ಕ್ರಿಕೆಟೋದ್ಯಮದ ಕ್ಷಿತಿಜ ವಿಸ್ತಾರ
೧೨೩ ವರ್ಷಗಳ ಸುದೀರ್ಘ ಅವಧಿಯ ಬಳಿಕ ಒಲಿಂಪಿಕ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಸೇರ್ಪಡೆಯಾಗಿದೆ. ಟೆಸ್ಟ್ ಮ್ಯಾಚ್ ಗಳಷ್ಟೇ ಪ್ರಚಲಿತದಲ್ಲಿದ್ದ ಕಾಲ ದಲ್ಲಿ ದೀರ್ಘಸಮಯ ತಿನ್ನುತ್ತದೆಂದು ಕ್ರಿಕೆಟ್ ಅನ್ನು ಕೈಬಿಡಲಾಗಿತ್ತು. ಆದರೆ ಇದೀಗ ಟಿ೨೦ಯಂಥ ಚುಟುಕು ಕ್ರಿಕೆಟ್‌ನ ಜಮಾನ. ಹೀಗಾಗಿ ೨೦೨೮ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಕ್ರಿಕೆಟ್ ಆಟವನ್ನೂ ಸೇರ್ಪಡೆಗೊಳಿಸಿ ಅಂತಾರಾಷ್ಟ್ರೀಯ ಒಲಿಂಪಿಕ್ ಕೌನ್ಸಿಲ್ (ಐಒಸಿ) ಘೋಷಿಸಿದೆ.
ಕ್ರಿಕೆಟ್ ಸೇರಿದಂತೆ ಒಟ್ಟು ೫ ಆಟಗಳ ಸೇರ್ಪಡೆಯ ಪರವಾಗಿ ಐಒಸಿಯ ೧೪೧ನೇ ಅಧಿವೇಶನದಲ್ಲಿ ಸದಸ್ಯ ರಾಷ್ಟ್ರಗಳ ಪೈಕಿ ಎರಡನ್ನು ಹೊರತುಪಡಿಸಿ ಉಳಿದ ೯೭ ದೇಶಗಳೂ ಅನುಮೋದಿಸಿವೆ. ಒಲಿಂಪಿಕ್‌ಗೆ ಸೇರ್ಪಡೆಗೊಂಡ ಮಾತ್ರಕ್ಕೆ ಮಹತ್ತರ ಬದಲಾವಣೆ ಆಗಿಬಿಡುತ್ತದೆ ಎಂದೇನಲ್ಲ. ಅದರ ಹೊರತುಪಡಿಸಿಯೂ ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿ ವಿಶ್ವಕಪ್‌ಗೂ ಹೊಸದೇಶ ಸೇರ್ಪಡೆಗೊಳ್ಳುತ್ತಿದೆ. ಮೇಲಾಗಿ ಈಗಾಗಲೇ ಕ್ರಿಕೆಟ್, ಕೇವಲ ಆಟವಾಗಿ ಉಳಿಯದೇ ಬೃಹತ್ ಉದ್ಯಮವಾಗಿ ಬೆಳೆಯುತ್ತಿದೆ. ಐಪಿಎಲ್‌ನಂಥ ಹಲವು ಪ್ರಮುಖ ಕೌಂಟಿ ಸರಣಿಗಳಲ್ಲಿ ನಿರೀಕ್ಷೆಗೂ ಮೀರಿ ವಹಿವಾಟು ನಡೆಯುತ್ತಿದೆ.
ಮಾರುಕಟ್ಟೆ ಮೇಲೆ ಇದು ಗಣನೀಯ ಪ್ರಭಾವ ಬೀರುತ್ತಿದೆ. ಅಮೆರಿಕ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳಲ್ಲೂ ಇತ್ತೀಚೆಗೆ ಲೀಗ್ ಪಂದ್ಯಗಳ ಸ್ವರೂಪದಲ್ಲಿ ಕ್ರಿಕೆಟೋದ್ಯಮ ವಿಸ್ತರಿಸುತ್ತಿದೆ. ಇಂಥ ವೇಳೆ ಒಲಿಂಪಿಕ್‌ಗೆ ಸೇರ್ಪಡೆಯಿಂದ ಕ್ರೀಡಾವಲಯದ ವಿಸ್ತರಣೆಯಾಗುವುದರಲ್ಲಿ ಸಂಶಯವಿಲ್ಲ. ಗಮನಾರ್ಹಸಂಗತಿಯೆಂದರೆ ಕ್ರಿಕೆಟ್ ಮೊದಲಿಂದಲೂ ಸಂಭಾವಿತರ ಆಟವೆಂಬ ಹೆಗ್ಗಳಿಕೆ ಯನ್ನು ಹೊತ್ತು ಬಂದಿದೆ. ಒಲಿಂಪಿಕ್ ಇಡೀ ಭೂಮಂಡಲದ ದೇಶಗಳನಡುವಿನ ಸೌಹಾರ್ದ, ಶಾಂತಿಯ ಪ್ರತೀಕ. ಸಂಭಾವಿತತನ ಹಾಗೂ ಶಾಂತಿ- ಸೋದರತ್ವದ ಸಮ್ಮಿಳನದಿಂದಾಗಿ ಬೇರೆಯದೇ ಬಾಂಧವ್ಯಕ್ಕೆ ವೇದಿಕೆ ಸೃಷ್ಟಿಯಾಗುವುದು ನಿರೀಕ್ಷಿತ.
ಭಾರತದ ಮಟ್ಟಿಗೆ ಹೇಳುವುದಾದರೆ ಈಗಾಗಲೇ ಏಷ್ಯಾಡ್‌ನಲ್ಲಿ ಶ ತಕಗಳ ಗಡಿಮೀರಿ ನಮ್ಮ ಆಟಗಾರರು ಸಾಧನೆ ಮೆರೆಯುತ್ತಿದ್ದು, ಅದರಲ್ಲಿ ಕ್ರಿಕೆಟಿಗ ರದೂ ಬಹುದೊಡ್ಡ ಕೊಡುಗೆ ಇದೆ. ಒಲಿಂಪಿಕ್‌ಗೆ ಕ್ರಿಕೆಟ್ ಸೇರ್ಪಡೆ ಇದಕ್ಕೆ ಇನ್ನಷ್ಟು ಇಂಬುನೀಡಿದೆ. ದಾಖಲೆಗಳ ಸರದಾರ ರಾಗಿ ಮೆರೆಯುತ್ತಿರುವ  ನಮ್ಮ ಕ್ರಿಕೆಟಿಗರ ಎದುರು ಒಲಿಂಪಿಕ್ಸ್‌ನಿಂದ ಇನ್ನಷ್ಟು ಅವಕಾಶ ತೆರೆದುಕೊಂಡಂತಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಪರಿಧಿಯೂ ವಿಸ್ತರಿಸಿ, ಹೊಸ ಕ್ಷಿತಿಜಕ್ಕೆ ತೆರೆದುಕೊಳ್ಳುವುದು ಖಚಿತ.