ಸಂವಿಧಾನದ ಪಠಣ ದೇಶಕ್ಕೇ ಮಾದರಿ ನಡೆ
ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಇನ್ನು ಮುಂದೆ ತರಗತಿಗಳು ಆರಂಭ ವಾಗುವುದಕ್ಕಿಂತ ಮುನ್ನ ಸಂವಿಧಾನದ ಪೀಠಿಕೆಗ ಳನ್ನು ಓದುವುದನ್ನು ಕಡ್ಡಾಯಗೊಳಿಸುವ ಆದೇಶವನ್ನು ಕಾಂಗ್ರೆಸ್ ನೇತೃತ್ವದ ಸರಕಾರದ ಸಚಿವ ಸಂಪುಟ ಕೈಗೊಂಡಿದೆ. ನೆಲದ ಕಾನೂನು ಹಾಗೂ ಆಡಳಿತ ವ್ಯವಸ್ಥೆಯ ಬಗೆಗೆ ಅರಿವು ಮೂಡಿಸುವ ದೃಷ್ಟಿಯಿಂದ ಇದೊಂದು ಸ್ವಾಗತಾರ್ಹ ನಿರ್ಧಾರ.
ದೇಶಕ್ಕೇ ಮಾದರಿಯಾಗಬಹುದಾದ ಸತ್ಸಂಪ್ರದಾಯವೊಂದಕ್ಕೆ ಕರ್ನಾಟಕವೇ ನಾಂದಿ ಹಾಡಿದೆ. ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ಸಂವಿಧಾನಕ್ಕಿಂತ ಶ್ರೇಷ್ಠ ಹಾಗೂ ಸರ್ವಮಾನ್ಯವಾಗಬಲ್ಲ ಧರ್ಮ ಗ್ರಂಥ ಇನ್ನೊಂದಿರಲಾರದು. ಈ ನೆಲದಲ್ಲಿ ಜನಿಸಿದ ಪ್ರತಿಯೊಬ್ಬರೂ ಅರಿತು ಕೊಳ್ಳಬೇಕಿರುವ ಕನಿಷ್ಠ ಮೂಲಭೂತ ಸಂಗತಿಗಳಲ್ಲೊಂದು ನಮ್ಮ ಸಂವಿಧಾನ.
ಜನಸಾಮಾನ್ಯನಿಂದ ಹಿಡಿದು, ದೇಶದ ಅತ್ಯುತ್ಕೃಷ್ಟ ಪ್ರಜೆಯಾದ ರಾಷ್ಟ್ರಪತಿಯವರೆಗೆ ಪ್ರತಿಯೊಬ್ಬರೂ ಕಡ್ಡಾಯ ಗೌರವಿಸ ಬೇಕಿರುವ ಈ ಶಾಸನಾತ್ಮಕ ಗಂಥದ ಬಗೆಗೆ ಭಾವಿ ಪ್ರಜೆಗಳಲ್ಲಿ ಈಗಿನಿಂದಲೇ ಆಸಕ್ತಿ ಮತ್ತು ಅರಿವು ಮೂಡಿಸಲು ಖಂಡಿತಾ ಈ ಕ್ರಮ ಸಹಾಯಕವಾಗಲಿದೆ. ಸರಕಾರವೇ ಹೇಳಿಕೊಂಡಂತೆ ಸಂವಿಧಾನದ ಪಠಣದಿಂದ ದೇಶದ ಜನರ ನೈತಿಕ ಮಟ್ಟ ಹೆಚ್ಚುತ್ತದೆ. ವಿದ್ಯಾರ್ಥಿಗಳಲ್ಲಿ ನೈತಿಕ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಲಿ ಎಂಬ ಕಾರಣಕ್ಕೆ ಪ್ರತಿ ಶಾಲೆಯಲ್ಲೂ ಸಂವಿಧಾನ ಓದಬೇಕೆಂಬ ಆದೇಶವನ್ನು ಹೊರಡಿಸಿರುವುದು ತಪ್ಪಲ್ಲ.
ಹೇಗೆ ಶಾಲೆ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಯನ್ನು ಹಾಡುವ ಮೂಲಕ ಗೌರವಿಸಲಾಗುತ್ತದೆಯೋ, ಅದೇ ಮಾದರಿಯಲ್ಲಿಸಂವಿಧಾನ ಪಠಣೆಯೂ ಇನ್ನು ಶಾಲೆಗಳಲ್ಲಿ ನಡೆಯಲಿದೆ. ೧೯೪೯ರಲ್ಲೇ ನಾವೆಲ್ಲರೂ ಸಂವಿಧಾನವನ್ನು ಒಪ್ಪಿ ಸ್ವೀಕರಿಸಿ ದ್ದೇವೆ. ಅದರಂತೆ ಪಾಲಿಸುತ್ತಲೂ ಬಂದಿದ್ದೇವೆ. ದೇಶದ ೧೪೪ ಕೋಟಿ ಜನರ ಹಕ್ಕನ್ನು ರಕ್ಷಿಸುತ್ತಿರುವ ಇಂಥ ಮಹತ್ವಪೂರ್ಣ ವಾದ ನಮ್ಮ ‘ಪ್ರಜಾಪ್ರಭುತ್ವ ಧರ್ಮ’ದ ಈ ಗ್ರಂಥ, ಎಲ್ಲ ಧರ್ಮಗಳ ಆಚಾರ-ವಿಚಾರಕ್ಕೆ ಅವಕಾಶ ನೀಡಿದೆ, ಸಹೋದರತ್ವಕ್ಕೆ ಒತ್ತು ನೀಡಿದೆ.
ಸಂವಿಧಾನದ ರಚನೆಯ ಮೂಲೋದ್ದೇಶ ಒಂದೇ ಇದೆ. ಆ ಕಾರಣಕ್ಕೆ ನಾವೆಲ್ಲರೂ ಸಂವಿಧಾನವನ್ನು ಗೌರವಿಸಬೇಕು. ಹೀಗಾಗಿ ಶಾಲಾ-ಕಾಲೇಜು ಗಳಲ್ಲಿ ಸಂವಿಧಾನದ ಪೀಠಿಕೆ ಓದುವುದು ಮಹತ್ವದ ಉಪಕ್ರಮವೇ ಸರಿ.
ಇದು ಕೇವಲ ಶಾಲಾ-ಕಾಲೇಜುಗಳಿಗೆ ಸೀಮಿತವಾಗದೇ, ಎಲ್ಲ ಸಾರ್ವಜನಿಕ ಸಭೆ-ಸಮಾರಂಭಗಳು, ಸರಕಾರಿ ಕಚೇರಿ  ಗಳು, ಮಹತ್ವದ ಸನ್ನಿವೇಶ, ಆಚರಣೆ ಸಂದರ್ಭದಲ್ಲೂ ಈ ಪಠಣ ನಡೆಯುವಂತಾಗಬೇಕು. ಇದರಲ್ಲಿ ಯಾವುದೇ ಧರ್ಮ-ರಾಜಕೀಯ ಉದ್ದೇಶಗಳ ಪ್ರಶ್ನೆಯೇ ಇಲ್ಲ. ಈ ಮೂಲಕ ದೇಶದಲ್ಲೊಂದು ಕ್ರಾಂತಿಗೆ ನಾವು ಕನ್ನಡಿಗರು ಕಾರಣೀಭೂತ ರಾಗಬೇಕಿದೆ.