: ಪ್ಯಾರಾ ಒಲಿಂಪಿಕ್ಸ್ ಸಾಧನೆ ಎಲ್ಲರಿಗೂ ಸ್ಪೂರ್ತಿಯಾಗಲಿ
ಪ್ಯಾರಿಸ್‌ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಅತ್ಯುತ್ತಮ ಸಾಧನೆ ಮೆರೆದಿದೆ. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲಲಾಗದ ದೇಶದ ನಿರಾಶೆಯನ್ನು ಪ್ಯಾರಾ ಅಥ್ಲೀಟ್‌ಗಳು ದೂರ ಮಾಡಿದ್ದಾರೆ.
ವಿಶ್ವ ಕ್ರೀಡಾಕೂಟಗಳಲ್ಲಿ ಅತ್ಯುತ್ತಮ ಸಾಧನೆ ತೋರಲು ವಿಫಲರಾಗುತ್ತಿದ್ದ ಭಾರತೀಯ ಕ್ರೀಡಾಪಟುಗಳು, ಸರಿಯಾದ ತರಬೇತಿ, ಪ್ರೋತ್ಸಾಹ ದೊರೆತರೆ ತಾವು ಯಾವುದೇ ದೇಶದ ವಿರುದ್ಧ ಸ್ಪರ್ಧಿಸಲು ಸಿದ್ದ ಎಂಬ ಸಂದೇಶ ರವಾನಿಸಿದ್ದಾರೆ.
ಟೋಕಿಯೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ೧೯ ಪದಕಗಳನ್ನು ಜಯಿಸಿತ್ತು. ಈ ಬಾರಿ ಏಳು ಚಿನ್ನ, ೯ ಬೆಳ್ಳಿ ಮತ್ತು ೧೩ ಕಂಚಿನ ಪದಕಗಳೊಂದಿಗೆ ೨೯ ಪದಕಗಳನ್ನು ಜಯಸುವ ಮೂಲಕ ದ.ಕೊರಿಯಾ, ಅರ್ಜೇಂಟಿನಾ ಮೊದಲಾದ ಕ್ರೀಡಾ ಬಲಿಷ್ಠ ರಾಷ್ಟ್ರಗಳನ್ನು ಹಿಂದಿಕ್ಕಿ ೧೮ ನೇ ಸ್ಥಾನ ಗಳಿಸಿದೆ. ಇದುವರೆಗೆ ನಡೆದ ೧೨ ಪ್ಯಾರಾ ಒಲಿಂಪಿಕ್ಸ್‌ಗಳಲ್ಲಿ ಭಾರತ ಕೇವಲ ೩೧ ಪದಕಗಳನ್ನು ಗೆದ್ದಿತ್ತು. ಈ ಬಾರಿ ಒಂದೇ ಕ್ರೀಡಾಕೂಟದಲ್ಲಿ೨೯ ಪದಕಗಳನ್ನು ಗೆದ್ದಿದೆ ಎಂದರೆ ಈ ಸಾಧನೆಯ ಮಹತ್ವ ಅರ್ಥ ಮಾಡಿಕೊಳ್ಳಬಹುದು.
ಈ ಬಾರಿ ಪದಕ ಗೆದ್ದವರಲ್ಲಿ ಬಡತನದ ಕುಲುಮೆಯಲ್ಲಿ ಬೆಂದು ತಮ್ಮ ಬದುಕನ್ನು ತಾವೇ ರೂಪಿಸಿಕೊಂಡ ಹಲವು ಸಾಧಕರಿದ್ದಾರೆ. ದೇಶದ ಯಾವುದೋ ಮೂಲೆಯಿಂದ ಬಂದ ಕ್ರೀಡಾಪಟುಗಳು ತಮ್ಮ ದೈಹಿಕ ಸಮಸ್ಯೆಗಳನ್ನು ಮೆಟ್ಟಿ ನಿಂತು ಒಲಿಂಪಿಕ್ಸ್ ತನಕ ಪಯಣ ಬೆಳೆಸಿರುವುದು ಅವರ ಛಲ, ಪರಿಶ್ರಮ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ. ಸರಕಾರವೂ ಇವರ ಬೆನ್ನಿಗೇ ನಿಲ್ಲುವ ಮೂಲಕ ಈ ಸಾಧನೆಗೆ ಸಹಾಯ ಹಸ್ತ ಚಾಚಿದೆ.
ಈ ಹಿಂದೆ ಪದಕ ಗೆದ್ದ ಬಳಿಕ ಆಟಗಾರರಿಗೆ ನಗದು ಬಹುಮಾನ ಘೋಷಿಸಲಾಗುತ್ತಿತ್ತು. ಈಗ ಕೇಂದ್ರ ಸರಕಾರ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಯೋಜನೆಯಡಿ ಕ್ರೀಡಾಳುಗಳಿಗೆ ತರಬೇತಿ ನೀಡುತ್ತಿದೆ. ಕ್ರೀಡಾಪಟುಗಳ ತರಬೇತಿ ಮತ್ತು ಸವಲತ್ತುಗಳಿಗಾಗಿ ಸಾಕಷ್ಟು ಹಣ ಖರ್ಚು ಮಾಡುವ ಜತೆಗೆ ವಿದೇಶಿ ಕೋಚ್ ಗಳ ನೆರವನ್ನೂ ನೀಡುತ್ತಿದೆ. ಕೆಲವರಿಗೆ ವಿದೇಶಗಳಲ್ಲಿಯೇ ತರಬೇತಿ ನೀಡಿದೆ.
ರಾಜ್ಯ ಸರಕಾರಗಳು ತಮ್ಮದೇ ರೀತಿಯಲ್ಲಿ ಕ್ರೀಡಾಳುಗಳ ಬೆಂಬಲಕ್ಕೆ ನಿಂತಿವೆ. ಇದೆಲ್ಲದರ ಒಟ್ಟು ಫಲವಾಗಿ ಭಾರತದ ಕ್ರೀಡಾ ಸಾಧನೆಗೆ ಹೊಸ ಹೊಳಪು ಬಂದಿದೆ. ೨೦೪೭ರ ಹೊತ್ತಿಗೆ ನಾವು ಒಲಿಂಪಿಕ್ಸ್ ಕ್ರೀಡಾಕೂಟಸಂಘಟಿಸಬೇಕಾದರೆ ವಿಶ್ವದ ಟಾಪ್ ೧೦ ಕ್ರೀಡಾ ಸಾಧಕ ರಾಷ್ಟ್ರಗಳ ಸಾಲಿಗೆ ನಾವು ಸೇರಬೇಕು.