ಇಸ್ರೇಲ್-ಪ್ಯಾಲೆಸ್ತೀನ್ ಯುದ್ದ ಕೊನೆಗೊಳ್ಳಲಿ
ರಷ್ಯಾ ಮತ್ತು ಉಕ್ರೇನ್ ನಡುವೆ ಕಳೆದ ಒಂದೂವರೆ ವರ್ಷದಿಂದ ಯುದ್ಧ ನಡೆಯುತ್ತಿದ್ದು, ಸಾಕಷ್ಟು ಸಾವು ನೋವುಗಳು ಸಂಭವಿಸಿದೆ. ಈ ಯುದ್ಧವು ಜಗತ್ತಿನ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಿವೆ. ಜಗತ್ತು ನಿಧಾನವಾಗಿ ಆರ್ಥಿಕ ಹಿಂಜರಿತಕ್ಕೆ ಜಾರುತ್ತಿರುವ ಹೊತ್ತಿನ ಜಗತ್ತು ಮತ್ತೊಂದು ಯುದ್ಧಕ್ಕೆಸಾಕ್ಷಿಯಾಗುತ್ತಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಯುದ್ಧವೂ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಎರಡೂ ಕಡೆ ಎರಡು ಸಾವಿರ ಸಮೀಪ ಸಾವು ಸಂಭವಿಸಿವೆ.
ಗಾಯಾಳುಗಳ ಸಂಖ್ಯೆ ಲೆಕ್ಕಕ್ಕೇ ಸಿಗದಂತಾಗಿದೆ. ಸಾವಿರಾರು ಜನರು ಅನ್ನ, ಆಶ್ರಯವಿಲ್ಲದೆ ನಿರ್ಗತಿಕರಾಗಿದ್ದಾರೆ. ಯುದ್ಧಗಳು ಎಂದಿಗೂ ಶಾಂತಿ, ನೆಮ್ಮದಿಯನ್ನು ತರುವುದಿಲ್ಲ. ಯುದ್ಧದಿಂದ ವಿನಾಶವೇ ಹೊರತು ವಿಕಾಸ ವಾಗಲು ಸಾಧ್ಯವಿಲ್ಲ. ಈಗ ಶುರುವಾಗಿರುವ ಯುದ್ಧದ ಅಂತಿಮ ಫಲಿತಾಂಶ ವೂ ಅದೇ ಆಗಲಿದೆ. ಜತೆಗೆ, ಜಗತ್ತಿನ ಇತರ ರಾಷ್ಟ್ರಗಳ ಮೇಲೂ ದುಷ್ಪರಿಣಾಮ ಬೀರಲಿದೆ. ಈ ಯುದ್ಧವು ಮುಂದಿನ ದಿನಗಳಲ್ಲಿ ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೆ ವ್ಯಾಪಿಸಿಕೊಂಡರೆ ಭಾರತದ ಮೇಲೂ ದುಷ್ಪರಿಣಾಮವಾಗಲಿದೆ. ವಿಶೇಷವಾಗಿ ನಮ್ಮ ರುಪಾಯಿ ಮೌಲ್ಯ ಕುಸಿಯುವ ಸಾಧ್ಯತೆಗಳು ಬಹಳಷ್ಟಿದೆ.
ತೈಲ ಪೂರೈಕೆಯಲ್ಲಿ ಅಡೆತಡೆಗಳಾದರೆ ಖಂಡಿತವಾಗಿಯೂ ಬೆಲೆ ಏರಿಕೆಯಂಥ ಸಮಸ್ಯೆಗಳನ್ನು ಭಾರತವೂ ಸೇರಿದಂತೆ ಇತರ ರಾಷ್ಟ್ರಗಳು ಅನುಭವಿಸಬೇಕಾಗುತ್ತದೆ. ಹಾಗಾಗಿ, ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವಿನ ಯುದ್ಧವನ್ನು ಸಾಧ್ಯವಾದಷ್ಟು ಬೇಗನೆ ಕೊನೆಗಾಣಬೇಕಿದೆ. ಅಂತಾ ರಾಷ್ಟ್ರೀಯ ಸಮುದಾಯವು ಈ ನಿಟ್ಟಿನಲ್ಲಿ ಜವಾಬ್ದಾರಿ ಪ್ರದರ್ಶಿಸಬೇಕಿದೆ. ಯುದ್ಧಕ್ಕೆ ಮತ್ತಷ್ಟು ತುಪ್ಪ ಸರಿಯುವ ಬದಲು ನಂದಿಸುವ ಕೆಲಸ ಮಾಡಬೇ ಕಿದೆ. ಎರಡೂ ದೇಶಗಳ ನಡುವಿನ ಸಂಘರ್ಷವನ್ನು ಸಂಧಾನದೊಂದಿಗೆ ತಡೆಯುವ ಜತೆಗೆ, ಹಮಾಸ್ ಮತ್ತು ಹಿಜ್ಬುಗಳಂತಹ ಉಗ್ರ ಸಂಘಟನೆಗಳನ್ನು ಮಟ್ಟ ಹಾಕುವ ಕೆಲಸ ಮಾಡಬೇಕಿದೆ.
ಈ ಉಗ್ರ ಸಂಘಟನೆಗಳು ಎಂದಿಗೂ ಸೆರಗಿನಲ್ಲಿರುವ ಕೆಂಡ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಯಾವುದೇ ದೇಶವಾಗಲಿ ಉಗ್ರ ಸಂಘಟನೆಗಳಿಗೆ ಆಸ್ಪದ ನೀಡಬಾರದು. ಹಾಗಾಗಿ ಉಗ್ರ ಸಂಘಟನೆಗಳನ್ನು ದೂರವಿಟ್ಟು, ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವಿನ ನಿರಂತರ ಸಂಘರ್ಷದ ಕಾರಣಗಳನ್ನು ಪತ್ತೆ ಹಚ್ಚಿ, ಶಾಂತಿ ಮಾತುಕತೆ ಮೂಲಕ ಸಂಘರ್ಷವನ್ನು ನಿವಾರಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಮುದಾಯವು ಕಾರ್ಯೋ ನ್ಮುಖವಾಗಲಿ.