ರಾಜಕೀಯ ಹೇವರಿಕೆ ಹುಟ್ಟಿಸದಿರಲಿ
ರಾಜ್ಯ ಸರಕಾರವನ್ನು ಉರುಳಿಸಲು ಮಸಲತ್ತು ನಡೆಯುತ್ತಿದೆ, ಇಂಥ ಪಿತೂರಿ ನಡೆಸು ತ್ತಿರುವವರು ಯಾರೆಂದೂ ತಮಗೆ ಗೊತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾಗಿ ಪತ್ರಿಕೆಗಳಲ್ಲಿ ಈಗಾಗಲೇ ವರದಿಯಾಗಿದೆ. ಹಾಗೊಂದು ಬೆಳವಣಿಗೆ ನಡೆಯುತ್ತಿರುವುದೇ ಹೌದಾದಲ್ಲಿ, ಅದು ನಿಜಕ್ಕೂ ದುರದೃಷ್ಟ ಕರ ಎನ್ನದೆ ವಿಧಿಯಿಲ್ಲ.
ಇಲ್ಲಿ ‘ದುರದೃಷ್ಟಕರ’ ಎಂದ ಮಾತ್ರಕ್ಕೆ ಯಾರದ್ದೋ ಪಕ್ಷ ವಹಿಸಿ ಅಭಿಪ್ರಾಯ ಹೇರಲಾಗುತ್ತಿದೆ ಎಂದರ್ಥವಲ್ಲ. ಆದರೆ ಸ್ಪಷ್ಟ ಬಹುಮತ ಪಡೆದು ವಿಧಿಬದ್ಧವಾಗಿ ಆಡಳಿತದ ಲಗಾಮು ಹಿಡಿದಿರುವ ಆಳುಗ ವ್ಯವಸ್ಥೆಯೊಂದನ್ನು ರಾಜಕೀಯ ಸ್ವಾರ್ಥ ಸಾಧನೆಗೆ ವಿನಾಕಾರಣ ಉರುಳಿಸುವುದನ್ನು ಯಾವ ಪ್ರಜ್ಞಾವಂತರೂ ಮೆಚ್ಚುವುದಿಲ್ಲ. ಇಂಥ ಪಿತೂರಿಗಳಿಗೆ ಇಂಬುಕೊಡುತ್ತ ಹೋದಂತೆ ಮತ್ತದೇ ‘ಆಯಾರಾಂ ಗಯಾರಾಂ’ ಸಂಸ್ಕೃತಿಯ ಪುನರುತ್ಥಾನವಾಗುವುದರ ಜತೆಗೆ, ರಾಜಕೀಯ ಅರಾಜಕತೆಗೂ ಅದು ಹೇತುವಾಗುತ್ತದೆ.
ಇದಕ್ಕೆ ಹೊರತಾದ ಪರಿಸ್ಥಿತಿ ಉದ್ಭವಿಸಿ ಉಪಚುನಾವಣೆಯೇ ಅನಿವಾರ್ಯವಾದರೆ, ಅದಕ್ಕಾಗುವ ವೆಚ್ಚದಿಂದಾಗಿ ಸರಕಾರಿ ಬೊಕ್ಕಸಕ್ಕೂ ಹೊರೆಯಾಗುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ತುಂಬಾದಿನ ಗಳೇನೂ ಆಗಿಲ್ಲ. ಚುನಾವಣಾ ಪ್ರಚಾರದ ವೇಳೆ ದುಡುಕಿನಲ್ಲೋ ಹುಮ್ಮಸ್ಸಿನಲ್ಲೋ ಘೋಷಿಸಿದ ‘ಗ್ಯಾರಂಟಿ’ ಯೋಜನೆಗಳ ನೆರವೇರಿಕೆಗೆ ಇನ್ನಿಲ್ಲದಂತೆ ಕಸರತ್ತು ಮಾಡುತ್ತಿರುವ ಅದರ ಸಹಭಾಗಿಗಳು ಇನ್ನಷ್ಟೇ ಸಾಂಪ್ರದಾಯಿಕ ಆಡಳಿತ ಶೈಲಿಗೆ ತಮ್ಮನ್ನು ತೊಡಗಿಸಿಕೊಳ್ಳಬೇಕಿದೆ.
