ಎಲ್ಲಕ್ಕೂ ಒಂದೇ ‘ಆಧಾರ’ವಾಗಲಿ
ಭಾರಿ ಸರ್ಕಸ್‌ನ ನಂತರ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆ ಕೊನೆಗೂ ಆರಂಭವಾಗಿದೆ. ಗೃಹ ಜ್ಯೋತಿಯ ನೋಂದಣಿ ನಡೆಯುತ್ತಲೇ ಇದೆ. ಅನ್ನಭಾಗ್ಯ ಜಾರಿಗೊಂಡಿದೆ. ಇನ್ನೇನು ಯುವಶಕ್ತಿಗೂ ನೋಂದಣಿ ಆರಂಭಗೊಳ್ಳಬೇಕಿದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ ೫ ಗ್ಯಾರಂಟಿಗಳಲ್ಲಿ ಇವೆಲ್ಲಕ್ಕೂ ನೋಂದಣಿ ಪ್ರಕ್ರಿಯೆ ಅನಿವಾರ್ಯ.
ಸಮಸ್ಯೆ ಇರುವುದೇ ಇಲ್ಲಿ. ಸರಕಾರಿ ಸೌಲಭ್ಯ ಗಳನ್ನು ಪಡೆಯುವ ಸಂದರ್ಭದಲ್ಲೆಲ್ಲ ಗ್ರಾಮೀಣರನ್ನು ಕಾಡುತ್ತಿರುವುದು ಒಂದೆಡೆ ತಾಂತ್ರಿಕ ಸಮಸ್ಯೆಯಾದರೆ, ಇನ್ನೊಂದೆಡೆ ‘ಆಧಾರ್ ಲಿಂಕ್’ನ ಸಮಸ್ಯೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಆರಂಭಿಸಿ, ಸಾಮಾನ್ಯ ಸೌಲಭ್ಯಕ್ಕಾಗಿನ ಅರ್ಜಿ ಸಲ್ಲಿಕೆಯವರೆಗೆ ಎಲ್ಲದರಲ್ಲೂ ಇದು ಎದುರಾಗುತ್ತಿದ್ದು, ಅನಕ್ಷರ ಸ್ಥರು, ಕಚೇರಿ ವ್ಯವಹಾರ ಗಳನ್ನು ಅರಿಯದವರು, ಮಹಿಳೆಯರು, ವೃದ್ಧರಿಗೆ ಇದು ತೀವ್ರ ಸಂಕಷ್ಟ ತಂದೊಡ್ಡುತ್ತಿದೆ.
ಇದನ್ನೇ ಅಸ್ತ್ರವಾಗಿಸಿಕೊಂಡು ಕೆಲ ಏಜೆಂಟರು, ಸರಕಾರಿ ಸಿಬ್ಬಂದಿ ಮುಗ್ಧರ ಶೋಷಣೆಗೆ ಇಳಿದಿರುವ ದೂರುಗಳು ಕೇಳಿಬರುತ್ತಿವೆ. ಜತೆಗೆ ಇಂಥ ವಿಚಾರ ದಲ್ಲಿ ಸರ್ವರ್ ಸಮಸ್ಯೆ ಗುಮ್ಮನಾಗಿ ಕಾಡುತ್ತದೆ. ಅದರಲ್ಲೂ ಗೃಹಲಕ್ಷ್ಮಿಯಂಥ ಮಹತ್ವಪುರ್ಣ ಹೆಜ್ಜೆಯಲ್ಲಿ ನಕಲಿಗಳ ಹಾವಳಿ, ನೋಂದಣಿಯ ಹೆಸರಿನಲ್ಲಿ ಸತಾಯಿಸು ವಿಕೆ ಸಮರ್ಥನೀಯವಲ್ಲ.
ಇದೇ ಕಾರಣಕ್ಕೆ ಯೋಜನೆ ಜಾರಿಯೂ ವಿಳಂಬವಾಗುತ್ತಿದೆ. ದೂರವಾಣಿ ಸಂಖ್ಯೆ ಗುರುತಿನ ಚೀಟಿಗೆ ಲಿಂಕ್ ಆಗದವರ ಖಾತೆಗೆ ಅನ್ನಭಾಗ್ಯದ ಹಣವೂ ಬರುತ್ತಿಲ್ಲ. ಇದರಲ್ಲಿ ಸರಕಾರಿ ಸಿಬ್ಬಂದಿಯ ಕರ್ತವ್ಯಲೋಪವೇ ಎದ್ದು ಕಾಣುತ್ತದೆ. ಯಾವುದೇ ಸವಲತ್ತು, ಪ್ರಕ್ರಿಯೆಗಳಲ್ಲಿ ನೋಂದಣಿ ಅಥವಾ ಗುರುತಿನ ಚೀಟಿ ಬಳಕೆ ಅದರ ಅಧಿಕೃತತೆಯನ್ನು ಹೆಚ್ಚಿಸುತ್ತದೆ. ಆದರೆ, ಇದನ್ನು ಸರಳವಾಗಿ ಜನರಿಗೆ ದೊರಕಿಸಬೇಕು. ಆಧಾರ್ ವ್ಯವಸ್ಥೆ ಬಂದದ್ದೇ ಆ ಕಾರಣಕ್ಕೆ. ನೂರೆಂಟು ದಾಖಲೆಗಳ ಬದಲು, ಪ್ರಜೆಗಳಿಗೆ ದೇಶಾದ್ಯಂತ ಒಂದೇ ಗುರುತಿನ ಮಾನದಂಡ ಜಾರಿಗೊಳಿಸಲೆಂದೇ ಆಧಾರ್ ಪರಿಚಯಿಸಿದ್ದು. ವ್ಯಕ್ತಿಯ ಎಲ್ಲ ಮಾಹಿತಿ ಗಳೂ ಅದರಲ್ಲಿ ಅಡಕಗೊಳ್ಳಬೇಕಿರುವುದು ಜರೂರು.
ಹಾಗಾದಿದ್ದಲ್ಲಿ ಇಡೀ ವ್ಯವಸ್ಥೆಯೇ ಅರ್ಥಹೀನ. ಅದರಲ್ಲೂ ವೃದ್ಧಾಪ್ಯ ವೇತನ, ವಿಧವಾ ವೇತನದಂಥ ಸೌಲಭ್ಯಗಳ ಜತೆಗೆ ಗೃಹಲಕ್ಷ್ಮಿ ಯಂಥ ಕಾಲಕಾಲಕ್ಕೆ ಪರಿಚಯಸಲ್ಪಡುವ ಎಲ್ಲವೂ ಆಧಾರ್‌ನ ಆಧಾರದಲ್ಲೇ ದೊರಕುವಂತಾಗಬೇಕು. ಈ ನಿಟ್ಟಿ ನಲ್ಲಿ ಒಂದೇ ಚೀಟಿಯನ್ನು ಮಾನದಂಡವಾಗಿಸುವುದರ ಜತೆಗೆ ಜನರ ಮನೆ ಬಾಗಿಲಿಗೇ ನೊಂದಣಿ ವ್ಯವಸ್ಥೆಯನ್ನು ಕಳುಹಿಸುವ ಕೆಲಸ ಆಗಬೇಕಿದೆ.