ಸ್ವಾತಂತ್ರ‍್ಯ ಸಾರ್ಥಕವಾಗಲಿ
ಸ್ವಾತಂತ್ರ್ಯೋತ್ಸವವು ಭಾರತದ ಪ್ರಜೆಗಳಾದ ನಮಗೆಲ್ಲರಿಗೂ ಹೆಮ್ಮೆಯ ದಿನ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ತೋರಿದ ದೇಶಭಕ್ತಿ ಮತ್ತು ಧೈರ್ಯಗಳಿಂದ ಇಂದಿನ ಸಕಲ ಭಾರತೀಯರೂ ಪ್ರೇರಿತರಾಗುವಂತೆ ಮಾಡುವುದೇ ಸ್ವಾತಂತ್ರ್ಯ ದಿನವನ್ನು ಆಚರಿ ಸುವುದರ ಹಿಂದಿರುವ ಮುಖ್ಯಗುರಿ. ಎಲ್ಲ ಸಾಂಸ್ಕೃತಿಕ ಭಿನ್ನತೆಗಳನ್ನು ಬದಿಗೊತ್ತಿ ನಿಜವಾದ ಭಾರತೀಯರಾಗಿ ಒಂದಾಗುವ ದಿನವಿದು.
ದೇಶದ ವಿವಿಧತೆಯ ನಡುವೆಯೂ ನಾವು ಕಾಪಿಟ್ಟುಕೊಂಡಿರುವ ಒಗ್ಗಟ್ಟು ಮತ್ತು ಹೆಮ್ಮೆಯನ್ನು ಈ ದಿನವು ಪ್ರತಿಬಿಂಬಿಸುತ್ತದೆ. ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆ ಯೊಂದಿಗೆ ಸಮಾಜದ ಎಲ್ಲ ಧರ್ಮಗಳ ಜನರು ಒಟ್ಟಾಗಿ ವಾಸಿಸುತ್ತಿರುವ ಭಾರತವು ಈ ಮಹತ್ವದ ಸಂದರ್ಭವನ್ನು ಸಂತೋಷದಿಂದ ಆಚರಿಸುತ್ತದೆ.
ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಯ ಮೇಲಿನ ಯಾವುದೇ ಬಾಹ್ಯದಾಳಿಯಿಂದ ಮಾತೃಭೂಮಿಯನ್ನು ರಕ್ಷಿಸಲು ಈ ಸಂದರ್ಭವು ನಮ್ಮನ್ನು ಪ್ರೇರೇಪಿಸುತ್ತದೆ. ಬ್ರಿಟಿಷ ರಿಂದ ಸ್ವತಂತ್ರಗೊಂಡ ಭಾರತವು ಹಲವು ಹೊಸತನಗಳ ಹರಿಕಾರ ನಾಗಿದೆ, ವಿವಿಧ ಸಾಧನೆಗಳಿಗೆ ಸಾಕ್ಷಿಯಾಗಿದೆ. ಈ ಸಾಧನೆ ಮತ್ತು ಅಭಿ ವೃದ್ಧಿಯ ಉಪಕ್ರಮಗಳ ಸಂಖ್ಯೆ ಭಾರತದಲ್ಲಿ ಹೆಚ್ಚುತ್ತಲೇ ಇರುತ್ತದೆಯೇ ಹೊರತು ಅದಕ್ಕೆ ಅಂತ್ಯ ಎಂಬುದಿಲ್ಲ. ಎಲ್ಲಿಯವರೆಗೆ ಪ್ರಜೆಗಳಿಗೆ ಸ್ವಾತಂತ್ರ್ಯ ಇರುತ್ತದೆಯೋ, ಅಲ್ಲಿಯವರೆಗೆ ದೇಶದ, ಪ್ರಜೆಗಳ, ಕುಟುಂಬಗಳ ಅಭಿವೃದ್ಧಿ ನಿರಂತರವಾಗಿ ಸಾಗುತ್ತಿರುತ್ತದೆ. ಇದಕ್ಕೆ ಇಂದಿನ ಭಾರತವೇ ಸಾಕ್ಷಿ.
ಸ್ವಾತಂತ್ರ್ಯ ಹೋರಾಟಗಾರರು ತಮ್ಮ ರಕ್ತವನ್ನೇ ಬಸಿದು ದಕ್ಕಿಸಿಕೊಟ್ಟಿರುವ ಅಮೂಲ್ಯ ವಸ್ತುವಾದ ಈ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಹೋಗುವ ಗಂಭೀರ ಜವಾಬ್ದಾರಿ ನಮ್ಮದಾಗಿದೆ. ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಎನಿಸಿಕೊಂಡಿರುವ ಈ ದೇಶದಲ್ಲಿ ಸಮರ್ಥ ನಾಯಕರನ್ನು ಆರಿಸುವುದರಿಂದ ಹಿಡಿದು, ಅವರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸು ವಂತೆ ನೋಡಿಕೊಳ್ಳುವವರೆಗಿನ ಹಲವು ಸ್ತರಗಳ ಜವಾಬ್ದಾರಿ ನಮ್ಮಂಥ ಪ್ರಜೆಗಳದ್ದಾಗಿದೆ. ಭಾರತವನ್ನು ಸಕಲ ವೈವಿಧ್ಯಗಳ ರಾಷ್ಟ್ರವಾಗಿ ಕಾಪಾಡುವ ಹೊಣೆ ಗಾರಿಕೆ ನಮ್ಮೆಲ್ಲರದು. ಈ ವರ್ಷದ ಆಗಸ್ಟ್ ೧೫ರ ದಿನ ಕೇವಲ ಆಚರಣೆಗೆ ಸೀಮಿತವಾಗ ಬಾರದು; ಬದಲಾಗಿ ಬಡತನ- ಹಸಿವು-ಗುಲಾಮಗಿರಿಯಿಂದ ಇನ್ನೂ ಮುಕ್ತರಾಗದ ಜನರನ್ನು ಆ ಕೂಪದಿಂದ ಹೊರತೆಗೆಯುವ ನಿಟ್ಟಿನಲ್ಲಿ ನಾವು ಸಂಕಲ್ಪಿಸುವ ದಿನವಾಗಬೇಕು.
ಆಗಲೇ ನಮಗೆ ದಕ್ಕಿದ ಸ್ವಾತಂತ್ರ್ಯಕ್ಕೆ ಸಾರ್ಥಕತೆ. ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.