ಸಿದ್ದ ಸೂತ್ರದ ಛೇದನ ಸುಲಭವಲ್ಲ
ಸಲಿಂಗ ಪ್ರೇಮವಿವಾಹಕ್ಕೆ ಭಾರತದಲ್ಲಿ ಕಾನೂನಿನ ಅಧಿಕೃತತೆ ಸಿಗಲಿದೆ ಎಂಬ ನಿರೀಕ್ಷೆ ಆ ಸಮುದಾಯದವರಲ್ಲಿ ಕೆನೆಗಟ್ಟಿತ್ತು. ಆದರೆ ಈ ವಿಷಯ ವನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ‘ವಿಶೇಷ ವಿವಾಹ ಕಾಯ್ದೆ’ಗೆ ಸಂಬಂಧಿಸಿ ನ್ಯಾಯಾಲಯವು ಕಾನೂನು ರೂಪಿಸಲಾಗದು, ಅದನ್ನು ವ್ಯಾಖ್ಯಾನಿ ಸಬಹುದಷ್ಟೇ. ಆದರೆ ಅದನ್ನು ಬದಲಿಸುವುದು ಬಿಡುವುದು ಸಂಸತ್ತಿಗೆ ಸಂಬಂಧಿಸಿದ್ದು ಎಂದಿದೆ.
ಜಗತ್ತಿನ ೩೪ಕ್ಕೂ ಹೆಚ್ಚು ದೇಶಗಳಲ್ಲಿ ಸಲಿಂಗ ಪ್ರೇಮವಿವಾಹವು ಕಾನೂನು ಸಮ್ಮತವಾಗಿರುವ ಹಿನ್ನೆಲೆಯಲ್ಲಿ ನಮ್ಮಲ್ಲೂ ಈ ಪರಿಕಲ್ಪನೆಗೆ ಕಾನೂನಿನ ಅಂಗೀಕಾರ ದಕ್ಕಬೇಕು ಎಂಬುದು ಬಹುಕಾಲದ ಬೇಡಿಕೆಯಾಗಿತ್ತು. ವಿಧವೆಯ ಮರುವಿವಾಹದ ಕಾನೂನನ್ನು ಈಗಾಗಲೇ ಒಪ್ಪಿಕೊಂಡಿರುವ ಭಾರತೀಯ ಸಮಾಜದಲ್ಲಿ ತಮ್ಮ ವಿವಾಹಕ್ಕೂ ಮಾನ್ಯತೆ ನೀಡಬೇಕು ಮತ್ತು ಸಲಿಂಗಿ ಕುಟುಂಬಗಳು ಭಿನ್ನಲಿಂಗೀಯ ಕುಟುಂಬಗಳಂತೆಯೇ ಸಾಮಾನ್ಯ ತಳಹದಿಯನ್ನು ಹೊಂದಿರುವಂಥವು ಎಂಬ ಜನಜಾಗೃತಿ ಮೂಡಿಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂಬುದು ಸಲಿಂಗಿಗಳ ವಾದವಾಗಿತ್ತು.
ಆದರೆ, ಆ ಎಲ್ಲ ದೇಶಗಳೊಂದಿಗೆ ತುಲನೆ ಮಾಡಿದಾಗ ಭೌಗೋಳಿಕವಾಗಿಯೂ, ಧಾರ್ಮಿಕವಾಗಿಯೂ ಮತ್ತು ಜೀವನಶೈಲಿಯ ನೆಲೆಯಲ್ಲೂ ತನ್ನದೇ ಆದ ಅಸ್ಮಿತೆಯನ್ನು ಹೊಂದಿರುವಂಥದ್ದು ಭಾರತೀಯ ಸಮಾಜ. ಇಲ್ಲಿ ಮದುವೆ ಎಂಬ ಪರಿಭಾಷೆ ಕಿವಿಗೆ ಬಿದ್ದಾಕ್ಷಣ ಮನದಲ್ಲಿ ಒಡಮೂಡುವುದೇ ‘ಒಂದು ಗಂಡಿಗೊಂದು ಹೆಣ್ಣು, ಹೇಗೋ ಸೇರಿ ಹೊಂದಿಕೊಂಡು’ ಎಂಬ ಚಿತ್ರಣ. ಪುರುಷ ಮತ್ತು ಮಹಿಳೆ ‘ಮಾತ್ರವೇ’ ಮದುವೆಯ ಪರಿಕಲ್ಪನೆಯ ‘ಸಹಜ’ ಫಲಾನುಭವಿಗಳು, ಸಲಿಂಗಿಗಳಿಗೆ ಅವಕಾಶ ನೀಡಿದರೆ ಅದು ‘ಅಸಹಜ’ ಬೆಳವಣಿಗೆಯಾಗಿ ಸಮಾಜಕ್ಕೆ ತಪ್ಪುಸಂದೇಶ ರವಾನೆಯಾಗುತ್ತದೆ ಎಂಬುದು ನಮ್ಮ ನೆಲದ ಮತ್ತು ಸರಕಾರದ ಸ್ಥಾಯೀಭಾವ.
ಇದನ್ನು ಬದಲಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಸಂತಾನವರ್ಧನೆ ಅಥವಾ ಪೀಳಿಗೆಯ ಮುಂದುವರಿಕೆಯೇ ಮುಖ್ಯ ಆಶಯವಾಗಿರುವ ಮದುವೆ ಎಂಬ ವ್ಯವಸ್ಥೆಯಲ್ಲಿ ಸಲಿಂಗಿಗಳ ವಿವಾಹಕ್ಕೆ ಮಾನ್ಯತೆ ನೀಡಿದರೆ ಮದುವೆಯ ಮೂಲೋದ್ದೇಶವೇ ಸೋಲುತ್ತದೆ ಎಂಬುದು ನಮ್ಮ ಸಮಾಜದಲ್ಲಿ ಕೆನೆಗಟ್ಟಿರುವ ವಾದ. ಹೀಗಾಗಿ ಸಲಿಂಗಿಗಳ ಸಮರ್ಥನೆಗೆ ಮಾನ್ಯತೆ ಸಿಗಲು ಕೊಂಚ ಕಾಲವಾಗಬಹುದು.