‘ಐದು ವರ್ಷದವರೆಗೆ ಅಧಿಕಾರ ನಡೆಸಿ’ ಎಂಬ ಆಶಯದೊಂದಿಗೆ ತಾವೇ ಆಶೀರ್ವದಿಸಿ ಅಧಿಕಾರ ಪೀಠದಲ್ಲಿ ಸ್ಥಾಪಿಸಿರುವ ಸರಕಾರವನ್ನು ಮತ್ಯಾರೋ ಹೀಗೆ ಕುತಂತ್ರದಿಂದ ಉರುಳಿಸಿದರೆ ಅಂಥ ಬೆಳವಣಿಗೆ ಪ್ರಾಯಶಃ ಮತದಾರರಲ್ಲಿ ಹೇವರಿಕೆ ಹುಟ್ಟಿಸ ಬಹುದು. ಜನರಿಗೆ ಸದ್ಯಕ್ಕೆ ಇದ್ಯಾವುದೂ ಬೇಡವಾಗಿದೆ. ಮೂಲಭೂತ ಅಗತ್ಯಗಳಾದ ರೋಟಿ-ಕಪಡಾ-ಮಕಾನ್‌ಗಳ ಪೈಕಿ ಕಡೆಯದನ್ನು ದಕ್ಕಿಸಿಕೊಳ್ಳುವುದು ದುಸ್ತರವಾಗಿದ್ದರೂ, ಕಡೇಪಕ್ಷ ಮೊದಲೆರಡನ್ನು ತಮ್ಮ ಶಕ್ತ್ಯಾನುಸಾರ ದಕ್ಕಿಸಿಕೊಂಡವರು ಈಗ ಅವಕ್ಕೂ ಹಾಹಾಕಾರ ಪಡುವ ರೀತಿಯಲ್ಲಿ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಯೇರಿಕೆಯಾಗಿದೆ.
ಮಾನವ ಭ್ರೂಣ ಸಂಶೋಧನೆ ವರದಾನವೇ?…ಇದನ್ನು ಓದಿ
://.//pregnancy_monkey/
ಪರಿಣಾಮ, ಜನರಲ್ಲಿ ಹತಾಶೆ ಮಡುಗಟ್ಟಿ ಕಣ್ಣೀರು ಕಪಾಳಕ್ಕೆ ಬಂದಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ತಮ್ಮ ಹಿತಕಾಯುವಂಥ ನಡೆಗಳು ಆಳುಗರಿಂದ ಹೊಮ್ಮಲಿ ಎಂದು ಜನ ನಿರೀಕ್ಷಿಸುವುದು ಸಹಜ. ಆದರೆ ಅದಕ್ಕೆ ಆಸ್ಪದವೇ ಇಲ್ಲದಂತೆ ಸರಕಾರವೇಪತನಗೊಳ್ಳುವಂಥ ಸಂದರ್ಭ ಸೃಷ್ಟಿಯಾದರೆ, ಅಂಥ ಅಪಸವ್ಯಕ್ಕೆ ಕಾರಣರಾದವರ ವಿರುದ್ಧ ಜನಾಕ್ರೋಶ ಘನೀಕರಿಸಬಹುದು. ಏಕೆಂದರೆ, ‘ಬಡವನ ಸಿಟ್ಟು ಬಹಳ ಕೆಟ್ಟದ್ದು’ ಎಂಬ ನಾಣ್ಣುಡಿಯೇ ಇದೆ. ರಾಜಶಾಹಿ ಮತ್ತು ಜಮೀನ್ದಾರಿ ವ್ಯವಸ್ಥೆಯಲ್ಲಿ ಮೈದಳೆದ ಈ ನಾಣ್ಣುಡಿ ಕಾರ್ಯರೂಪಕ್ಕೆ ಬಂದರೆ, ಪ್ರಾಯಶಃ ಅದರ ದಳ್ಳುರಿ ಸಂಬಂಧಪಟ್ಟವರನ್ನು ದಹಿಸದೇ ಬಿಡದು.  ಇದನ್ನ ರಿತು ಸಂಬಂಧಪಟ್ಟವರು ಎಚ್ಚರದಿಂದಿದ್ದರೆ ಅವರಿಗೂ, ಜನರಿಗೂ ಒಳಿತು.