ಮೋದಿ ವರ್ಚಸ್ಸಿನ ಅವಲಂಬನೆ
ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಡ ಹಾಗೂ ಮಿಜೋರಾಂಗೆ ಮತದಾನ ನಡೆಯಲಿವೆ. ಸಮೀಕ್ಷೆಗಳ ಪ್ರಕಾರ ಈ ಐದು ರಾಜ್ಯಗಳಲ್ಲೂ ಬಿಜೆಪಿ ಸಂಕಷ್ಟವನ್ನು ಎದುರಿಸುತ್ತಿದ್ದಂತಿದೆ. ಬಿಜೆಪಿ ಆಡಳಿತದಲ್ಲಿರುವ ಮಧ್ಯ ಪ್ರದೇಶದಲ್ಲೂ ಪಕ್ಷಕ್ಕೆ ಪೂರಕ ವಾತಾವರಣ ಇದ್ದಂತಿಲ್ಲ.
ರಾಜಸ್ಥಾನದಲ್ಲಿ ತುಸುಮಟ್ಟಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ಇದ್ದರೂ, ಬಿಜೆಪಿ ರಾಜ್ಯ ನಾಯಕತ್ವದಲ್ಲಿನ ಆಂತರಿಕ ಭಿನ್ನಮತ ಮತದಾರರ ಒಲವು ಗಳಿಸುವಲ್ಲಿ ಅಡ್ಡಿಯಾದಂತಿದೆ. ತೆಲಂಗಾಣದಲ್ಲಿ ಭಾರತ್ ರಾಷ್ಟ್ರ ಸಮಿತಿ ಸರಕಾರದ ವಿರುದ್ಧ ಸಡ್ಡು ಹೊಡೆದು ಪಕ್ಷ ಸಂಘಟನೆ ಮಾಡಿಕೊಂಡು ಬರಲಾಗು ತ್ತಿದ್ದರೂ, ಅಲ್ಲೀಗ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ಬಿಜೆಪಿ ೩ನೇ ಸ್ಥಾನಕ್ಕೆ ತಳ್ಳಲ್ಪಟ್ಟರೂ ಅಚ್ಚರಿ ಯಿಲ್ಲ. ಛತ್ತೀಸ್‌ಗಡದಲ್ಲಂತೂ ಬಿಜೆಪಿ ಬಹುಮತ ಗಳಿಸುವುದು ದೂರದ ಮಾತು.
೨೦೨೪ರ ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ಹೇಳಲಾಗುತ್ತಿರುವ ಈ ಪಂಚರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿನ ಪ್ರತಿಕೂಲ ಫಲಿತಾಂಶಗಳು ಸದ್ಯಕ್ಕಂತೂ ಬಿಜೆಪಿಯನ್ನು ಆತಂಕಕ್ಕೆ ದೂಡಿದೆ. ಹೀಗಾಗಿ ಪ್ರಧಾನಿ ಮೋದಿ ವರ್ಚಸ್ಸಿನ ಮೇಲಿನ ಅವಲಂಬನೆ ಬಿಜೆಪಿಗೆ ಮಾರಕ ವಾಗುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಸ್ಥಳಿಯ ಮಟ್ಟದಲ್ಲಿ ಉಳಿಯದ ಸಂಘಟನೆ, ರಾಜ್ಯಗಳಲ್ಲಿ ಮರೆಯಾಗುತ್ತಿರುವ ವರ್ಚಸ್ವಿ ನಾಯಕರು, ಪಕ್ಷದ ಆಂತರಿಕ ಪ್ರಜಾಪ್ರಭುತ್ವದಲ್ಲಿನ ಕೊರತೆ, ಪ್ರತಿಯೊಂದಕ್ಕೂ ಕೇಂದ್ರದ ರಾಜಕೀಯ ತಂತ್ರಗಳನ್ನೇ ಎದುರು ನೋಡುವ ಸನ್ನಿವೇಶ, ಕೇಂದ್ರ ನಾಯಕತ್ವಕ್ಕೆ ವಸ್ತುಸ್ಥಿತಿ ವಿವರಿಸಬಲ್ಲ ಗಟ್ಟಿತನ ರಾಜ್ಯ ನಾಯಕರಿಗೆ ಇಲ್ಲದಿರುವುದು ಎಲ್ಲೆಡೆ ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ಈ ಹಿಂದೆ ಕಾಂಗ್ರೆಸ್‌ನಲ್ಲಿ ಇದ್ದಂಥ ‘ಹೈಕಮಾಂಡ್’ ಸಂಸ್ಕೃತಿಯೇ ಇಂದು ಬಿಜೆಪಿಯಲ್ಲೂ ತಲೆ ಎತ್ತಿದೆಯೇ ಎಂಬ ಚರ್ಚೆಗಳೂ ಮುನ್ನೆಲೆಗೆ ಬಂದಿವೆ. ಬಿಜೆಪಿಯೊಳಗಿನ ಪ್ರಬಲ ರಾಜ್ಯ ನಾಯಕರನ್ನು ಹಿನ್ನೆಲೆಗೆ ತಳ್ಳುವ ಪ್ರಯತ್ನಗಳು ಮಧ್ಯಪ್ರದೇಶ, ಛತ್ತೀಸ್‌ಗಡ, ರಾಜಸ್ಥಾನದಲ್ಲೂ ಆಗುತ್ತಿದೆ ಎನ್ನಲಾಗು ತ್ತಿದೆ. ಬಿಜೆಪಿಯ ಎಂದಿನ ‘ವಿಕೇಂದ್ರೀಕೃತ ಅಧಿಕಾರ ವ್ಯವಸ್ಥೆಯ ಪಕ್ಷ’ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ಅಪವಾದ ಕಂಡುಬಂದಿದೆ. ಮಾತ್ರವಲ್ಲ, ಸ್ಥಳೀಯ ನಾಯಕ ರಲ್ಲಿನ ಅಶಿಸ್ತು, ಅಧಿಕಾರ ದುರ್ಬಳಕೆ, ಅಸಮರ್ಥತೆ, ಭ್ರಷ್ಟಾಚಾರವೂ ಪಕ್ಷಕ್ಕೆ ಮುಳುವಾಗುತ್ತಿದೆ. ಸ್ಥಳೀಯ ನಾಯಕತ್ವ ಹಾಗೂ ಸಮಸ್ಯೆಗಳನ್ನು ಸಮತೂಲನಗೊಳಿಸಿ, ಪಕ್ಷ ವನ್ನು ರಾಜ್ಯಗಳಲ್ಲಿ ಮರುಸಂಘಟಿಸುವ ಕೆಲಸ ಬಿಜೆಪಿಯಿಂದ ಆಗಬೇಕಿದೆ.