ರೈತರ ಪರಿಶ್ರಮದ ದುಡಿಮೆಗೆ ತಕ್ಕ ಪ್ರತಿಫಲ ನೀಡಬೇಕಿದೆ
ಎರಡು ಮೂರು ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಸಿಕೊಂಡು ಬೀಗಿದ್ದ ಟೊಮೆಟೋ ಬೆಲೆ ಇದೀಗ ಪಾತಾಳಕ್ಕೆ ಕುಸಿದಿದೆ.ಲಕ್ಷಾಂತರ ರುಪಾಯಿ ಬಂಡವಾಳ ಹಾಕಿ ಟೊಮೆಟೋ ಬೆಳೆದ ರೈತರ ಬದುಕು ಬೀದಿಗೆ ಬರುವಂತಾಗಿದೆ. ಮಾರು ಕಟ್ಟೆಯಲ್ಲಿ ಈಗಿನ ದರದಿಂದಾಗಿ ಟೊಮೆಟೋ ಹಣ್ಣನ್ನು ಕಿತ್ತ ಕೂಲಿಯಾಳುಗಳಿಗೆ ಕಾಸು ನೀಡಲೂ ರೈತರಿಂದ ಸಾಧ್ಯವಾಗದ ಸ್ಥಿತಿ ಇದೆ.
ಇದು ಟೊಮೇಟೋ ಬೆಳೆದ ರೈತನ ಪರಿಸ್ಥಿತಿ ಮಾತ್ರವಲ್ಲ, ಹೆಚ್ಚು ಕಡಿಮೆ ಎಲ್ಲ ರೈತರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಯೇನಿಲ್ಲ. ಕೃಷಿ ಕ್ಷೇತ್ರವನ್ನೆ ನಂಬಿರುವ ರೈತನ ಬದುಕು ದಿನೇ ದಿನೆ ಸಾಲದ ಸುಳಿಗೆ ಸಿಲುಕುತ್ತಿದೆ. ದುಬಾರಿಯಾಗಿರುವ ರಸಗೊಬ್ಬರ, ಕೀಟನಾಶಕ, ಕೂಲಿ ಕಾರ್ಮಿಕರ ವೆಚ್ಚ ಸೇರಿ ದಂತೆ ಒಂದು ಎಕರೆ ಟೊಮೇಟೊ ಬೆಳೆಯಬೇಕಾದರೆ ೩ ಲಕ್ಷ ರು. ಖರ್ಚು ಬರುತ್ತದೆ.
ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೆ ಬೆಳೆ ಇಲ್ಲ, ಬೆಳೆ ಇದ್ದರೆ ಬೆಲೆ ಇಲ್ಲ ಎಂಬಂತಾಗಿದೆ. ಲಕ್ಷಾಂತರ ರು. ಬಂಡವಾಳ ಹಾಕಿ ಬೆಳೆದ ಟೊಮೇಟೊ ಬೆಳೆಗಾರರು ದಿಕ್ಕು ತೋಚದೆ ಸರಕಾರದ ಬೆಂಬಲ ಬೆಲೆಗೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಸರಕಾರಿ ನೌಕರಿ ಮಾಡುವ ಅಧಿಕಾರಿ ೩೦ ದಿನಕ್ಕೆ ಸಂಬಳ ಪಡೆದರೆ, ಭೂಮಿಗೆ ತನ್ನ ಶ್ರಮ ಸುರಿದು ವರ್ಷ ಕಾಯಬೇಕಾಗುತ್ತದೆ. ಆದ್ದರಿಂದ ರೈತ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವಂತೆ ಮಾಡಿ ಜೀವನ ಭದ್ರತೆ ಕಲ್ಪಿಸಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿ ವಿನಾಶದ ಅಂಚಿಗೆ ಹೋಗುವ ಸಾಧ್ಯತೆ ಇದೆ.
ಇನ್ನು ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ರೈತರಿಂದ ಕಮೀಷನ್ ಪಡೆಯಬಾರದು ಎಂಬ ಕಾನೂನು ಇದೆ. ಆದರೆ ಬಹುತೇಕ ಮಾರುಕಟ್ಟೆಯಲ್ಲಿ ಮಂಡಿ ಮಾಲೀಕರು ರಾಜಾರೋಷವಾಗಿ ಅಧಿಕಾರಿಗಳ ಕಣ್ಣು ಮುಂದೆಯೇ ಕಮೀಷನ್ ಪಡೆಯುವ ಜತೆಗೆ ಅಽಕೃತ ಬಿಲ್ ನೀಡದೇ ವಂಚನೆ ಮಾಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ, ರೈತರ ಮೇಲೆ ಆಗುತ್ತಿರುವ ಶೋಷಣೆಗೆ ಕಡಿವಾಣ ಹಾಕಬೇಕಿದೆ. ಪ್ರತಿಯೊಬ್ಬರೂ ರೈತರ ಬೆವರಿಗೆ ತಕ್ಕ ಪ್ರತಿಫಲ ವನ್ನು ನೀಡಲು ಮುಂದಾಗಬೇಕಿದೆ.