ಆರೋಗ್ಯ ಜಾಗೃತಿಗೆ ಕ್ರಮ ಅಗತ್ಯ
ಕಳೆದ ೩-೪ ದಿನಗಳಿಂದ ಸುರಿಯುತ್ತಿರುವ ಮಳೆ, ಅದರಿಂದಾಗಿರುವ ಅನಾಹುತಗಳ ನಡುವೆಯೇ ರಾಜ್ಯದಲ್ಲಿ ಜ್ವರ, ಶೀತ ಸಂಬಂಧಿ ಕಾಯಿಲೆಗಳು, ಕಲುಷಿತ ನೀರಿನಿಂದ ಜನಿಸುವ ಸಮಸ್ಯೆ, ಮದ್ರಾಸ್ ಐ, ಡೆಂಘೆಯಂಥ ಜ್ವರ ಸೇರಿದಂತೆ ಹಲವು ಸೊಂಕುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಆತಂಕ ಉಂಟುಮಾಡಿದೆ. ಮಳೆಗಾಲ ಶುರುವಾಗುತ್ತಿದ್ದಂತೆ, ಹವಾಮಾನಬದಲಾವಣೆಯಿಂದ ಎದುರಾಗುವ ಅನಾರೋಗ್ಯ ಸಹಜ.
ಅದರಲ್ಲೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು, ವೃದ್ಧರು, ಮಕ್ಕಳು, ಗರ್ಭಿಣಿ-ಬಾಣಂತಿಯರಿಗೆ ಬೇಗ ಸೋಂಕು ತಗುಲಿ, ಕಾಯಿಲೆಗೆ ಈಡಾಗುತ್ತಾರೆ. ಇಂದಿನ ಕರೋ ನೋತ್ತರ ಕಾಲಘಟ್ಟದಲ್ಲಿ ಸಣ್ಣ ಜ್ವರ, ಕೆಮ್ಮು-ನೆಗಡಿಯನ್ನೂ ನಿರ್ಲಕ್ಷಿಸು ವಂತಿಲ್ಲ. ಒಂದೆಡೆ ಸಾಕಷ್ಟು ಸೂರ್ಯನ ಕಿರಣಗಳಿಲ್ಲದೇ ವೈರಸ್‌ಗಳು ಸಂಖ್ಯೆ ಹೆಚ್ಚಿದರೆ, ಇನ್ನೊಂದೆಡೆ ಪ್ರವಾಹ ಇತ್ಯಾದಿಗಳಿಂದ ಕುಡಿಯುವ ನೀರು ಕಲುಷಿತಗೊಂಡು ಬ್ಯಾಕ್ಟೀರಿ ಯಾಗಳು ಪಸರಿಸಿರುತ್ತವೆ. ಹಣ್ಣು-ತರಕಾರಿಗಳು ಸಹ ಸೋಂಕಿಗೆ ಒಳಗಾಗಿರುವ ಸಾಧ್ಯತೆ ಇರುತ್ತದೆ.
ಅತಿ ಶೀತತ ವಾತಾವರಣದಲ್ಲಿ ಜೀಣಶಕ್ತಿ ಕುಸಿದಿದ್ದಾಗಲೇ, ಚಪಲಕ್ಕೆ ಎಣ್ಣೆಯಲ್ಲಿ ಕರಿದ ತಿಂಡಿಗಳ ಸೇವನೆಯೂ ಜನರ ವಾಡಿಕೆ. ಇದರಿಂದ ರೋಗನಿರೋಧಕ ಶಕ್ತಿ ಇನ್ನಷ್ಟು ಕುಸಿದು, ಬ್ಯಾಕ್ಟೀರಿಯ, ವೈರಸ್‌ಗಳು, ಇತರ ರೋಗಕಾರಕಗಳು ನಮ್ಮ ದೇಹದ ಮೇಲೆ ದಾಳಿ ಮಾಡುತ್ತವೆ.
ಸಾಮಾಜಿಕ ಆರೋಗ್ಯಕ್ಕೆ ಆರೋಗ್ಯಯುತವಾಗಿರುವ ಪ್ರತಿ ವ್ಯಕ್ತಿಯೂ ಮುಖ್ಯ. ಹೀಗಾಗಿ ವೈಯಕ್ತಿಕ ಆರೋಗ್ಯಕ್ಕೆ ಆದ್ಯತೆ ನೀಡುವುದರ ಜತೆಗೆ, ಸಾರ್ವಜನಿಕ ಸ್ಥಳಗಳಲ್ಲಿನ ಸೋಂಕು ನಿರೋಧಕ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ. ಮಳೆಗಾಲದ ಕಾಯಿಲೆಯ ಬಗ್ಗೆ ವ್ಯಾಪಕ ಅರಿವು ಮೂಡಿಸುವ ಕಾರ್ಯ ಆರೋಗ್ಯ ಇಲಾಖೆಯಿಂದ ಆಗಬೇಕಿದೆ. ಗ್ರಾಮೀಣರು, ಅಶಿಕ್ಷಿತರು, ಕೊಳಚೆ ಪ್ರದೇಶಗಳ ನಿವಾಸಿಗಳಲ್ಲಿ ಆರೋಗ್ಯ ಜಾಗೃತಿ ಮೂಡಿಸಬೇಕಿದೆ.
ಕರೋನಾ ಸಾಂಕ್ರಾಮಿಕದ ವೇಳೆ ಅನುಸರಿಸುತ್ತಿದ್ದ ಆಗಾಗ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವ, ಕಣ್ಣು ಮೂಗುಗಳನ್ನು ಮುಟ್ಟಿ ಕೊಳ್ಳದೇ ಇರುವ, ಸುರಕ್ಷಿತ ಸಾರ್ವಜನಿಕ ಅಂತರ ಕಾಪಾಡಿಕೊಳ್ಳುವ, ಅನಗತ್ಯ ಪ್ರಯಾಣವನ್ನು ಮುಂದೂಡುವಂಥ ಕ್ರಮಗಳ ಬಗೆಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕಿದೆ. ರಾಜ್ಯದ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಔಷಧ ದಾಸ್ತಾನು ಹಾಗೂ ವೈದ್ಯ, ಸಿಬ್ಬಂದಿ ಯ ಲಭ್ಯತೆಯ ಬಗೆಗೆ ಸರಕಾರ ಗಮನಹರಿಸಬೇಕಿದೆ. ರಾಜ್ಯದಲ್ಲಿ ಸೋಂಕು ಕಾಯಿಲೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳ ಬೇಕಿರುವುದು ಆಡಳಿತದ ಹೊಣೆ.