ರಾಜ್ಯದ ಬರದ ವಾಸ್ತವ ಅರಿತು ನೆರವಿಗೆ ಧಾವಿಸುವುದು ಅಗತ್ಯ
ರಾಜ್ಯದ ಈ ಬಾರಿ ತೀವ್ರ ಮಳೆ ಕೊರತೆಯಿಂದಾಗಿ, ಎಲ್ಲೆಡೆ ಕೃಷಿ ಸೊರಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಕೈಸೇರುವ ರೈತರ ಆಸೆ ಕಮರಿ ಹೋಗಿದೆ. ಜಲಾಶಯಗಳು ಹಾಗಿರಲಿ, ರಾಜ್ಯದ ಯಾವೊಂದೂ ಕೆರೆಕಟ್ಟೆಗಳು ಸಹ ತುಂಬದೇ ಜನವರಿಯ ಹೊತ್ತಿಗೇ ಕುಡಿಯುವ ನೀರಿನ ಸಂಕಷ್ಟ ಉದ್ಭವಿಸುವಎಲ್ಲ ಲಕ್ಷಣಗಳೂ ಕಾಣುತ್ತಿವೆ. ಈಗಾಗಲೇ ಕೇಂದ್ರದ ಮಾರ್ಗಸೂಚಿಯನ್ವಯವೇ ೧೯೫ ತಾಲ್ಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರಕಾರ ಘೋಷಿಸಿದೆ. ಇನ್ನೂ ೩೨ ತಾಲ್ಲೂಕುಗಳಲ್ಲಿ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಬಿಗಡಾಯಿಸುವ ಲಕ್ಷಣಗಳಿದ್ದು, ನಿಗದಿತ ಮಾನದಂಡ ಗಳನ್ವಯ ಅವು ಸಹ ಈ ಪಟ್ಟಿಗೆ ಸೇರುವ ಸಾಧ್ಯತೆಗಳು ಹೆಚ್ಚಿವೆ.
ರಾಜ್ಯದಲ್ಲಿ ನೈಋತ್ಯ ಮುಂಗಾರು ವಿಳಂಬದಿಂದ ಹಾಗೂ ಮಳೆಯ ಕೊರತೆಯಿಂದ ರೈತ ಸಮುದಾಯ ಸಂಕಷ್ಟ ಕ್ಕೀಡಾಗಿದೆ. ಪರಿಣಾಮ ಈ ವರ್ಷ ಶೇ. ೯೦ರಷ್ಟು ಮಾತ್ರ ಬಿತ್ತನೆ ಆಗಿದ್ದು, ಅದರಲ್ಲಿ ೪೨ ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಇನ್ನು ಕೆಲವೆಡೆ ಆಗಾಗ ಬಿದ್ದ ಮಳೆಯ ತೇವಾಂಶ ದಿಂದಾಗಿ ಭೂಮಿ ಹಸಿರಾಗಿ ಕಾಣುತ್ತಿದ್ದರೂ, ತೆನೆಕಟ್ಟುವ ಸಮಯಕ್ಕೆ ಸೂಕ್ತ ನೀರು ಸಿಗದೇ, ಫಸಲು ಕೈಸೇರುವ ಸಾಧ್ಯತೆಗಳಿಲ್ಲ.
ಇಂಥ ಸನ್ನಿವೇಶದಲ್ಲಿ ಕೇಂದ್ರದಿಂದ ಬರ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿದೆ. ಎಲ್ಲಡೆ ವ್ಯಾಪಕ ಅಧ್ಯಯನ ನಡೆಸಿ, ಈ ಎಲ್ಲ ಸಂಗತಿಗಳತ್ತ ಗಮನ ಹರಿಸಿ, ರಾಜ್ಯದ ವಸ್ತುಸ್ಥಿತಿ ಯನ್ನು ಕೇಂದ್ರಕ್ಕೆ ಮನವರಿಕೆ ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ಕೇಂದ್ರ ಸರಕಾರ ತ್ವರಿತವಾಗಿ ಸ್ಪಂದಿಸುವಂತೆ ಮಾಡಬೇಕಾದ ಅಗತ್ಯ ಹೊಣೆಗಾರಿಕೆ ತಂಡದ ಮೇಲಿದೆ.
ಮುಂಗಾರು ವಿಳಂಬವಾಗಿರುವುದಲ್ಲದೇ, ಆಗಸ್ಟ್ ತಿಂಗಳಲ್ಲಿ ಕಳೆದ ೧೨೨ ವರ್ಷಗಳ ಅತಿ ಕಡಿಮೆ ಮಳೆಯಾಗಿದೆ. ಇದರಿಂದಾಗಿ ರಾಜ್ಯದ ಅಣೆಕಟ್ಟುಗಳೂ ಬರಿದಾಗಿವೆ. ಆಗಲೇ ಮುಂಗಾರು ಮುಗಿಯುತ್ತ ಬಂದಿದ್ದು, ಕುಡಿಯುವ ನೀರಿನ ಅಭಾವ, ವಿದ್ಯುತ್ ಕೊರತೆಯ ಆತಂಕವನ್ನೂ ಸೃಷ್ಟಿಸಿದೆ. ರಾಜ್ಯದಲ್ಲಿ ಸಣ್ಣ ಮತ್ತು ಮಧ್ಯಮ ರೈತರ ಸಂಖ್ಯೆ ಹೆಚ್ಚಿದ್ದು, ಸೂಕ್ತ -ಸಲು ಕೈಸೇರದೇ ಹೋದಲ್ಲಿ, ಇವರ ಬದುಕು ಹೀನಾಯ ಸ್ಥಿತಿ ತಲುಪುವುದರಲ್ಲಿ ಅನುಮಾನವಿಲ್ಲ. ಇಂಥ ರೈತ ಸಮುದಾಯದ ನೆರವಿಗೆ ಧಾವಿಸುವ ನಿಟ್ಟಿನಲ್ಲಿ, ಕೇಂದ್ರ ತುರ್ತು ಕ್ರಮಕ್ಕೆ ಮುಂದಾಗಬೇಕಿದೆ.
ಎನ್ ಡಿಆರ್‌ಎಫ್ ಮಾರ್ಗಸೂಚಿಯಲ್ಲಿ ನಿಗದಿ ಪಡಿಸಿರುವ ಬೆಳೆ ನಷ್ಟ ಪರಿಹಾರ ಅತ್ಯಂತ ಕಡಿಮೆಯಿದ್ದು, ಇದನ್ನು ಹೆಚ್ಚಿಸುವ ಅಗತ್ಯವಿದೆ. ರಾಜ್ಯಸರಕಾರವು ಸಹ, ಹೆಚ್ಚುವರಿಯಾಗಿ ಬೆಳೆ ನಷ್ಟ ಪರಿಹಾರ ಘೋಷಿಸಿ, ಸಂಕಷ್ಟ ಸನ್ನಿವೇಶದಲ್ಲಿ ರಾಜ್ಯದ ಜನತೆಯ ನೆರವಿಗೆ ಧಾವಿಸಬೇಕಿದೆ.