ಸಕಾಲಕ್ಕೆ ವಿದ್ಯಾರ್ಥಿ ವೇತನ ಪಾವತಿಸಿ
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿ ವರ್ಷ ಸರಕಾರವು ವಿದ್ಯಾರ್ಥಿ ವೇತನ ನೀಡುತ್ತದೆ. ಲಕ್ಷಾಂತರ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನಗಳು ಶೈಕ್ಷಣಿಕ ವೆಚ್ಚಕ್ಕೆ ಪೂರಕವಾಗುತ್ತವೆ. ಆದರೆ ಈ ಬಾರಿ ಸಮಾಜ ಕಲ್ಯಾಣ ಇಲಾಖೆಯಡಿ ೨೦೨೨-೨೩ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದವರಿಗೆ ಅನುದಾನದ ಕೊರತೆಯಿಂದಾಗಿ ಇದುವರೆಗೂ ಹಣ ಪಾವತಿಯಾಗಿಲ್ಲ.
ಅರ್ಜಿ ಸಲ್ಲಿಸಿದ ಸಾವಿರಾರು ವಿದ್ಯಾರ್ಥಿಗಳು ಒಂದು ವರ್ಷ ದಿಂದ ಸರಕಾರದಿಂದ ಬರುವ ಹಣಕ್ಕಾಗಿ ಕಾಯುವಂತಾಗಿದೆ. ಪ್ರಸಕ್ತ ಸಾಲಿನ ವಿದ್ಯಾರ್ಥಿ ವೇತನಕ್ಕೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಈಗಾಗಲೇ ಎಸ್‌ಎಸ್‌ಪಿ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಕಳೆದ ವರ್ಷದ ಹಣ ಬಿಡುಗಡೆಯಾಗದಿರುವುದು ವಿದ್ಯಾರ್ಥಿಗಳನ್ನು ಕಂಗಾಲಾಗಿಸಿದೆ. ವಿದ್ಯಾರ್ಥಿ ವೇತನ ಬಿಡುಗಡೆಯಾಗದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಎರಡನೇ ವರ್ಷದ ಪ್ರವೇಶಾತಿಯ ಶುಲ್ಕ ಪಾವತಿಗೂ ತೊಂದರೆ ಯಾಗುತ್ತಿದೆ. ದೂರದ ಹಳ್ಳಿಗಳಿಂದ ಬಂದು ಹಾಸ್ಟೆಲ್ ಪ್ರವೇಶ ಸಿಗದೆ ಬಾಡಿಗೆ ರೂಮ್ ಪಡೆದು ವಿದ್ಯಾಭ್ಯಾಸ ಮುಂದುವರಿಸುತ್ತಿರುವವರು ಬಾಡಿಗೆ ಹಣ ಹೊಂದಿಸಲು ಹರಸಾಹಸ ಪಡುತ್ತಿದ್ದಾರೆ. ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳೂ ಕಳೆದ ೮-೧೦ ತಿಂಗಳಿನಿಂದ ವಿದ್ಯಾರ್ಥಿ ವೇತನ ಜಮೆಯಾಗಿಲ್ಲ. ಸಂಶೋಧನೆಗಾಗಿ ಇರುವ ಹತ್ತಾರು ರೀತಿಯ ಖರ್ಚುಗಳನ್ನು ಹೊಂದಿಸಲು ಸಂಶೋಧನಾ ವಿದ್ಯಾರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಜಾರಿ ಎಷ್ಟು ಮುಖ್ಯವೋ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯೂ ಅಷ್ಟೇ ಮುಖ್ಯ.
ಗ್ಯಾರಂಟಿಯ ಜಪ ಮಾಡುತ್ತಾ ಶಿಕ್ಷಣಕ್ಕೆ ಅಗತ್ಯವಾಗಿ ಬೇಕಾದ ಸೌಲಭ್ಯ ಗಳನ್ನು ನೀಡುವುದನ್ನು ಸರಕಾರ ಮರೆಯಬಾರದು, ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷಿಸಬಾರದು. ವಿದ್ಯಾರ್ಥಿಗಳಿಗೆ ಸಿಗಬೇಕಾದ ವಿದ್ಯಾರ್ಥಿ ವೇತನವನ್ನು ಕೊಡಿಸುವ ನಿಟ್ಟಿನಲ್ಲಿ ಸರಕಾರ ಕೂಡಲೇ ಕ್ರಮ ಕೈಗೊಂಡು ಬಡ ವಿದ್ಯಾರ್ಥಿ ಗಳಿಗೆ ಆಗುತ್ತಿರುವ ಅನಾನುಕೂಲವನ್ನು ಸರಿಪಡಿಸಬೇಕು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಧಾರವಾಗುವ ವಿದ್ಯಾರ್ಥಿವೇತನವನ್ನು ಸರಕಾರ ಸರಿಯಾದ ಸಮಯಕ್ಕೆ ಪಾವತಿಸುವ ಸೂಕ್ತ ವ್ಯವಸ್ಥೆಯನ್ನು ಮಾಡಬೇಕು.