ಬರ; ಘೋಷಿಸಿದಷ್ಟು ನಿರ್ವಹಣೆ ಸುಲಭವಲ್ಲ
ರಾಜ್ಯ ಸರಕಾರವು ಒಟ್ಟು ೨೩೬ ತಾಲೂಕುಗಳ ಪೈಕಿ ೨೧೬ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿದಂತಾಗಿದೆ. ಬರವನ್ನು ನಿರ್ವಹಿಸುವುದು ಘೋಷಿಸಿದಷ್ಟು ಸುಲಭವಂತೂ ಇಲ್ಲ. ನಿಸರ್ಗದ ಮೇಲೆ ತಪ್ಪು ಹೊರಿಸಿ ಕೈ ಕಟ್ಟಿ ಕೂರುವುದಕ್ಕೆ ಸಾಧ್ಯವಿಲ್ಲ. ಕೇಂದ್ರದಿಂದ ಸಿಗುವ ಪರಿಹಾರವನ್ನೇನಂಬಿ ಕೂರುವಂತಿಲ್ಲ. ಬರಗಾಲದ ಸವಾಲುಗಳನ್ನು ಎದುರಿಸಲು ಸರಕಾರ ಮುನ್ನೆಚ್ಚರಿಕೆ ಕ್ರಮಗಳನ್ನಂತೂ ತೆಗೆದುಕೊಳ್ಳಲೇಬೇಕಿದೆ.
ಗ್ಯಾರಂಟಿ ಯೋಜನೆಗಳನ್ನೇ ಜಾರಿಗೊಳಿಸಲು ಹೈರಾಣಾಗಿರುವ ಸರಕಾರ, ಅಭಿವೃದ್ಧಿ ಕಾಮಗಾರಿಗಳತ್ತ ಚಿಂತಿಸುವ ಸ್ಥಿತಿಯಲ್ಲಿಲ್ಲ. ಆದರೆ ಬರಗಾಲ ಎದುರಿಸುವ ಸವಾಲು ಸ್ವೀಕರಿಸಿ ಮುನ್ನಡೆಯಬೇಕಿದೆ. ಇದು ಸರಕಾರಕ್ಕೆ ಗೊತ್ತಿಲ್ಲದ ವಿಚಾರವೇನೂ ಅಲ್ಲ. ಆದರೂ ಅಗತ್ಯ ಕ್ರಮಗಳನ್ನು ಮುಂಜಾಗ್ರತೆ ಯಿಂದ ತೆಗೆದು ಕೊಳ್ಳುತ್ತಿಲ್ಲ ಎನ್ನುವ ಭಾವನೆಗಳು ನಾಡಿನ ಜನರ ಮನಸ್ಸಲ್ಲಿ ಮೂಡುತ್ತಿದೆ. ಒಂದೆಡೆ ಜಲಾಶಯಗಳಲ್ಲಿನ ನೀರನ್ನು ೨೦೨೪ ರ ಎಪ್ರಿಲ-ಮೇ ತಿಂಗಳ ವರೆಗೆ ಕಾಪಾಡಿಕೊಳ್ಳಬೇಕಿದೆ.
ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಆದ್ಯತೆ ನೀಡಬೇಕಿದೆ. ಜತೆಗೆ ಕೃಷಿ, ಕೈಗಾರಿಕೆಯೂ ನೀರು ಸರಬರಾಜು ಮಾಡುವ ಹೊಣೆಗಾರಿಕೆ ಇದೆ. ಸಕಾಲದಲ್ಲಿ ನೀರು ಹಾಗೂ ವಿದ್ಯುತ್ ಸಿಗದೆ ನಷ್ಟವಾದ ಬೆಳೆಗೂ ಪರಿಹಾರ ಕೊಡಬೇಕಾಗುತ್ತದೆ. ಕೈಗಾರಿಕೆಗಳ ಕೈಯನ್ನೂ ಹಿಡಿದು  ಮೇಲೆತ್ತಬೇಕಿದೆ.ಅನಿಯಮಿತ ಲೋಡ್ ಶೆಡ್ಡಿಂಗ್ ವಿರುದ್ಧ ರೈತರು ಬೀದಿಗಿಳಿದಿದ್ದಾರೆ. ಕೆಲವೆಡೆ ಕೆರೆಗಳಲ್ಲಿ ಕೊಂಚ ನೀರಿದ್ದು, ಅಂತರ್ಜಲ ಇರುವು ದರಿಂದ ಕೊಳವೆ ಬಾವಿಗಳಿಂದಾದರೂ ನೀರೆತ್ತಿ ಕೃಷಿ ಮಾಡೋಣ ಎಂದುಕೊಂಡವರಿಗೆ ವಿದ್ಯುತ್ ಕೈ ಕೊಡುತ್ತಿದೆ. ಬೋರ್‌ವೆಲ, ಪಂಪ್‌ಸೆಟ್ ಎಲ್ಲ ಇದ್ದರೂ ವಿದ್ಯುತ್ ಇಲ್ಲದೆ ಕೃಷಿ ಚಟುವಟಿಕೆ ನಿಲ್ಲುವಂತಾಗಿದೆ.
ಇದರಿಂದ ಕೃಷಿ ಆಧಾರಿತ ಕುಟುಂಬಗಳು ಉದ್ಯೋಗವಿಲ್ಲದೆ ಕೂರುವಂತಾಗಿದೆ. ಬೆಳೆಗಳು ನೀರಿಲ್ಲದೆ ಕಣ್ಣೆದುರೇ ಒಣಗುತ್ತಿರುವುದರಿಂದ ರೈತರು ಎಸ್ಕಾಂಗಳ ಮೇಲೆ ಸಿಟ್ಟು ತೀರಿಸಿಕೊಳ್ಳಲಾರಂಭಿಸಿzರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಸಣ್ಣ ಕೈಗಾರಿಕೆಗಳಿಗೂ ವಿದ್ಯುತ್ ವ್ಯತ್ಯಯವಾಗುವ ಅಪಾಯ ವಿದೆ. ಹೀಗಾಗಿ ಅಧಿಕಾರಿಗಳು ನೀರು ಮತ್ತು ವಿದ್ಯುತ್ ಹಿತ-ಮಿತ ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ. ಸಮರ್ಪಕವಾಗಿ ಬರ ನಿರ್ವಹಣೆ ಮಾಡಬೇಕಿದೆ. ಬರ ಎದುರಿಸುವ ವಿಚಾರದಲ್ಲಿ ಸರಕಾರವೂ ಧೃತಿಗೆಡಬಾರದು, ಜನರನ್ನೂ ಕಂಗಾಲಾಗಿಸಬಾರದು.