ವಿದ್ಯುತ್ ಅಭಾವ ನೀಗಿಸಿ
ಮಳೆ ಅಭಾವದ ಕಾರಣ ರಾಜ್ಯದ ಎಡೆ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಜಲಾಶಯಗಳು ಬರಿದಾಗಿವೆ. ಮಳೆಯಾಶ್ರಿತ ಪ್ರದೇಶಗಳ ಬೆಳೆಗಳು ಪೂರ್ಣವಾಗಿ ಒಣಗಿವೆ. ನೀರಾವರಿ ಪ್ರದೇಶದ ತೋಟಗಾರಿಕಾ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಲೋಡ್ ಶೆಡ್ಡಿಂಗ್ ಶುರುವಾಗಿದ್ದು, ರೈತರ ಕೃಷಿ ಪಂಪ್‌ಸೆಟ್‌ ಗಳಿಗೆ ಅಗತ್ಯವಿದ್ದಷ್ಟು ವಿದ್ಯುತ್ ಪೂರೈಕೆಯಾಗುತ್ತಿಲ್ಲ.
ಹೀಗಾಗಿ ರೈತ ಸಮುದಾಯ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಪ್ರಸ್ತುತ ೧೬ ಸಾವಿರ ಮೆಗಾವಾಟ್‌ಗೆ ಬೇಡಿಕೆ ಇದೆ. ರಾಜ್ಯದ ಒಟ್ಟು ಉತ್ಪಾದನಾ ಸಾಮರ್ಥ್ಯ ೩೨ ಸಾವಿರ ಮೆಗಾವಾಟ್‌ನಷ್ಟಿದೆ. ಹಾಗಿದ್ದರೂ ಜಲಾಶಯಗಳಲ್ಲಿ ನೀರಿನ ಕೊರತೆ, ಕಲ್ಲಿದ್ದಲು ಪೂರೈಕೆಯ ವ್ಯತ್ಯಯ, ಕಳಪೆ ಉತ್ಪಾದನೆ, ನಿರ್ವಹಣಾ ಸಾಮರ್ಥ್ಯ ಮತ್ತಿತರ ಕಾರಣಗಳಿಂದ ಉತ್ಪಾದನೆ ೧೦ ಸಾವಿರ ಮೆಗಾವಾಟ್ ದಾಟಿಲ್ಲ. ಉತ್ಪಾದನೆಯಾದ ವಿದ್ಯುತ್‌ನ ಹೆಚ್ಚಿನ ಪಾಲನ್ನು ಕೈಗಾರಿಕೆಗಳಿಗೆ ಪೂರೈಸುತ್ತಿದೆ.
ನಿಯಮದಂತೆ ಕೃಷಿ ಪಂಪ್‌ಸೆಟ್ ಗಳಿಗೆ ನಿತ್ಯ ೭ ತಾಸು ತ್ರೀ-ಸ್ ವಿದ್ಯುತ್ ಪೂರೈಸಬೇಕು. ಆದರೆ ವಿದ್ಯುತ್ ಅಭಾವ ತೀವ್ರಗೊಂಡ ಹಿನ್ನೆಲೆಯಲ್ಲಿ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು ಎರಡು ತಾಸು ಮಾತ್ರ ವಿದ್ಯುತ್ ಪೂರೈಸುತ್ತಿವೆ. ಲೋಡ್ ಸೆಟ್ಟಿಂಗ್ ಕಾರಣ ಪದೇ ಪದೆ ವಿದ್ಯುತ್ ಸಂಪರ್ಕ ಕಡಿತ ಗೊಳಿಸುವುದರಿಂದ ಪಂಪ್‌ ಸೆಟ್‌ಗಳು ಕೆಟ್ಟು ಹೋಗುತ್ತಿವೆ. ಕೆಆರ್‌ಪಿ ಕಾನೂನಿನ ಪ್ರಕಾರ ೭೨ ಗಂಟೆಗಳಲ್ಲಿ ಕೆಟ್ಟು ನಿಂತ ಟಿಸಿಗಳು ದುರಸ್ತಿ ಯಾಗಬೇಕು ಅಥವಾ ಬದಲಿ ಟಿಸಿ ಅಳವಡಿಕೆ ಮಾಡಬೇಕು. ಆದರೆ ಅಧಿಕಾರಿಗಳು ರೈತರಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಆದ್ದರಿಂದ ವಿದ್ಯುತ್ ಅಭಾವ ನೀಗಿಸುವಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು.
ವಿದ್ಯುತ್ ಪರಿವರ್ತಕಗಳಿಗೆ ಅಳವಡಿಕೆಗಾಗಿ ಅರ್ಜಿ ಸಲ್ಲಿಸುವ ರೈತರ ಪಂಪ್ ಸೆಟ್‌ಗಳಿಗೆ ತ್ವರಿತವಾಗಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಬೇಕು. ರಾಜ್ಯ ಸರಕಾರ ಕೇವಲ ಯೋಜನೆಗಳನ್ನು ಜಾರಿಗೆ ತಂದರಷ್ಟೇ ಸಾಲದು, ಅದನ್ನು ಸಮರ್ಥವಾಗಿ ಅಧಿಕಾರಿಗಳು ಜಾರಿಗೆ ತಂದಿದ್ದಾರೆಯೇ? ಯೋಜನೆ ಯ ಉಪಯೋಗ ಅರ್ಹರಿಗೆ ತಲುಪುತ್ತಿದೆಯೇ? ಎಂಬುದರ ಬಗ್ಗೆಯೂ ಗಮನ ಹರಿಸಬೇಕಿದೆ. ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಶೀಘ್ರದಲ್ಲಿಯೇ ಸರಕಾರ ಸೂಕ್ತ ವ್ಯವಸ್ಥೆ ಮಾಡಬೇಕು.