ಮರುಕಳಿಸದಿರಲಿ ಕೆಟ್ಟಕನಸು ಬಲಿಯಾಗದಿರಲಿ ಪರಿಸರ
ಸಿಕ್ಕಿಂನಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಸಿಲುಕಿ ೪೫ಕ್ಕೂ ಹೆಚ್ಚು ಮಂದಿ ಅಸುನೀಗಿರುವುದು ವಿಷಾದನೀಯ. ಉತ್ತರ ಸಿಕ್ಕಿಂನ ಲೊನಾಕ್ ಸರೋ ವರದ ಮೇಲಾದ ಮೇಘಸ್ಫೋಟದಿಂದಾಗಿ ದಿಢೀರ್ ಪ್ರವಾಹದ ಸ್ಥಿತಿ ಉಂಟಾಗಿ, ಅದು ತೀಸ್ತಾ ನದಿಯ ಉಬ್ಬರಕ್ಕೆ ಕಾರಣವಾಗಿ ಪಟ್ಟಣ ಮತ್ತು ಹಳ್ಳಿಗಳಲ್ಲಿನ ಹಲವಾರು ಮನೆಗಳನ್ನೂ, ಸೇನಾಸಿಬ್ಬಂದಿ ಸೇರಿದಂತೆ ಸಾಕಷ್ಟು ಜನರನ್ನೂ ಕೊಚ್ಚಿಕೊಂಡು ಹೋಯಿತು ಎಂಬುದು ಲಭ್ಯ ಮಾಹಿತಿ.
ಪ್ರಕೃತಿಯ ಮುಂದೆ, ಅದರಲ್ಲೂ ನಿರ್ದಿಷ್ಟವಾಗಿ ಪ್ರಕೃತಿ ವಿಕೋಪದ ಮುಂದೆ ಮಾನವ ಯಾವತ್ತಿಗೂ ಕುಬ್ಜನೇ; ಅದು ತಂದೊಡ್ಡುವ ದುರಂತಗಳನ್ನು ಮಾನವ ಅನುಭವಿಸಬೇಕೇ ಹೊರತು ನಿಯಂತ್ರಿಸಲಾಗದು. ಆದರೆ ಮಾನವ ತನ್ನ ಕೆಲವಷ್ಟು ಅಪಸವ್ಯಗಳನ್ನು ತಿದ್ದಿಕೊಂಡರೆ ದುರಂತದ ತೀವ್ರತೆ ಯನ್ನು ಕೊಂಚವಾದರೂ ತಗ್ಗಿಸಬಹುದಲ್ಲವೇ? ಮೇಘಸೋಟವಾದ ವೇಳೆ ಚುಂಗ್ ತಾಂಗ್ ಅಣೆಕಟ್ಟು ಕುಸಿದ ಕಾರಣ ತೀಸ್ತಾ ನದಿಯ ಹರಿವು ರೌದ್ರಾವತಾರ ತಳೆಯಿತು ಎನ್ನಲಾಗಿದೆ ಮತ್ತು ಈ ಅಣೆಕಟ್ಟು ಕುಸಿತಕ್ಕೆ ಅದರ ಕಳಪೆ ಕಾಮಗಾರಿಯೇ ಕಾರಣ ಎನ್ನಲಾಗಿದೆ.
ಉತ್ತರಾಖಂಡ ರಾಜ್ಯದ ಜೋಷಿಮಠ ಪ್ರದೇಶದ ವಿವಿಧೆಡೆ ಹಲವಾರು ಕಟ್ಟಡಗಳಲ್ಲಿ ಬಿರುಕು ಮೂಡಿ ಬೆಂಕಿ ಪೊಟ್ಟಣಗಳಂತೆ ಕುಸಿಯತೊಡಗಿದ, ಅದರಿಂದಾಗಿ ಸಾವಿರಾರು ಜನ ನಿರಾಶ್ರಿತರಾದ ಭೀಕರ ಘಟನೆ ಯಿನ್ನೂ ಜನರ ಮನದಲ್ಲಿ ಹಸಿರಾಗಿದೆ. ಭೂವಿಜ್ಞಾನಿಗಳು ಮತ್ತು ಪರಿಸರ ಪ್ರೇಮಿಗಳ ತೀವ್ರವಿರೋಧದ ನಡುವೆಯೂ ಈ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಯೊಂದನ್ನು ಕೈಗೊಂಡಿದ್ದು ಮತ್ತು ಅದಕ್ಕಾಗಿ ಸುರಂಗಮಾರ್ಗದ ನಿರ್ಮಾಣಕ್ಕೆ ಮುಂದಾಗಿದ್ದೇ ಈ ಅವಘಡಕ್ಕೆ ಕಾರಣವಾಯಿತು ಎನ್ನಲಾಗಿದೆ.
ಅಲ್ಲಿಗೆ, ಅಂದು ಜೋಷಿಮಠದಲ್ಲಿ, ಇಂದು ಸಿಕ್ಕಿಂನಲ್ಲಿ ಕಂಡುಬಂದ ಪ್ರಕೃತಿ ವಿಕೋಪಕ್ಕೆ ಮಾನವನ ಅತಿರೇಕದ ಚಟುವಟಿಕೆಗಳ ಕೊಡುಗೆಯೂ ಇದೆಎಂದಾಯಿತಲ್ಲವೇ? ಇಂಥ ಕೆಟ್ಟಕನಸುಗಳು ಮರುಕಳಿಸದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ದೇಶವೊಂದರ ಪ್ರಗತಿಗೆ ಅಭಿವೃದ್ಧಿಚಟುವಟಿಕೆಗಳು ನಡೆಯಲೇಬೇಕು ಎಂಬುದರಲ್ಲಿ ಎರಡು ಮಾತಿಲ್ಲ; ಆದರೆ ಪರಿಸರವನ್ನು ಬಲಿಕೊಟ್ಟು ಅದರ ಸಮಾಧಿಯ ಮೇಲೆ ‘ಅಭಿವೃದ್ಧಿಯ ಮಹಲು’ ಕಟ್ಟಿಕೊಳ್ಳುವುದು ಅದ್ಯಾವ ಸೀಮೆಯ ಪುರುಷಾರ್ಥ? ಈ ಅಪ್ರಿಯ ಸತ್ಯವನ್ನು ಇನ್ನಾದರೂ ಅರಿಯದಿದ್ದರೆ, ಸಿಕ್ಕಿಂ ಜನ ಕಂಡ ಕೆಟ್ಟ ಕನಸು ವಿವಿಧೆಡೆ ಮರುಕಳಿಸುವುದರಲ್ಲಿ ಸಂಶಯವಿಲ್ಲ.