ಗ್ರಾಮ ಒನ್ ಕೇಂದ್ರಗಳಿಗೆ ಸಕಾಲದಲ್ಲಿ ಸೇವಾಶುಲ್ಕ ಪಾವತಿಸಿ
ರಾಜ್ಯದಲ್ಲಿ ೫,೯೬೩ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಒನ್ ಕೇಂದ್ರಗಳಿದ್ದು, ಇಲ್ಲಿ ಒಂದೇ ಸೂರಿನಡಿ ೭೫೦ ಸೇವೆ ಲಭ್ಯವಿದೆ.
ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಈ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಆದರೆ ಕೆಲವು ಯೋಜನೆ ಗಳ ಕಮಿಷನ್ ಹಣವನ್ನು ಸರಕಾರ ಸಕಾಲದಲ್ಲಿ ಪಾವತಿಸುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಇದೀಗ ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳ ಫಲಾನುಭವಿಗಳನ್ನು ಉಚಿತವಾಗಿ ನೋಂದಣಿ ಮಾಡುವಂತೆ ನಾಡಕಚೇರಿ, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಿಗೆ ಸರಕಾರ ಸೂಚಿಸಿದೆ.
ಅದಕ್ಕಾಗಿ ಪ್ರತಿ ಅರ್ಜಿಗೆ ಆಪರೇಟರ್‌ಗಳಿಗೆ ೧೫ ರು. ಸೇವಾ ಶುಲ್ಕ ನಿಗದಿ ಮಾಡಿದೆ. ಆದರೆ ಈಗಾಗಲೇ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‌ನ ಕಮಿಷನ್ ಹಣ ಅನೇಕ ಕೇಂದ್ರ ಗಳಿಗೆ ತಲುಪಿಲ್ಲ. ಪ್ರತಿ ಗ್ರಾಮ ಒನ್ ಕೇಂದ್ರಗಳಲ್ಲಿ ಒಂದು ಆರೋಗ್ಯ ಭಾರತ್ ಕಾರ್ಡ್ ಮತ್ತು ಆಯುಷ್ಮಾನ್ ಕಾರ್ಡ್ ನೋಂದಣಿಗೆ ೮-೧೦ ರು. ನೀಡುವುದಾಗಿ ತಿಳಿಸಲಾಗಿತ್ತು. ಪ್ರತಿ ಆಪರೇಟರ್‌ಗಳು೪೦೦೦-೫೦೦೦ ಕಾರ್ಡ್‌ಗಳನ್ನು ನೋಂದಣಿ ಮಾಡಿದ್ದು, ಈವರೆಗೂ ಅದರ ಕಮಿಷನ್ ಹಣವನ್ನು ಜಮಾ ಮಾಡಿಲ್ಲ. ಎಲ್ಲ ಕೇಂದ್ರಗಳಲ್ಲೂ ಕಂಪ್ಯೂಟರ್ ಆಪರೇಟರ್‌ಗಳ ವೇತನ, ವಿದ್ಯುತ್, ಪ್ರಿಂಟರ್‌ಗಳನ್ನು ಸರಕಾರ ನೀಡುತ್ತದೆ. ಆದರೆ ಗ್ರಾಮ ಒನ್ ಸೇವಾ ಕೇಂದ್ರ ಸರಕಾರದ ಅಽನದಲ್ಲಿ ಬಂದರೂ ಖರ್ಚು-ವೆಚ್ಚಗಳನ್ನು ಆಪರೇಟರ್‌ಗಳೇ ಭರಿಸಿಕೊಳ್ಳಬೇಕಿದೆ.
ಇದೀಗ ಗೃಹಜ್ಯೋತಿ ಯೋಜನೆಗೆ ಉಚಿತವಾಗಿ ನೋಂದಣಿ ಮಾಡಿದರೆ, ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಭೀತಿ ಗ್ರಾಮ್ ಒನ್ ಕೇಂದ್ರಗಳ ಸಿಬ್ಬಂದಿಗೆ ಶುರುವಾಗಿದೆ. ಅನೇಕ ಕೇಂದ್ರಗಳಲ್ಲಿ ಬಾಡಿಗೆ ಹಾಗೂ ಇತರೆ ಖರ್ಚು, ವೆಚ್ಚಗಳನ್ನು ನಿಭಾಯಿಸಲು ಸಮಸ್ಯೆಯಾಗುತ್ತಿದೆ ಎನ್ನಲಾಗಿದೆ. ಆದ್ದರಿಂದ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ಸಹಾಯಕ್ಕೆ ಸರಕಾರ ಮುಂದಾಗಬೇಕು. ಅರ್ಜಿ ಸಲ್ಲಿಸಿದ ಎರಡು-ಮೂರು ದಿನದೊಳಗೆ ಸರಕಾರ ನಿಗದಿಪಡಿಸಿದ ೧೫ ರು. ಕಮಿಷನ್ ಹಣ ನೀಡುವ ವ್ಯವಸ್ಥೆ ಮಾಡಬೇಕಿದೆ.