ಏಷ್ಯಾಡ್‌ನಲ್ಲಿ ಹೆಮ್ಮೆಯ ಸಾಧನೆ
ಚೀನಾದ ಹಾಂಗ್ಝೌನಲ್ಲಿ ನಡೆದ ೧೯ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಐತಿಹಾಸಿಕ ದಾಖಲೆಯ ಸಾಧನೆಯನ್ನು ತೋರಿ ದ್ದಾರೆ. ಇದೇ ಮೊದಲ ಬಾರಿಗೆ ಶತಕವನ್ನೂ ಮೀರಿ ಒಟ್ಟು ೧೦೭ ಪದಕ ಗಳನ್ನು ನಾನಾ ಕ್ರೀಡೆಗಳಲ್ಲಿ ಗಳಿಸಿ, ದೇಶದ ಮುಡಿಗೇರಿಸಿದ್ದಾರೆ.
ಈ ಪೈಕಿ ೨೮ ಚಿನ್ನ, ೩೮ ಬೆಳ್ಳಿ ಹಾಗೂ ೪೧ ಕಂಚಿನ ಪದಕಗಳೂ ಸೇರಿರುವುದು ಗಮನಾರ್ಹ. ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಮುಂದು ವರಿಯುವ ಮೂಲಕ ಆಧುನಿಕ ಭಾರತ, ಕ್ರೀಡಾಕ್ಷೇತ್ರದಲ್ಲೂ ಜಗತ್ತಿನ ಬಲಾಢ್ಯ ರಾಷ್ಟ್ರಗಳ ಸಾಲಿನಲ್ಲಿದೆ ಎಂಬುದನ್ನು ಸಾಬೀತುಪಡಿಸಿದೆ. ಅತಿಕಿರಿಯ ೧೬ ವರ್ಷದ ಸ್ಕ್ವಾಷ್ ಆಟಗಾರ್ತಿ ಅನಾಹತ್ ಸಿಂಗ್‌ರಿಂದ ಹಿಡಿದು ಅತ್ಯಂತ ಹಿರಿಯ ವಯಸ್ಸಿನ ಟೆನಿಸ್ ತಾರೆ ೪೩ ವರ್ಷದ ರೋಹನ್ ಬೋಪಣ್ಣ ನವರವರೆಗೆ ಒಟ್ಟು ೬೫೫ ಕ್ರೀಡಾಳುಗಳ ಪಡೆಯ ಸಾಧನೆ ಅಮೋಘ ಮಾತ್ರವಲ್ಲ, ಮುಂಬರುವ ಒಲಿಂಪಿಕ್ ಕ್ರೀಡಾಕೂಟದ ಮೇಲೆ ಸಾಕಷ್ಟು ಭರವಸೆ ಮೂಡಿಸಿದೆ.
ಈ ಬಾರಿ ಟ್ರ್ಯಾಕ್ ಮತ್ತು ಫೀಲ್ಡ ವಿಭಾಗವೊಂದರಲ್ಲೇ ಆರು ಚಿನ್ನ ಸೇರಿದಂತೆ ಒಟ್ಟು ೨೯ ಪದಕಗಳು ಲಭಿಸಿ ರುವುದು ಸಹ ವಿಶೇಷ. ಅಥ್ಲೆಟಿಕ್ಸ್ ನಲ್ಲಿ ಎಂದಿನ ಪಾರಮ್ಯ ಮೆರೆದಿರುವ ಭಾರತ, ಜಾವೆಲಿನ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಎರಡನ್ನೂ ತೆಕ್ಕೆಗೆ ಹಾಕಿಕೊಂಡಿದೆ. ನೀರಜ್ ಛೋಪ್ರಾ ಹಾಗೂ ಕಿಶೋರ್ ಅವರಲ್ಲದೇ, ಅಥ್ಲೆಟಿಕ್ಸ್‌ನಲ್ಲಿ ತಜೀಂದರ್ ಪಾಲ್ ಸಿಂಗ್ ತೂರ್, ಮುರಳಿ ಶ್ರೀಶಂಕರ್ ಮತ್ತು ಅವಿನಾಶ್ ಸಾಬ್ಳೆ, ತೇಜಸ್ವಿನ್ ಶಂಕರ್, ಮೊಹಮದ್ ಅಕ್ಸಲ್, ಪ್ರವೀಣ್ ಚಿತ್ರವೇಲ್ ಅವರ ಸಾಧನೆಯೂ ಕಡಿಮೆಯೇ ಏನಿಲ್ಲ.
