ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿ
ರಾಜ್ಯದ ಬಹುತೇಕ ಭಾಗಗಳಲ್ಲಿ ಸತತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಲು ಕಾರಣವಾಗಿದೆ. ಮಳೆಯಿಲ್ಲದೇ ಕೈಕಟ್ಟಿ ಕುಳಿತವರು ಕೃಷಿಯತ್ತ ಮತ್ತೆ ಮುಖ ಮಾಡಿzರೆ. ಮಳೆಯಿಂದ ಕಳೆದ ತಿಂಗಳಲ್ಲಿ ಬಿತ್ತಿದ ಬೆಳೆಗಳಿಗೆ ಮರುಜೀವ ಬಂದಿದೆ. ಮುಂಗಾರು ಪ್ರವೇಶದ ಆರಂಭದ ದಿನಗಳಲ್ಲಿ ನಿಗದಿತ ಸಮಯಕ್ಕೆ ಮಳೆಯಾಗದ ಕಾರಣ ರೈತರು ಅತಂಕಗೊಂಡಿದ್ದರು.
ಮತ್ತೆ ಬರವೇ ಗತಿ ಎನ್ನುವ ನಿರಾಶೆ ಭಾವನೆ ಹೊಂದಿದ್ದರು. ಆದರೆ, ಈಗ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಗಳಿಗೆ ಹೊಸ ಉತ್ಸಾಹ ಬಂದಿದೆ. ಕೃಷಿ ಚಟುವಟಿಕೆ ಇನ್ನಷ್ಟು ಚುರುಕುಗೊಳಿಸಲು ಅನುಕೂಲವಾಗಿದೆ. ಆದರೆ ಅನೇಕ ಕಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಕಟ್ಟಡಗಳು ಕುಸಿತ ಗೊಂಡಿವೆ. ಜನ ಜೀವನ ಅಸ್ತವ್ಯಸ್ತವಾಗಿದೆ. ಮೂಲ ಸೌಕರ್ಯಗಳಿಗೂ ಅಪಾರ ನಷ್ಟವಾಗಿದೆ. ಹಲವೆಡೆ ಜೀವ ಹಾನಿಯೂ ಆಗಿದೆ. ಕಲ್ಯಾಣ ಕರ್ನಾಟಕದ ಭಾಗದಲ್ಲಿ ನಿರೀಕ್ಷೆ ಮೀರಿ ಮಳೆ ಸುರಿದ ಪರಿಣಾಮವಾಗಿ ಅನೇಕ ಕಟ್ಟಡಗಳು ನೆಲಸಮವಾಗಿವೆ.
ಈ ಭಾಗದಲ್ಲಿ ಮಳೆಯಾಗುವುದೇ ಅಪರೂಪ. ಮಳೆಯಾದರೆ ಈ ರೀತಿಯಲ್ಲಿ ಸಿಕ್ಕಾಪಟ್ಟೆ ಸುರಿದು ಭಾರೀ ನಷ್ಟ ಉಂಟಾಗುತ್ತದೆ. ಹೀಗಾಗಿ ಅನಾವೃಷ್ಟಿ, ಅತಿವೃಷ್ಟಿ ಎರಡೂ ಈ ಭಾಗದ ಜನರನ್ನು ತುಂಬಾ ತೊಂದರೆಗೀಡು ಮಾಡುತ್ತಿದೆ. ಮಹಾರಾಷ್ಟ್ರದದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಉತ್ತರ ಕರ್ನಾಟಕದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಕೊಡಗಿನ ಜನರ ಪಾಲಿಗೆ ಮಳೆ ಎಂಬುದು ಶಾಪವಾಗಿ ಪರಿಣಮಿಸಿದೆ. ಆದ್ದರಿಂದ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಮಳೆಯಿಂದಾಗಿ ಸಂಕಷ್ಟ ಕ್ಕೀಡಾದ ಜನರ ನೆರವಿಗೆ ಧಾವಿಸಬೇಕಿದೆ.
ಅಗತ್ಯವಿರುವೆಡೆ ಕಾಳಜಿ ಕೇಂದ್ರಗಳನ್ನು ತೆರೆಯಬೇಕಿದೆ. ಇದಕ್ಕಾಗಿ ಬರೀ ಅಧಿಕಾರಿಗಳನ್ನೇ ನಂಬಿ ಕೂರುವ ಬದಲು ಜಿಲ್ಲಾ ಉಸ್ತುವಾರಿ ಸಚಿವರೇ ಜಿಲ್ಲಾ ಕೇಂದ್ರಗಳಿಗೆ ತೆರಳಿ ವಿಶೇಷ ಮುತುವರ್ಜಿ ವಹಿಸಬೇಕಿದೆ. ಕಳೆದ ಸಲದ ಪ್ರವಾಹದ ಪಡಿಪಾಟಲು ನಮ್ಮ ಕಣ್ಣ ಮುಂದಿದೆ. ಆಗ ಪ್ರವಾಹ ಸಂತ್ರಸ್ತರಿಗೆಸಕಾಲದಲ್ಲಿ ಪರಿಹಾರದ ಹಣ ಬರಲಿಲ್ಲ. ಮನೆ ಮಾರು ಕಳೆದು ಕೊಂಡವರಿಗೆ ಮನೆ ಕಟ್ಟಿಕೊಳ್ಳಲು ನೀಡಿದ ನೆರವಿನಲ್ಲೂ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಆಗಲಿಲ್ಲ. ಈ ಬಾರಿ ಹಾಗಾಗದಂತೆ ಎಚ್ಚರವಹಿಸಬೇಕಿದೆ.