: ಸಿಲಿಕಾನ್ ಸಿಟಿ ಡ್ರಗ್ಸ್ ಸಿಟಿ ಆಗದಿರಲಿ
ಬೆಂಗಳೂರು ಈಗ ಡ್ರಗ್ ಸಿಟಿ ಎನಿಸಿಕೊಳ್ಳುತ್ತಿದ್ದು ಮಾದಕದ್ರವ್ಯ ಮಾರಾಟ, ಸಾಗಾಟ ಪ್ರಕರಣಗಳು ಪ್ರತಿದಿನ ಎಂಬಂತೆ ವರದಿಯಾಗುತ್ತಿವೆ. ಇಲ್ಲಿನ 12 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆ.9ರಂದು ಕಾರ್ಯಾಚರಣೆ ನಡೆಸಿ, ಥಾಯ್ಲೆಂಡ್‌ನಿಂದ ಹೈಡ್ರೋ ಗಾಂಜಾ ತಂದು ಮಾರುತ್ತಿದ್ದ ಓರ್ವ ವಿದೇಶಿ ಮಹಿಳೆ ಸೇರಿದಂತೆ 15 ಮಂದಿ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿ 4.5 ಕೋಟಿ ರು. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಯುವಜನತೆಯನ್ನು ಗುರಿಯಾಗಿಸಿ ಮಾದಕ ದ್ರವ್ಯ ಜಾಲ ಕಾರ‍್ಯಾಚರಿಸುತ್ತಿದ್ದು ಸತತ ಕಾರ‍್ಯಾಚರಣೆ ಬಳಿಕವೂ ಇವರನ್ನು ಮಟ್ಟಹಾಕಲು ಸಾಧ್ಯವಾಗಿಲ್ಲ. ಬೆಂಗಳೂರು ಮಾತ್ರವಲ್ಲದೆ ಮಂಗಳೂರು, ಶಿವಮೊಗ್ಗ, ಮೈಸೂರು, ಹುಬ್ಬಳ್ಳಿಯಂಥ ನಗರಗಳಲ್ಲಿ ಡಗ್ಸ್ ಜಾಲ ಹಬ್ಬಿದೆ. ಆಫಿಕ್ರನ್ ದೇಶಗಳ ಕೆಲವು ಪ್ರಜೆಗಳು, ವಿದ್ಯಾಭ್ಯಾಸ ಮತ್ತು ಸಿದ್ಧ ಉಡುಪು ಮಾರಾಟದ ನೆಪದಲ್ಲಿ ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದಲ್ಲದೆ ಅಫ್ಘಾನಿಸ್ತಾನ, ಪಾಕಿಸ್ತಾನ, ನೇಪಾಳ, ಥಾಯ್ಲೆಂಡ್, ಬ್ರೆಜಿಲ್, ಬೆಲ್ಜಿಯಂಗಳಿಂದ ಪೂರೈಕೆಯಾಗುವ ಮಾದಕದ್ರವ್ಯ, ಪಂಜಾಬ್‌ನ ಪಠಾಣ್‌ ಕೋಟ್ ಮೂಲಕ ದೇಶದೊಳಗೆ ನುಸುಳುತ್ತಿದೆ.
ಇಲ್ಲಿಂದ ಮುಂಬಯಿ, ಗೋವಾ, ಕೊಚ್ಚಿ ಮಾರ್ಗವಾಗಿ ಬೆಂಗಳೂರು ತಲುಪುತ್ತದೆ. ಅಂದಾಜಿನಂತೆ ಬೆಂಗಳೂರಿನಲ್ಲಿ ವರ್ಷಕ್ಕೆ 500 ಕೋಟಿ ರು.ನಷ್ಟು ಡ್ರಗ್ಸ್ ವಹಿವಾಟು ನಡೆಯುತ್ತದೆ. ಇದೀಗ ಆನ್‌ಲೈನ್ ಮತ್ತು ಪೋಸ್ಟ್ ಮೂಲಕ ವೂ ಡ್ರಗ್ಸ್ ಪೂರೈಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಅಂದಾಜಿನ ಪ್ರಕಾರ ದೇಶದಲ್ಲಿ 7 ಕೋಟಿ ಮಾದಕದ್ರವ್ಯ ವ್ಯಸನಿಗಳಿದ್ದಾರೆ.
ಅಂದರೆ ಫ್ರಾನ್ಸ್, ಸ್ಪೇನ್, ಇಟಲಿ ಮುಂತಾದ ಐರೋಪ್ಯ ದೇಶಗಳ ಒಟ್ಟು ಜನಸಂಖ್ಯೆಯಷ್ಟು. ಪ್ರತಿಷ್ಠಿತರೆನಿಸಿ ಕೊಂಡವರು, ನಟ-ನಟಿಯರು, ನಿರ್ದೇಶಕ, ನಿರ್ಮಾಪಕರು, ರಾಕ್‌ಸ್ಟಾರ್ ಗಳು, ಸಂಗೀತಲೋಕದ ದಿಗ್ಗಜರು, ಕ್ರೀಡಾಪಟುಗಳು, ಸಾಫ್ಟ್‌ ವೇರ್ ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಕೊಳಗೇರಿಯ ಮಕ್ಕಳ ವರೆಗೂ ಮಾದಕದ್ರವ್ಯ ಜಾಲದ ಬಲೆಯಲ್ಲಿ ಸಿಲುಕಿದ್ದಾರೆ. ಇದನ್ನು ಮಟ್ಟ ಹಾಕಲು ಸಂಘಟಿತ ಪ್ರಯತ್ನ ಅಗತ್ಯ.