ಮಹಿಳಾ ಅಥ್ಲೀಟ್ಗಳಾದ ಅನ್ನು ರಾಣಿ, ಪಾರುಲ್ ಚೌಧರಿ, ಜ್ಯೋತಿ ಯರ್ರಾಜಿ, ಹರ್ಮಿಲನ್ ಬೇನ್ಸ್, ಸೀಮಾ ಪೂನಿಯಾ ಪರಿಶ್ರಮ ಮೆಚ್ಚುವಂಥದ್ದು. ಆರ್ಚರಿಯಲ್ಲಿ ಓಜಸ್ ದೇವತಾಳೆ ಹಾಗೂ ಜ್ಯೋತಿ ಸುರೇಖಾ ವೆನ್ನಂ ಚಿನ್ನದ ಹ್ಯಾಟ್ರಿಕ್‌ನ ಗರಿ ಮೂಡಿಸಿದ್ದಾರೆ. ಶೂಟಿಂಗ್‌ನಲ್ಲಿ ಎಂದಿನ ಭಾರತದ ನಾಯಕತ್ವ ಮುಂದುವರಿದಿದೆ. ಬ್ಯಾಡ್ಮಿಂಟನ್‌ನಲ್ಲಿ ಚಿರಾಗ್ ಶೆಟ್ಟಿ, ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಜೋಡಿಯ ಮೊದಲ ಸ್ವರ್ಣ ಸಾಧನೆಯನ್ನು ಮರೆಯಲಾದೀತೇ? ಹಾಗೆಯೇ ಸಿಂಗಲ್ಸ್‌ನಲ್ಲಿ ಪ್ರಣಯ್ ಕಂಚು ಸಣ್ಣ ಸಾಧನೆಯಲ್ಲ. ಕಬಡ್ಡಿಯಲ್ಲಿ ಮಹಿಳಾ ಹಾಗೂ ಪುರುಷರ ತಂಡಗಳೆರಡೂ ಚಿನ್ನ ಕಬಳಿಸಿವೆ.
ಕ್ರಿಕೆಟ್, ಹಾಕಿ ಯಲ್ಲೂ ಭಾರತೀಯರು ಸಾಟಿಯಿಲ್ಲದ ಸಾಧನೆ ಮಾಡಿದ್ದಾರೆ. ಈವರೆಗೆನಮ್ಮಿಂದ ದೂರವೇ ಉಳಿದಿದ್ದ ರೋಯಿಂಗ್, ಸೇಲಿಂಗ್, ಈಕ್ವೆಸ್ಟ್ರಿಯನ್, ಸ್ಕ್ವಾಷ್, ಬ್ರಿಜ್, ಗಾಲ, ಸ್ಕೇಟಿಂಗ್, ವುಷು, ಕೆನೊಯಿಂಗ್ ಮತ್ತು ಸೆಪಕ್ ಟಕ್ರಾದಂತಹ ವಿಭಾಗದಲ್ಲಿ ಪದಕ ಒಲಿದಿದ್ದು ಇನ್ನಷ್ಟು ಭರವಸೆಯ ಸಂಗತಿ. ಈಜು ಹಾಗೂ ಜಿಮ್ನ್ಯಾಸ್ಟಿಕ್‌ನಂಥವಲ್ಲಿ ತುಸು ಗಮನ ಹರಿಸಿದರೆ ನಾವು ಒಲಿಂಪಿಕ್‌ನಲ್ಲೂ ಮೈಲುಗಲ್ಲು ಸ್ಥಾಪಿಸುವುದರಲ್ಲಿ ಅನುಮಾನವಿಲ್ಲ. ಕುಸ್ತಿಯಲ್ಲಿನ ನಿರಾಸೆ, ‘ರಾಜಕೀಯ ಬೆಳವಣಿಗೆ’ಯ ಪ್ರತಿ-ಲನ ಎಂಬುದರಲ್ಲಿ ಅನುಮಾನವಿಲ್ಲ. ಟ್ರಯಲ್ಸ್ ತಪ್ಪಿಸಿಕೊಳ್ಳಲು ನಡೆದ ಪ್ರಹಸನದ ಫಲ ಇನ್ನಾದರೂ ಆಟಗಾರರಿಗೆ ಅರ್ಥವಾದರೊಳಿತು.
ಅರುಣಾಚಲಪ್ರದೇಶ ಗಡಿ ವಿವಾದ ಹಾಗೂ ಆ ಹಿನ್ನೆಲೆಯಲ್ಲಿ ಆಟಗಾರರಿಗೆ ಚೀನಾ ವೀಸಾ ನಿರಾಕರಣೆ ಅನಪೇಕ್ಷಿತವಾಗಿದ್ದರೂ ನಮ್ಮ ಶತಕದ ಓಟವನ್ನು ಇವ್ಯಾವುವೂ ತಡೆಯಲಿಲ್ಲ ಎಂಬುದೇ ಹೆಮ್ಮೆ. ಭಲೆ, ಆಟಗಾರರೇ!