ಉದ್ದೇಶಪೂರ್ವಕ ವಿವಾದ ನಿಲ್ಲಲಿ
ಇತ್ತೀಚೆಗೆ ಪ್ರಸಿದ್ಧರ, ಗಣ್ಯ ವ್ಯಕ್ತಿಗಳ ಮಾತನ್ನು ವಿವಾದವಾಗಿಸುವ ಪ್ರವೃತ್ತಿ ಹೆಚ್ಚುತ್ತಲೇ ಇದೆ. ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಖ್ಯಾತನಾಮರು ತಮ್ಮ ಮಾತಿನಲ್ಲಿ ಸಾಕಷ್ಟು ಎಚ್ಚರ ವಹಿಸಬೇಕೆಂಬುದರಲ್ಲಿ ಅನುಮಾನವೇ ಇಲ್ಲ.
ಸಾಕಷ್ಟು ಮಂದಿ ಅವರನ್ನು ಅನುಸರಿಸುತ್ತಿರುತ್ತಾರೆ. ಹೀಗಾಗಿ ಸಹಜವಾದ ಗಾದೆ ಮಾತಾದರೂ ಅವುಗಳ ಮಿತಿಯನ್ನರಿಯು ವುದು ಮುಖ್ಯವೆನಿಸುತ್ತದೆ. ‘ಮೋದಿ ಉಪ ನಾಮ’ದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬಳಸಿದ ಒಂದು ವಾಕ್ಯ ಎಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಯಿತು ಎಂಬ ನಿದರ್ಶನ ನಮ್ಮ ಮುಂದೇ ಇದೆ. ಇತ್ತೀಚೆಗಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಬಗೆಗೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬಳಸಿದ ಪದ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಹೀಗೆ ಗಣ್ಯರೆನಿಸಿಕೊಂಡವರ ಒಂದೊಂದು ನಡೆಯನ್ನೂ ಸಮಾಜ ಸೂಕ್ಷ್ಮವಾಗಿ ಗಮನಿ ಸುತ್ತಿರುತ್ತದೆ. ಆದರೆ, ಅವರೂ ಮನುಷ್ಯರು ಎಂಬುದನ್ನು ಮರೆಯುವಂತಿಲ್ಲ. ಸಜಹ ವಾಗಿ, ದುರುದೇಶಪೂರ್ವಕವಲ್ಲದೇ, ಮಾತಿನ ಭರದಲ್ಲಿ ಬಳಸಿದ ವಿಷಯವನ್ನೇ ಅನಗತ್ಯ ವಿವಾದ ಮಾಡಿ, ವೈಯಕ್ತಿಕ ತೇಜೋವಧೆಗಿಳಿಯುವ, ಯಾವುದೋ ಒಂದು ಸೈದ್ಧಾಂತಿಕ ವರ್ಗಕ್ಕೆ ಅವರನ್ನು ಮೀಸಲಾಗಿಸಿ ಜರೆಯುವ ಇಂದಿನ ಸಾಮಾಜಿಕ ಜಾಲತಾಣದ ಗೀಳು ಆರೋಗ್ಯಕಾರಿಯಲ್ಲ.
‘ಪ್ರಜಾಕೀಯ ಪಕ್ಷ’ದ ಹೆಸರಿನಲ್ಲಿ ಉತ್ತಮ ಸಮಾಜದ ಸ್ಥಾಪನೆಗಾಗಿ ಕೆಲಸ ಮಾಡುತ್ತಿರುವ ನಟ ಉಪೇಂದ್ರ ಅವರು ಫೇಸ್‌ಬುಕ್ ಲೈವ್‌ನಲ್ಲಿ ಮಾತಿನ ಮಧ್ಯೆ ಬಳಸಿದ ಗಾದೆಯೊಂದನ್ನೇ ಜಾತಿಯ ಹೆಸರಿನ ವಿವಾದ ಮಾಡಲಾಗುತ್ತಿರುವುದೂ ಇಂಥದ್ದೇ ಒಂದು ಗೀಳಿನ ಭಾಗ. ಆ ಮೂಲಕ ಉಪೇಂದ್ರ ‘ಜಾತಿನಿಂದನೆ ಮಾಡಿದ್ದಾರೆ’ ಅನ್ನುವುದು ವಿವಾದವೆಬ್ಬಿಸಿರುವವರ ವಾದ.
ಉಪೇಂದ್ರ ಉದ್ದೇಶಪೂರ್ವಕ ಈ ಹೇಳಿಕೆ ನೀಡಿದ್ದಲ್ಲಿ ಅದು ಖಂಡನೀಯ. ಆದರೆ, ಹಲವಾರು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿರುವ, ‘ಬುದ್ಧಿವಂತ’ ನಟ ಉದ್ದೇಶ ಪೂರ್ವಕವಾಗಿ, ಜಾತಿ ನಿಂದನೆಯ ದೃಷ್ಟಿಯಿಂದಲೇ ಈ ಹೇಳಿಕೆ ನೀಡಿರಲಾರರು ಅನ್ನುವುದನ್ನು ಯಾರಾದರೂ ಅರ್ಥಮಾಡಿಕೊಳ್ಳಬಹುದು. ಹಾಗೂ ಪರೋಕ್ಷ ಜಾತಿನಿಂದನೆ ಆಗಿದೆ ಎಂಬ ಕಾರಣಕ್ಕೆ ಉಪೇಂದ್ರತಾವಾಡಿದ ಮಾತಿಗೆ ಕ್ಷಮೆ ಕೇಳಿದ ಮೇಲೂ, ೩ ಪೊಲೀಸ್ ಠಾಣೆಗಳಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹೀಗೆ ಗಣ್ಯರನ್ನು ವಿವಾದಕ್ಕೆಳೆದು, ಪ್ರತಿಯೊಂದನ್ನೂ ಜಾತಿ, ರಾಜಕೀಯ ವಿಷಯಕ್ಕೆ ಎಳೆದು ತಂದು ಪ್ರಚಾರ ಗಿಟ್ಟಿಸಿಕೊಳ್ಳುವ ಒಂದು ವರ್ಗ ಸೃಷ್ಟಿಯಾಗುತ್ತಿರುವುದು ದುರದೃಷ್ಟಕರ.