: ಕೋಮು ವಿದ್ವೇಷ ಅಳಿಯಲಿ
ಕೋಮು ಸೌಹಾರ್ದತೆಗೆ ಹೆಸರಾದ ಸಕ್ಕರೆ ನಗರಿಯಲ್ಲಿ ಕೋಮು ವಿದ್ವೇಷದ ಕಿಚ್ಚು ಹಬ್ಬಿದೆ. ನಾಗಮಂಗಲದಲ್ಲಿಗಣೇಶನ ಮೆರವಣಿಗೆ ವೇಳೆ ಕಲ್ಲು ತೂರಾಟದಿಂದ ಆರಂಭವಾದ ಗಲಭೆಯ ಬೆಂಕಿ ಇನ್ನೂ ಬೂದಿ ಮುಚ್ಚಿದ ಕೆಂಡವಾಗಿ ಉಳಿದಿದೆ.
ಕೋಮುದಳ್ಳುರಿಯಲ್ಲಿ ೩೦ಕ್ಕೂ ಹೆಚ್ಚು ಜನರ ಅಂಗಡಿ ಮುಂಗಟ್ಟುಗಳು ಉರಿದು ಭಸ್ಮವಾಗಿವೆ. ಸುಮಾರು ೨೫ ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ೫೦ಕ್ಕೂ ಹೆಚ್ಚು ಜನರು ಜೈಲು ಸೇರಿದ್ದಾರೆ. ದುರುಳ ರೊಂದಿಗೆ ಕೆಲ ಅಮಾಯಕರ ಬಂಧನವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ರಾಜಕೀಯ ನಾಯಕರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತಮಗೆ ತೋಚಿದ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಇದಕ್ಕೆ ಕಳಶವಿಟ್ಟಂತೆ ಗೃಹ ಸಚಿವ ಪರಮೇಶ್ವರ್ ಅವರು ‘ಇದೊಂದು ಸಣ್ಣ ಘಟನೆ’ ಎಂದು ಹೇಳಿ ತನಿಖೆಗೆ ಮುನ್ನವೇ ಷರಾ ಬರೆದಿದ್ದಾರೆ. ದಶಕಗಳ ಹಿಂದೆ ಹಬ್ಬ ಹರಿದಿನ, ಜಾತ್ರೆಗಳೆಂದರೆ ಜಾತಿಮತ ಭೇದವಿಲ್ಲದೆ ಎಲ್ಲರಿಗೂ ಸಂಭ್ರಮದ ವಿಷಯವಾಗಿತ್ತು. ಎರಡೂ ಧರ್ಮಗಳ ಬಡಜನರು ಹಬ್ಬದ ನೆಪದಲ್ಲಿ ತಮ್ಮ ಹೊಟ್ಟೆ ಹೊರೆದು ಕೊಳ್ಳುತ್ತಿದ್ದರು. ಇಂದು ಹಬ್ಬ ಎಂದರೆ ಆತಂಕಪಡುವ ಪರಿಸ್ಥಿತಿ ಬಂದಿದೆ. ಈದ್ ಮೆರವಣಿಗೆಯಾಗಲಿ, ಗಣೇಶನ ಮೆರವಣಿಗೆಯಾಗಲಿ ಊರಿಡೀ ಪೊಲೀಸ್ ಕಾವಲು ಹಾಕಿ ಅಕ್ಕಪಕ್ಕದ ಮನೆಯವರು ಬಾಗಿಲು ಹಾಕಿಕೊಳ್ಳುವ ಸನ್ನಿವೇಶ ನಿರ್ಮಾಣವಾಗಿದೆ.
ನಮ್ಮೊಳಗಿನ ಅಪನಂಬಿಕೆಗಳು ಇದಕ್ಕೆ ಮೂಲ ಕಾರಣ. ರಾಜಕೀಯ ನಾಯಕರು ಪಕ್ಷ ಭೇದವಿಲ್ಲದೆ ಅವಿಶ್ವಾಸದ ಕಂದರವನ್ನು ಹೆಚ್ಚಿಸುತ್ತಿದ್ದಾರೆ. ಹಿಂದಿನಂತೆ ಊರ ಮುಖಂಡರು ಸೇರಿಕೊಂಡು ಒಟ್ಟಾಗಿ ಹಬ್ಬ ಆಚರಿಸುವ ತೀರ್ಮಾನ ಮಾಡಿದರೆ ಈಗಲೂ ಇಂತಹ ಸಾಕಷ್ಟು ಗಲಭೆಗಳನ್ನು ತಪ್ಪಿಸಬಹುದು. ಕೆಲವೇ ಕಿಡಿಗೇಡಿಗಳ ಕುಕೃತ್ಯದ ಕಾರಣಕ್ಕೆ ಇಡೀ ಊರು ವರ್ಷಗಳ ಕಾಲ ಅಪನಂಬಿಕೆಯ ನೆರಳಲ್ಲಿ ಬದುಕುವಂತಾಗಬಾರದು. ಕೋಮು ಗಲಭೆ ಎಲ್ಲೇ ಆಗಲಿ ಇಲ್ಲಿ ಹೆಚ್ಚು ತೊಂದರೆ ಅನುಭವಿಸುವವರು ದಿನದ ದುಡಿಮೆ ನೆಚ್ಚಿ ಬದುಕುವವರು. ಪೊಲೀಸರು ಎಚ್ಚೆತ್ತುಕೊಂಡಿದ್ದರೆ ಈ ಘಟನೆಯನ್ನು ತಪ್ಪಿಸಲು ಸಾಧ್ಯವಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ನಾಗಮಂಗಲ ಪೊಲೀಸ್ ಇನ್‌ಸ್ಪೆಕ್ಟರ್ ಅಮಾನತು ಮೂಲಕ ಇಲಾಖೆ ಇಲಾಖೆ ಈ ವಾದವನ್ನು ಸಮರ್ಥಿಸಿದೆ. ಇದು ಪಟ್ಟಣದ ಜನತೆ ಒಂದಾಗಬೇಕಾದ ಸಮಯ. ಪ್ರತಿ ಹೇಳಿಕೆ, ಪ್ರತೀಕಾರದ ಮಾತಿನಿಂದ ಗಾಯ ಆರುವುದಿಲ್ಲ. ಸಂತ್ರಸ್ತ ಜನರಿಗೆಬದುಕು ಕಟ್ಟಿಕೊಳ್ಳಲು ಎರಡೂ ಧರ್ಮಿಯರು ಕೈ ಜೋಡಿಸಬೇಕಾಗಿದೆ.