾದ್ಯಂತ ಮಹಿಳಾ ಸಮೂಹದಿಂದ ಇದಕ್ಕೆ ಭಾರೀ ಸಂಭ್ರಮ ಹಾಗೂ ಸಂತಸ ವ್ಯಕ್ತವಾಗಿದೆ. ಮೊದಲ ದಿನದಿಂದಲೇ ಹೆಂಗಳೆಯರು ಉತ್ಸಾಹದಲ್ಲಿ ಪ್ರಯಾಣ ಆರಂಭಿಸಿದ್ದಾರೆ. ಒಂದು ಹಂತದಲ್ಲಿ ಕಾಂಗ್ರೆಸ್ ಕೂಡ ದೊಡ್ಡದೊಂದು ಹೊಣೆಗಾರಿಕೆಯನ್ನು ನಿರ್ವಹಿಸಿದ ತೃಪ್ತಿಯಲ್ಲಿದೆ. ರಾಜಕಾರಣಿಗಳು, ರಾಜಕೀಯ ಪಕ್ಷಗಳು ಚುನಾವಣಾ ಪೂರ್ವದಲ್ಲಿ ನೀಡುವ ಭರವಸೆಗಳು, ಪ್ರಣಾಳಿಕೆಯಲ್ಲಿನ ಅಂಶಗಳು ಅಧಿಕಾರಕ್ಕೇರಿದ ನಂತರ ಕಾರ್ಯಗತ ಗೊಳ್ಳುವುದು, ಈಡೇರುವುದು ವಿರಳವೇ. ಇದೇ ಕಾಂಗ್ರೆಸ್, ದೇಶದ ಇತರ ರಾಜ್ಯಗಳಲ್ಲಿ ನೀಡಿದ್ದ ಭರವಸೆಗಳಲ್ಲಿ ಅವನ್ನು ಈಡೇರಿಸಿದ ಸಂಖ್ಯೆ ತೀರಾ ಕಡಿಮೆ.
ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಗ್ಯಾರಂಟಿಗಳು ಜಾರಿಗೊಳ್ಳುವ ಬಗ್ಗೆ ಎಲ್ಲರಲ್ಲೂ ಅನುಮಾನಗಳಿದ್ದವು. ಇದನ್ನೇಅಸವಾಗಿಸಿಕೊಳ್ಳಲು ಪ್ರತಿಪಕ್ಷಗಳೂ ಹವಣಿಸಿದ್ದವು. ಆದರೆ, ಶಕ್ತಿ ಅನುಷ್ಠಾನದ ಮೂಲಕ ಬದ್ಧತೆಯ ಮಹತ್ವದ ಸಂದೇಶವೊಂದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರವಾನಿಸಿದ್ದಾರಲ್ಲದೇ, ಬಹುಶಃ ದೇಶದ ಚುನಾವಣಾ ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಇದೇ ಮೇಲ್ಪಂಕ್ತಿಯಾದರೂ ಅಚ್ಚರಿಯಿಲ್ಲ. ಉಚಿತ ಘೋಷಣೆಗಳು ಆರ್ಥಿತೆಗೆ ಬಹುದೊಡ್ಡ ಘಾತವನ್ನು ತರುತ್ತವೆ ಎಂಬುದು ಬಹುತೇಕ ಆರ್ಥಿಕ ತಜ್ಞರ ಅಂಬೋಣ.
ಅದೇನೇ ಇದ್ದರೂ, ಕಲ್ಯಾಣ ಕಾರ್ಯಕ್ರಮದ ಭಾಗವಾಗಿ ಇಂಥವು ಎಚ್ಚರಿಕೆಯಿಂದ ಜಾರಿಯಾದಲ್ಲಿ ಅಪರೂಪದ ಸುಧಾರಣಾ ಹೆಜ್ಜೆ ಎನಿಸಿ ಕೊಳ್ಳುವುದೂ ಇದೆ. ಕರ್ನಾಟಕದ ಗ್ಯಾರಂಟಿಗಳನ್ನೇ ಗಮನಿಸಿದಲ್ಲಿ, ಉಚಿತ ಬಸ್ ಪ್ರಯಾಣ ಹಾಗೂ ಗೃಹಲಕ್ಷ್ಮಿಯಂಥ ಯೋಜನೆಗಳು ನಿಜಕ್ಕೂ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಮಹತ್ವಪೂರ್ಣ. ಈ ಎರಡೂ ಯೋಜನೆಗಳು ಮಹಿಳಾ ಸ್ವಾವಲಂಬನೆಯನ್ನು ಖಂಡಿತವಾಗಿಯೂ ಪ್ರೋತ್ಸಾಹಿಸ ಬಲ್ಲವು.
ಮಾತ್ರವಲ್ಲ ಬಡ ಹಾಗೂ ಮಧ್ಯಮವರ್ಗದ ಹೆಣ್ಣುಮಕ್ಕಳ ಉಳಿತಾಯವನ್ನೂ ವಧಿಸುತ್ತವೆ. ಈ ಮೂಲಕ ಮಹಿಳೆಯರಿಗೆ ಬಹುದೊಡ್ಡ ಉತ್ತೇಜನ ಸಿಕ್ಕಂತಾಗಿದೆ. ಇನ್ನೂ ಗಮನಾರ್ಹ ಸಂಗತಿಯೆಂದರೆ, ಇಂದಿಗೂ ನಮ್ಮ ಸಮಾಜದ ಬಹುತೇಕ (ಸ್ವತಃ ದುಡಿಯುತ್ತಿದ್ದರೂ) ಹೆಣ್ಣುಮಕ್ಕಳು ದಿನದ ಕನಿಷ್ಠ ಖರ್ಚಿಗೆ, ಪ್ರಯಾಣಕ್ಕೆ ಗಂಡನ ಅಥವಾ ಮನೆಯ ಯಜಮಾನನೆನಿಸಿಕೊಂಡಿರುವ ಪುರುಷನ ಬಳಿ ಹಣ ಕೇಳಿ ಪಡೆಯುವ ಸ್ಥಿತಿ ಇದೆ. ತಪ್ಪಿಲ್ಲ. ಆದರೆ, ಎಲ್ಲೋ ಒಂದು ಕಡೆ ಇದು ಸಮಾನತೆಗೆ, ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿರುವುದೂ ಸುಳ್ಳಲ್ಲ. ಆದರೆ ಈ ಎರಡೂ ಯೋಜನೆಗಳು ‘ಕರುನಾಡಿನ ಸ್ವಾವಲಂಬಿ ಮಹಿಳೆ’ಯರನ್ನು ರೂಪಿಸುವಲ್ಲಿ ಪೂರಕ ಕ್ರಮಗಳೆನಿಸಿಕೊಂಡಿವೆ.
ಶಕ್ತಿಯುತ ಹೆಣ್ಣು ಸಮಾಜದಲ್ಲಿ ದೊಡ್ಡದೊಂದು ಅಲೆಯನ್ನು ಸೃಷ್ಟಿಸಬಲ್ಲಳಾದರೆ ಉದ್ದೇಶ ಸಾರ್ಥಕ.